ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಿಗ್ಗೆ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಪ್ಯಾರಿಸ್ ಭೇಟಿಯಲ್ಲಿ ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ – ಫ್ರಾನ್ಸ್ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸಲಿದ್ದಾರೆ.
ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಲಿದ್ದಾರೆ, ಅಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಪರೇಡ್‌ನಲ್ಲಿ ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ಮೂರು ರಫೇಲ್ ಫೈಟರ್ ಜೆಟ್‌ಗಳು ತಾಲೀಮು ನಡೆಸಲಿವೆ.
ಫ್ರಾನ್ಸ್‌ಗೆ ತೆರಳುವ ಮೊದಲು, ದೀರ್ಘಾವಧಿಯ ಮತ್ತು ಸಮಯ ಪರೀಕ್ಷಿತ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಫ್ರೆಂಚ್ ಅಧ್ಯಕ್ಷರೊಂದಿಗೆ ವ್ಯಾಪಕ ಚರ್ಚೆ ನಡೆಸುವುದಾಗಿ ಪ್ರಧಾನಿ ಮೋದಿ ಹೇಳಿದರು.
ಬಾಸ್ಟಿಲ್ ಡೇ ಪೆರೇಡ್ ಭಾರತ – ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಂಬಂಧದ 25ನೇ ವರ್ಷಾಚರಣೆಯೂ ಆಗಿರುವುದರಿಂದ, ಆಳವಾದ ನಂಬಿಕೆ ಮತ್ತು ಬದ್ಧತೆಯಿಂದ ಬೇರೂರಿರುವ ನಮ್ಮ ಎರಡು ದೇಶಗಳು ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ಆರ್ಥಿಕತೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಸಂಸ್ಕೃತಿ ಮತ್ತು ಜನರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತೇವೆ. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಫ್ರಾನ್ಸ್ ಭೇಟಿ ಬಳಿಕ ಜು.15 ರಂದು ಮೋದಿ ಯುಎಇಗೆ ತೆರಳಲಿದ್ದಾರೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್‌ರನ್ನು ಅಬುಧಾಬಿಯಲ್ಲಿ ಭೇಟಿ ಮಾಡಲಿದ್ದಾರೆ.