Advertisement

Deepavali: ಕುಂಬಾರ ಸಮುದಾಯಕ್ಕೆ ಹಣತೆಗಳಿಂದ ಸ್ವಾವಲಂಬನೆಯ ಬೆಳಕು

01:46 AM Oct 31, 2024 | Team Udayavani |

ಕುಂದಾಪುರ: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಹೀಗಾಗಿ ದೀಪಗಳಿಗೇ ಮಹತ್ವ. ಹಿಂದಿನಿಂದಲೂ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದೇ ಸಂಭ್ರಮ. ಮಧ್ಯೆ ಪಿಂಗಾಣಿ, ಪ್ಲಾಸ್ಟಿಕ್‌ ಹಣತೆಗಳು, ಕ್ಯಾಂಡಲ್‌ಗ‌ಳು ಬಂದಿರಬಹುದು. ಆದರೀಗ ಮತ್ತೆ ಹಬ್ಬಕ್ಕೆ ಕಳೆ ತಂದು ಕೊಡುತ್ತಿರುವುದೇ ಈ ಪ್ರಣತಿಗಳು.
ಇದು ಬರೀ ಸಂಸ್ಕೃತಿಯ ಬೆಳ ಕಷ್ಟೇ ಅಲ್ಲ; ಬದುಕಿಗೂ ಬೆಳಕು. ಆಧುನಿಕತೆಯ ಭರಾಟೆಯಲ್ಲಿ ಕತ್ತಲೆಗೆ ಸರಿದಿದ್ದ ಕುಂಬಾರ ಸಮುದಾಯದವರ ಬದುಕಿಗೂ ಬೆಳಕು ಹರಿಯತೊಡಗಿದೆ.

Advertisement

ಅದೊಂದು ಕಾಲದಲ್ಲಿ ದೀಪಾವಳಿ ಬಂತೆಂದರೆ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ಅಕ್ಷರಶಃ ಸಂಭ್ರಮ. ಅದು ಪುನರಾವರ್ತನೆಯಾಗುವ ಲಕ್ಷಣ ಗೋಚರಿಸಿದೆ. ಜನರು ಮತ್ತೆ ನಿಧಾನಕ್ಕೆ ಮಣ್ಣಿನ ಹಣತೆಗಳತ್ತ ಮುಖ ಮಾಡಿರುವುದು ಕುಂಬಾರರಿಗೆ ಕುಲ ಕಸುಬು ಉಳಿದೀತೆಂಬ ನಿರೀಕ್ಷೆ ಹೆಚ್ಚತೊಡಗಿದೆ.
ಆಲೂರಿನ ರಘುರಾಮ್‌ ಕುಲಾಲರು 23 ವರ್ಷಗಳಿಂದಲೂ ಮಣ್ಣನ್ನೇ ಆಧಾರವಾಗಿಟ್ಟುಕೊಂಡು, ಕುಲ ಕಸುಬು, ಸ್ವಯಂ ಉದ್ಯೋಗದ ಮೂಲಕ ಜೀವನ, ಕುಟುಂಬ ನಿರ್ವಹಣೆಗೆ ಅಗತ್ಯವಾದ ಹಣ ಸಂಪಾದನೆ, ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂಬುದನ್ನು ತೋರಿಸಿದವರು.

ರಘುರಾಮ ಕುಲಾಲ್‌ ಅವರು ಪಾರಂಪರಿಕಾ ಕುಂಬಾರಿಕೆ ವೃತ್ತಿ ಯನ್ನೇ ನಂಬಿದವರು. ಹಿಂದೆ ಅವರ ಸಮುದಾಯದವರೆಲ್ಲರೂ ಈ ಕುಲಕಸುಬನ್ನು ನೆಚ್ಚಿದ್ದರು. ಕಾಲ ಕ್ರಮೇಣ ಮಣ್ಣಿನ ವಸ್ತುಗಳಿಗೆ ಬೇಡಿಕೆ ಕಡಿಮೆಯಾಯಿತು. ಅವರೆಲ್ಲ ತಮ್ಮ ಮೂಲ ಕಸುಬು ತೊರೆದು, ಅನ್ಯ ಉದ್ಯೋಗ ವನ್ನು ಆಶ್ರಯಿಸಿದರು. ರಘುರಾಮ ಅವರು ಸಹ ಕುಂಬಾರಿಕೆ ವೃತ್ತಿಯಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದರು. ಆದರೆ ಕುಲ ಕಸುಬನ್ನು ಬಿಡಲಿಲ್ಲ.

