ತಿರುವನಂತಪುರಂ: ತಿರುವನಂತಪುರಂ- ಕಾಸರಗೋಡು ನಡುವಿನ ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದ್ದಾರೆ.
ಇದೇ ವೇಳೆ ರೈಲಿನ ಕೋಚ್‌ವೊಂದರಲ್ಲಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ವಂದೇ ಭಾರತ್ ರೈಲು ತಿರುವನಂತಪುರ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್ ,ಕಣ್ಣೂರು ಮತ್ತು ಕಾಸರಗೋಡು ಹೀಗೆ 11 ಜಿಲ್ಲೆಗಳ ನಡುವೆ ಹಾದುಹೋಗಲಿದೆ.
ವಂದೇ ಭಾರತ್, ತಿರುವನಂತಪುರಂನಿಂದ ಕಾಸರಗೋಡಿಗೆ ಸೆಮಿ ಹೈಸ್ಪೀಡ್ ರೈಲು ಎರಡು ಸ್ಥಳಗಳ ನಡುವಿನ ಅಂತರವನ್ನು ಸುಮಾರು ಎಂಟು ಗಂಟೆಗಳಲ್ಲಿ ಕ್ರಮಿಸುತ್ತದೆ, ಇದರಿಂದಾಗಿ ಸರಾಸರಿ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಷ್ಟು ಕಡಿಮೆ ಮಾಡುತ್ತದೆ.
ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ಕೇರಳ ಸೆಂಟ್ರಲ್ ಸ್ಟೇಡಿಯಂನಲ್ಲಿ ಕೊಚ್ಚಿ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿ ದೇಶದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್,ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಉಪಸ್ಥಿತರಿದ್ದರು.
ಮಂಗಳವಾರ ಬೆಳಗ್ಗೆ ಕೊಚ್ಚಿಯಿಂದ ಮೋದಿ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಅವರನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಆದ್ದೂರಿ ಸ್ವಾಗತ ನೀಡಿದರು.ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರಗೆ ರೋಡ್ ಶೋ ಮೂಲಕ ಪ್ರಧಾನಿ ಮೋದಿ ಆಗಮಿಸಿದರು.