Advertisement
ಇದು ಶನಿವಾರ 72ನೇ ಜನ್ಮದಿನವನ್ನು ಆಚರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳು. ಮಧ್ಯಪ್ರದೇಶದ ಕರಾಹಲ್‌ನಲ್ಲಿ ಸ್ವಸಹಾಯ ಸಂಘದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಸಾಮಾನ್ಯವಾಗಿ ನಾನು ನನ್ನ ಜನ್ಮದಿನದಂದು ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ. ಆದರೆ, ಇಂದು ಗಾಂಧಿನಗರಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೆ, ಇಲ್ಲಿರುವ ಲಕ್ಷಾಂತರ ಅಮ್ಮಂದಿರು ನನ್ನನ್ನು ಆಶೀರ್ವದಿಸಿದ್ದಾರೆ. ಇದನ್ನು ನೋಡಿದರೆ ನನ್ನ ಅಮ್ಮ ಖುಷಿಪಡುತ್ತಾರೆ’ ಎಂದಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರ ಸಚಿವರು, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಕೆ.ಚಂದ್ರಶೇಖರ್ ರಾವ್ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಮೋದಿ ಅವರಿಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ. ಇನ್ನು, ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಅಲಿಯಾ ಭಟ್, ಸುನೀಲ್ ಶೆಟ್ಟಿ, ಸನ್ನಿ ಡಿಯೋಲ್, ಮಲಯಾಳಂ ನಟ ಮೋಹನ್‌ಲಾಲ್, ಸಂಗೀತ ನಿರ್ದೇಶಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಮೋದಿಯವರಿಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. ಇಷ್ಟೇ ಅಲ್ಲದೇ, ನೇಪಾಳ ಪ್ರಧಾನಿ ಶೇರ್ ಬಹಾದೂರ್, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರೂ ಶುಭ ಹಾರೈಸಿದ್ದಾರೆ.
Related Articles
ಪ್ರಧಾನಿ ಮೋದಿ ಜನ್ಮದಿನವನ್ನು ಕಾಂಗ್ರೆಸ್ ಶನಿವಾರ “ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸಿದೆ. ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ಕಳೆದ 8 ವರ್ಷಗಳಲ್ಲಿ ಕೇವಲ 7 ಲಕ್ಷ ಮಂದಿಗಷ್ಟೇ ಉದ್ಯೋಗ ನೀಡಲಾಗಿದೆ. 22 ಕೋಟಿ ಮಂದಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ದೇಶದ ಯುವ ಜನತೆ ಈ ದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
Advertisement
ದೇಶಾದ್ಯಂತ ವಿವಿಧ ಕಾರ್ಯಕ್ರಮಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ರಕ್ತದಾನ, ಸ್ವತ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಬಿಜೆಪಿ ಹಾಗೂ ಹಲವು ಸಂಘಟನೆಗಳು ಆಯೋಜಿಸಿದ್ದವು. ರಾಷ್ಟ್ರರಾಜಧಾನಿ ದೆಹಲಿಯ ಸಫರ್‌ಜಂಗ್ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರು ರಕ್ತದಾನ ಮಾಡುವ ಮೂಲಕ 15 ದಿನಗಳ “ರಕ್ತದಾನ ಅಮೃತ ಮಹೋತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ದೇಶಾದ್ಯಂತ 5,980 ಶಿಬಿರಗಳು ನಡೆದಿದ್ದು, 1.50 ಲಕ್ಷ ದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಏನೇನು ಕಾರ್ಯಕ್ರಮ ನಡೆದವು?
– 15 ದಿನಗಳ “ರಕ್ತದಾನ ಅಮೃತ ಮಹೋತ್ಸವ’ದ ಮೂಲಕ ರಕ್ತದಾನ
– ಗೋವಾದ ಬಿಜೆಪಿ ಸರ್ಕಾರದ ವತಿಯಿಂದ ರಾಜ್ಯದ 37 ಬೀಚ್‌ಗಳಲ್ಲಿ ಸ್ವತ್ಛತಾ ಕಾರ್ಯ
– ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇಗುಲದಲ್ಲಿ ವಿಶೇಷ ಪೂಜೆ, ಗಂಗಾಮಾತೆಗೆ ಪೂಜೆ
– ನಮೋ ಘಾಟ್‌ನಲ್ಲಿ ನಮಾಮಿ ಗಂಗೆ ಕಾರ್ಮಿಕರಿಂದ ಸ್ವಚ್ಛತಾ ಅಭಿಯಾನ
– ಬಿಜೆಪಿ ಪ್ರಧಾನ ಕಚೇರಿ ಸೇರಿದಂತೆ ಹಲವೆಡೆ ಮೋದಿ ಜೀವನಗಾಥೆ ವಿವರಿಸುವ ವಸ್ತುಪ್ರದರ್ಶನ
– ಮೋದಿ ಅವರು ಪಡೆದಿರುವ ಉಡುಗೊರೆಗಳ ಹರಾಜು ಪ್ರಕ್ರಿಯೆ ಆರಂಭ
– ದೆಹಲಿಯಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರುವ ಮ್ಯೂಸಿಯಂ ಉದ್ಘಾಟನೆ