ಸೆಲ್ಕೋ ಸಂಸ್ಥೆಯ ಸಹಕಾರ ದೊಂದಿಗೆ ಹಿಂದಿನ ಹಳೆಯ ಕೈ ಕಸುಬಿನ, ಕಾಲಿನಿಂದ ತುಳಿದು ಮಣ್ಣು ಮಿಶ್ರಣ, ಹದ ಮಾಡುವ ಬದಲು, ಸೌರ ಚಾಲಿತ ಯಂತ್ರಗಳನ್ನು ಬಳಸಿ, ವಿವಿಧೆಡೆ ತರಬೇತಿಗಳನ್ನು ಪಡೆದು, ಮಣ್ಣಿನ ಅಲಂಕಾರಿಕಾ ವಸ್ತುಗಳನ್ನು ತಯಾರಿಸುವಲ್ಲಿ ನೈಪುಣ್ಯವನ್ನು ಗಳಿಸಿದರು ರಘುರಾಮರು.
ಆಲೂರಿನಲ್ಲಿ ಗುರುವಂದನಾ ಪಾಟರಿ ಪ್ರಾಡಕ್ಟ್$Õ ಎಂಬ ಸಂಸ್ಥೆಯನ್ನು ಆರಂಭಿಸಿ, ಆ ಮೂಲಕ ಒಂದಷ್ಟು ಜನರಿಗೆ ಉದ್ಯೋಗವನ್ನೂ ಕಲ್ಪಿಸಿದರು. ಅಲ್ಲಿ ತಯಾರಿಸಲಾದ ಉತ್ಪನ್ನಗಳಿಗೂ ಮಾರುಕಟ್ಟೆ ಕಂಡುಕೊಂಡರು. ಈ ಸಾಂಪ್ರದಾಯಿಕ ವೃತ್ತಿಯ ಉಳಿವಿಗೆ ವಿವಿಧೆಡೆ ತೆರಳಿ ಆಸಕ್ತರಿಗೆ ತರಬೇತಿ ನೀಡುತ್ತಿರುವುದು ವಿಶೇಷ.

“ನನಗೆ ಇದು ಪೂರ್ವಜರಿಂದ ಬಂದ ಕೊಡುಗೆ. ವೃತ್ತಿ ರೂಪದಲ್ಲಿ ಬಂದಿದೆ. 7 ನೇ ತರಗತಿ ಬಿಟ್ಟು, ಹೋಟೆಲ್‌ ಕೆಲಸಕ್ಕೆ ಸೇರಿದ್ದೆ. ತಂದೆ ತೀರಿದ ನಂತರ ಅನಿವಾರ್ಯವಾಗಿ ಈ ಕಸುಬನ್ನು ಒಪ್ಪಿಕೊಂಡೆ. ಆರಂಭದ 7-8 ವರ್ಷ ಸಂಕಷ್ಟವೇ. ಶ್ರಮಪಟ್ಟು ಮುನ್ನಡೆದೆ. ಈಗ ಖುಷಿಯೂ ಇದೆ, ನಮ್ಮ ಪೂರ್ವಜರ ಪರಂಪರೆಯನ್ನು ಮುಂದುವರಿಸಿದ ಸಮಾಧಾನವೂ, ಆತ್ಮ ತೃಪ್ತಿಯೂ ಇದೆ. ನನ್ನ ಇಂದಿನ ಬೆಳವಣಿಗೆಗೆ ಹಲವು ಸಂಘ-ಸಂಸ್ಥೆಗಳ ಸಹಕಾರವನ್ನು ಮರೆಯುವಂತಿಲ್ಲ. ಐದಾರು ಮಂದಿಗೆ ಉದ್ಯೋಗವನ್ನೂ ನೀಡಲು ಸಾಧ್ಯವಾಯಿತು. ಇದಕ್ಕೆ ಯುವಕರ ಮನಸ್ಸನ್ನು ಸೆಳೆಯಬೇಕಿದೆ ಎನ್ನುತ್ತಾರೆ ಅವರು.

Advertisement

ಅತ್ಯುತ್ತಮ ಮಾರುಕಟ್ಟೆ
ಒಂದು ಮಣ್ಣಿನ ವಸ್ತು ರೂಪಿಸಲು ಅದರ ಬೆಲೆಯ ಶೇ. 40 ರಷ್ಟು ವೆಚ್ಚವಾಗುತ್ತದೆ. ಉಳಿದದ್ದು ಗಳಿಕೆ. ಬೇರೆ ಯಾರದೋ ಕೈ ಕೆಳಗೆ ದುಡಿಯುವುದಕ್ಕಿಂತ ನಮ್ಮ ಸ್ವಂತ ಉದ್ದಿಮೆಯೇ ಒಳ್ಳೆಯದು. ಒಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಅವಕಾಶವೂ ಇದು ಎನ್ನುತ್ತಾರೆ ಕುಲಾಲರು. ದೀಪಾವಳಿ ಸಂದರ್ಭಗಳಲ್ಲಿ ಮೊದಲು 7-8 ಸಾವಿರ ಹಣತೆಗಳಿಗೆ ಬೇಡಿಕೆ ಇರುತ್ತಿತ್ತ. ಈಗ ಪ್ರತೀ ವರ್ಷ 10-12 ಸಾವಿರ ಹಣತೆಗಳಿಗೆ ಬೇಡಿಕೆ ಇದೆ.

ದೇವಸ್ಥಾನಗಳು, ಮನೆಗಳು, ಅಂಗಡಿಯವರಿಂದಲೂ ಬೇಡಿಕೆ ಬರುತ್ತದೆ. ಈ ಕುಲ ಕಸುಬಿಗೆ ಸರಕಾರದ ಸಹಕಾರ ಅಗತ್ಯವಿದೆ ಎನ್ನುತ್ತಾರೆ ಅವರು. ಕುಲಕಸುಬು ಚೆನ್ನಾಗಿದೆ. ಆದರೆ ಆ ಹಿಂದಿನ ಕೊಂಡಿ ತಪ್ಪಿ ಹೋಗಿದೆ. ಅದನ್ನು ಮತ್ತೆ ಜೋಡಿಸುವ ಕಾರ್ಯ ಆಗಬೇಕಾಗಿದೆ ಎನ್ನುತ್ತಾರೆ ರಘುರಾಮ ಕುಲಾಲರು.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next