Advertisement

ಮೋದಿ ಲಡಾಖ್ ಭೇಟಿ ಗೌಪ್ಯವಾಗಿ ಇಟ್ಟಿದ್ದೇಕೆ?11ಸಾವಿರ ಅಡಿ ಎತ್ತರದಲ್ಲಿ ಚರ್ಚೆ, ಚೀನಾ ಕಂಗಾಲು

01:08 PM Jul 03, 2020 | Nagendra Trasi |

ನವದೆಹಲಿ:ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿದ್ದು, ಗಡಿಯಲ್ಲಿನ ಉದ್ವಿಗ್ನ ಸ್ಥಿತಿ ಪರಿಹರಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಏತನ್ಮಧ್ಯೆ 20 ಭಾರತೀಯ ಸೈನಿಕರು ಹುತಾತ್ಮರಾಗಿ, ಹಲವು ಸೈನಿಕರು ಗಾಯಗೊಂಡ ಘಟನೆ ನಡೆದು ಎರಡು ವಾರಗಳ ನಂತರ ದಿಢೀರ್ ಅಂತ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಡಾಖ್ ಗೆ ಭೇಟಿ ನೀಡಿದ್ದಾರೆ.

Advertisement

ಬರೋಬ್ಬರಿ 11 ಸಾವಿರ ಅಡಿ ಎತ್ತರದಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಸಂಘರ್ಷದ ಕುರಿತ ವಿವರ ಹಾಗೂ ಪ್ರಸ್ತುತ ಚೀನಾ ಸೇನೆಯ ಚಲನವಲನದ ಬಗ್ಗೆ ಮಾಹಿತಿ ಪಡೆದಿರುವುದಾಗಿ ವರದಿ ವಿವರಿಸಿದೆ. ಅಷ್ಟೇ ಅಲ್ಲ ಸೇನಾ ಕಾರ್ಯಾಚರಣೆ ಕುರಿತ ತಂತ್ರಗಾರಿಕೆಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ವರದಿ ಹೇಳಿದೆ.

ಪ್ರಧಾನಿ ಮೋದಿ ಭೇಟಿ ಗೌಪ್ಯವಾಗಿ ಇಟ್ಟಿದ್ದೇಕೆ?
ಗಡಿ ಪ್ರದೇಶವಾದ ಲಡಾಖ್, ಲೇಹ್ ಗೆ ಸಿಡಿಎಸ್ ಬಿಪಿನ್ ರಾವತ್ ಅವರು ಮಾತ್ರ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಎಲ್ಲಿಯೂ ಪ್ರಧಾನಿ ಅವರು ಭೇಟಿ ನೀಡಲಿದ್ದಾರೆ ಎಂಬ ಸುಳಿವು ಬಹಿರಂಗವಾಗಿರಲಿಲ್ಲವಾಗಿತ್ತು. ನಿಗದಿತ ಪೂರ್ವ ತಯಾರಿಯೊಂದಿಗೆ ಶುಕ್ರವಾರ ಬೆಳಗ್ಗೆ 8.15ಕ್ಕೆ ರಾವತ್ ಅವರ
ಜತೆಗೆ ಪ್ರಧಾನಿ ಮೋದಿ ಅವರು ಲೇಹ್ ಗೆ ಭೇಟಿ ನೀಡಿದ್ದಾರೆ. ಈ ದಿಢೀರ್ ಭೇಟಿಯಿಂದ ಬೀಜಿಂಗ್ ಕೂಡಾ ಮತ್ತಷ್ಟು ಕಂಗಾಲಾಗುವಂತೆ ಮಾಡಿರುವುದಾಗಿ ವರದಿ ವಿವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಿಂದ ಪೂರ್ವ ಲಡಾಖ್ ನಲ್ಲಿರುವ ಭಾರತೀಯ ಯೋಧರ ಆತ್ಮಸ್ಥೈರ್ಯ ಇನ್ನಷ್ಟು ಹೆಚ್ಚಳವಾಗಿದೆ. ಲಡಾಖ್, ಲೇಹ್ ಗೆ ಮೋದಿ ಭೇಟಿ ನೀಡುವ ಮೂಲಕ ಭಾರತದ ಜತೆಗಿನ ಪಿಎಲ್ ಎ(ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ) ಸಂಘರ್ಷವನ್ನು ಭಾರತ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.

