ಬೆಂಗಳೂರು: ನಗರದ ಇಸ್ರೋ ಲೇಔಟ್ ದೇವರಕೆರೆ ಪಾರ್ಕ್ ಸಮೀಪದ ಕೆರೆಯಲ್ಲಿ ವಿದೇಶಿ ತಳಿ ಹಾಗೂ ಜೀವ ವೈವಿಧ್ಯಕ್ಕೆ ಹಾನಿ ಮಾಡಲಾಗುತ್ತದೆ ಎನ್ನುವ ಪ್ಲೆಕೋ ಮೀನುಗಳನ್ನು ಬಿಡಲಾಗಿದ್ದು, ಇದನ್ನು ತೆರವು ಮಾಡಲು ಪರಿಸರ ತಜ್ಞರು ಹರಸಾಹಸ ಪಡುತ್ತಿದ್ದಾರೆ.
ದೇವರಕೆರೆ ಪಾರ್ಕ್ ಸಮೀಪದ ಕೆರೆಯನ್ನು ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳು ಪುನರುಜ್ಜೀವನ ಮಾಡುವ ಉದ್ದೇಶದಿಂದ ಹೂಳು ಎತ್ತುತ್ತಿದ್ದರು. ಈ ವೇಳೆ ಪ್ಲೆಕೋ ಮೀನು ಪತ್ತೆೆ ಆಗಿದ್ದು,ಸ್ಥಳೀಯರು ತಿಳುವಳಿಕೆ ಕೊರತೆಯಿಂದ ಈ ಮೀನುಗಳನ್ನು ರಕ್ಷಿಸಲು ಟ್ಯಾಂಕರ್‌ಗಳ ಮೂಲಕ ಕೆರೆಗೆ ನೀರು ಬಿಟ್ಟಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಪರಿಸರ ತಜ್ಞ ವಿಜಯ್ ನಿಶಾಂತ್ ಅವರು, ಪ್ಲೆಕೋ ಮೀನುಗಳು ವಿದೇಶಿ ತಳಿಯಾಗಿದ್ದು, ಸ್ಥಳೀಯರ ತಿಳುವಳಿಕೆ ಕೊರತೆಯಿಂದ ಇವುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದನ್ನು ಅಕ್ವೇರಿಯಂಗಳಲ್ಲಿ ಬಳಸುತ್ತಾರೆ. ಸ್ಥಳೀಯರು ಅಥವಾ ಬೇರೆ ಎಲ್ಲಿಂದಲೋ ಈ ಮೀನನ್ನು ಕೆರೆಗೆ ತಂದುಬಿಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಪಾಲಿಕೆಯ ಅಧಿಕಾರಿಗಳು ಇದನ್ನು ತೆರವು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಕ್ರಮ ಖಂಡನೀಯ: ಸಚಿವ ಅರವಿಂದ ಲಿಂಬಾವಳಿ
ಪ್ಲೆಕೋ ಮೀನು ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತವೆ. ಇದು ಸಹ ಕ್ಯಾಟ್‌ಫಿಶ್ ತಳಿ ಮಾದರಿಯಾಗಿದ್ದು, ಇದರಿಂದ ಉಳಿದ ಜಲಚರಗಳಿಗೆ ಹಾನಿಯಾಗುತ್ತದೆ ಎನ್ನುತ್ತಾರೆ ಪರಿಸರವಾದಿ ಡಾ.ಕ್ಷಿತಿಜ್ ಅರಸ್.
ಈ ಮೀನುಗಳಿಂದ ಸ್ಥಳೀಯ ಜೀವ ವೈವಿಧ್ಯ ಹಾಳಾಗುತ್ತವೆ. ಈ ಮೀನು ಉಳಿದ ಜಲಚರಗಳಿಗೆ ಹಾನಿಮಾಡಿ ಸಾಯಿಸುತ್ತವೆ. ಇಲ್ಲವೇ ತಿನ್ನುತ್ತವೆ. ಹೀಗಾಗಿ, ಈ ರೀತಿಯ ಮೀನುಗಳ ಸಾಗಾಣಿಕೆ ಹಾಗೂ ಸಾಕುವುದಕ್ಕೆೆ ಕಡಿವಾಣ ಹಾಕಬೇಕು. ಕಠಿಣ ಕಾನೂನು ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಗ್ಗೆೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆ: ದೇವರಕೆರೆಯಲ್ಲಿರುವ ಪ್ಲೆಕೋ ಮೀನಿನ ಬಗ್ಗೆೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದ್ದು, ಇದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಮೀನುಗಳು ಒದ್ದಾಡುತ್ತಿರುವ ಪೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.