ವಾರಣಾಸಿ: ದೇಗುಲ ನಗರದಲ್ಲಿ ಚುನಾವಣಾ ಪ್ರಚಾರದ ಕಾವು ತೀವ್ರವಾಗಿ ಏರ ತೊಡಗಿದ್ದು, ಶನಿವಾರ ರೋಡ್ ಶೋಗಳದ್ದೇ ಅಬ್ಬರ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸುತ್ತಿದ್ದು, ಇನ್ನೊಂದೆಡೆ ಮಿತ್ರಪಕ್ಷಗಳಾದ ಎಸ್‌ಪಿ ಯ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಮತ್ತು ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಜಂಟಿಯಾಗಿ ಸಂಜೆ ರೋಡ್ ಶೋ ನಡೆಸಲಿದ್ದಾರೆ.
ಬನಾರಸ್ ವಿವಿಯಿಂದ ಆರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಸಾವಿರಾರು ಜನರು ಭರ್ಜರಿ ಸ್ವಾಗತ ನೀಡಿದರು. ಮೋದಿ ಅವರು ತೆರೆದ ಕಾರ್‌ನಲ್ಲಿ ನಿಂತು ಜನರತ್ತ ಕೈ ಬೀಸುತ್ತಾ ಸಾಗಿದರೆ,ಸುತ್ತಲು ಭದ್ರತಾ ಪಡೆಗಳ ಸರ್ಪಗಾವಲಿತ್ತು.
ಮೋದಿ ಅವರು ಮದನ್ ಮೋಹನ್ ಮಾಳವಿಯಾ ಅವರ ಪ್ರತಿಭೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಿದರು. ಈ ವೇಳೆ ನೆರೆದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹರ್ ಹರ್ ಮೋದಿ. ಘರ್ ಫರ್ ಮೋದಿ ಎಂಬ ಘೋಷಣೆಗಳನ್ನು ಕೂಗಿದರು.
ಮಧ್ಯಾಹ್ನ 12 ಕ್ಕೆ ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ಮೋದಿ,ಬಳಿಕ ಇದೇ ಮೊದಲ ಬಾರಿಗೆ ಪ್ರಸಿದ್ಧ ಕಾಲಭೈರವೇಶ್ವರ ದೇವಾಲಕ್ಕೆ ತೆರಳಲಿದ್ದಾರೆ. ವಾರಣಾಸಿಯಲ್ಲೆಡೆ ವ್ಯಾಪಕ ಪೊಲೀಸ್ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಅರೆ ಸೇನಾ ಪಡೆಗಳನ್ನೂ ಅಲ್ಲಲ್ಲಿ ನಿಯೋಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಕಾಲ ತಾವು ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಪೈಪೋಟಿ ಎಂಬಂತೆ ಎಸ್‌ಪಿ- ಕಾಂಗ್ರೆಸ್ ಮತ್ತು ಬಿಎಸ್‌ಪಿಯ ಮಾಯಾವತಿ ಅವರೂ ಭರ್ಜರಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಮೋದಿ ಅವರೊಂದಿಗೆ ಕೇಂದ್ರದ 15 ಮಂದಿ ಸಂಪುಟದ ಸಚಿವರು ವಾರಣಾಸಿಯಲ್ಲಿ ಕಳೆದ 2 ದಿನಗಳಿಂದ ಬಿಡುವಿಲ್ಲದ ಪ್ರಚಾರದಲ್ಲಿ ನಿರತರಾಗಿದ್ದಾರೆ.