Advertisement

ಸದ್ಯಕ್ಕೆ ಗಡಿ ಉದ್ವಿಗ್ನ ಪರಿಸ್ಥಿತಿ ನಿಲ್ಲೋದಿಲ್ಲ:
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಪ್ರಕಾರ, ಗಡಿಯಲ್ಲಿ ಕ್ಷಿಪ್ರವಾಗಿ ಉದ್ವಿಗ್ನ ಸ್ಥಿತಿಯ ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ತುಂಬಾ ಸಮಯ ಹಿಡಿಯುತ್ತದೆ. ಅಷ್ಟೇ ಅಲ್ಲ ಎರಡು ಸರ್ಕಾರಗಳ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳುವ ಮನಸ್ಥಿತಿಯಲ್ಲಿ ಪಿಎಲ್ ಎ ಕೂಡಾ ಇಲ್ಲ. ಇದರ ಜತೆಗೆ ಶಾಂತಿ, ಉದ್ವಿಗ್ನ ಪರಿಸ್ಥಿತಿ ಶಮನ ಹಾಗೂ ಗಾಲ್ವಾನ್, ಗೋರ್ಗಾ, ಹಾಟ್ ಸ್ಪ್ರಿಂಗ್ಸ್, ಪ್ಯಾಂಗಾಂಗ್, ತ್ಸೋ ಪ್ರದೇಶದಲ್ಲಿನ ಪಿಎಲ್ ಎ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳಲಿದೆ. ಅಲ್ಲದೇ ಇದೊಂದು ಗಂಭೀರವಾದ ಮನವೊಲಿಕೆ ಘಟನೆಯಾಗಿದೆ ಎಂದು ತಿಳಿಸಿದೆ.

ಮತ್ತೊಂದೆಡೆ ಗಾಲ್ವಾನ್ ನದಿ ಕಣಿವೆ ಪ್ರದೇಶ ಮತ್ತು ಪ್ಯಾಂಗಾಂಗ್ ತ್ಸೋ ಪ್ರದೇಶದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಮೂಲಭೂತ ಸೌಕರ್ಯವನ್ನು ಮೇಲ್ದರ್ಜೆಗೇರಿಸುತ್ತಿದೆ ಎಂದು ಮಿಲಿಟರಿ ಕಮಾಂಡರ್ ಗಳು ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಚೀನಾದ ಯಾವುದೇ ರೀತಿಯ ದಾಳಿಯನ್ನು ಎದುರಿಸುವ ನೆಲೆಯಲ್ಲಿ ಭಾರತೀಯ ಸೇನೆ, ವಾಯುಸೇನೆ ಸಜ್ಜಾಗಿ ನಿಂತಿರುವುದಾಗಿ ವರದಿ ತಿಳಿಸಿದೆ.

ಭಾರತದ ನಡೆಗೆ ಚೀನಾ ದಂಗು!
ಗಡಿ ಉದ್ವಿಗ್ನ ಪರಿಸ್ಥಿತಿ ನಡುವೆ ಪ್ರಧಾನಿ ನರೇಂದ್ರ ಮೋದಿ ಲಡಾಖ್ ಗೆ ದಿಢೀರ್ ಭೇಟಿ ನೀಡಿರುವುದು ಚೀನಾಕ್ಕೂ ಅಚ್ಚರಿ ಮೂಡಿಸಿರುವ ಜತೆಗೆ ಕಂಗಾಲಾಗುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗಡಿ ವಿಚಾರದಲ್ಲಿ ಭಾರತ ಕೂಡಾ ಹಿಂದೆ ಸರಿಯದೇ ಎಲ್ಲಾ ರೀತಿಯ ಸಿದ್ಧತೆಗೆ ತೊಡಗಿದೆ ಎಂಬ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ. ಹೀಗಾಗಿ ಮೋದಿ ಭೇಟಿ ಚೀನಾಕ್ಕೆ ಮತ್ತೊಂದು ಮರ್ಮಾಘಾತ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next