ಗುಜರಾತ್: ಸೈನಿಕರಿಗೆ ಸಿಹಿ ತಿನ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಆಚರಿಸಿಕೊಂಡರು.
ಗುರುವಾರ(ಅ.31) ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಗುಜರಾತ್‌ನ ಕಛ್ ಗೆ ಭೇಟಿ ನೀಡಿದ ಪ್ರಧಾನಿ ಅಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದರು.
ಪ್ರಧಾನಿ ಜೊತೆ ಸೈನಿಕರು ದೀಪಾವಳಿ ಆಚರಿಸಿ ಸಂಭ್ರಮಿಸಿದರು. ಈ ವೇಳೆ ಪ್ರಧಾನಿ ಬಿಎಸ್‌ಎಫ್ ಯೋಧರನ್ನು ಶ್ಲಾಘಿಸಿದರು. ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. 2022 ರಲ್ಲಿ, ಪ್ರಧಾನಿ ಮೋದಿ ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಈ ವೇಳೆ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಇದು 11ನೇ ಬಾರಿ.
ಕಛ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಇಲ್ಲಿನ ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾಕ್ಕೆ ಭೇಟಿ ನೀಡಿ ಇಲ್ಲಿನ ಸೇನಾ ಜವಾನರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಲಕ್ಕಿ ನಾಲಾ ಪ್ರದೇಶವು ಸರ್ ಕ್ರೀಕ್‌ನ ಒಂದು ಭಾಗವಾಗಿದೆ. ಜೌಗು ಪ್ರದೇಶದಿಂದ ಕೂಡಿರುವ ಪ್ರದೇಶದಲ್ಲಿ ಗಸ್ತು ಕಾರ್ಯಾಚರಣೆ ನಡೆಸುವುದು ತುಂಬಾ ಸವಾಲಿನ ಸಂಗತಿ. ಈ ಪ್ರದೇಶವು ಗಡಿ ಭದ್ರತಾ ಪಡೆ (ಬಿಎಸ್ಎಫ್) ನ ಕಣ್ಗಾವಲಿನಲ್ಲಿದ್ದು, ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರು ಆಗಾಗ್ಗೆ ಭಾರತದೊಳಗೆ ನುಸುಳಲು ಈ ಜಾಗವನ್ನೇ ಹೆಚ್ಚಾಗಿ ಬಳಸುತ್ತಾರೆ.
ಇದನ್ನೂ ಓದಿ: ByPoll: ಷಡ್ಯಂತ್ರದಿಂದ ಪೆಟ್ಟು ತಿಂದೆ…: ಪ್ರಚಾರದ ವೇಳೆ ಕಣ್ಣೀರಿಟ್ಟ ನಿಖಿಲ್ ಕುಮಾರಸ್ವಾಮಿ