Advertisement

ನನ್ನ ಹಳ್ಳಿಗರನ್ನು ಹುಡುಕಿ ಕೊಡಿ ಪ್ಲೀಸ್‌…

12:54 PM Jun 17, 2017 | |

ನನ್ನ ಹೆಸರು ಅರಳಿಕಟ್ಟೆ ಹುಂಡಿ. ಇದು ನನ್ನ ಕತೆ.  ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿಗೆ ಸೇರಿದ ಪುಟ್ಟ ಹಳ್ಳಿ ನಾನು.  40 ಮನೆ, 70 ಕುಟುಂಬಗಳು ವಾಸವಾಗಿತ್ತು. ಒಂದು ಕಾಲದಲ್ಲಿ. ಈಗ ಒಂದು ನರಪಿಳ್ಳೆಯೂ ಕಾಣಿಸುತ್ತಿಲ್ಲ! ಹತ್ತಾರು ಮನೆಗಳ ಕಳೇಬರಗಳು ಮಾತ್ರ ಕಾಣುತ್ತಿವೆ. ನೋಡ ನೋಡುತ್ತಿದ್ದಂತೆ ಎಲ್ಲರೂ ಕಾಣೆಯಾಗಿದ್ದಾರೆ. ನನ್ನೊಳಗೆ ಒಂಥರಾ  ಸ್ಮಶಾನ ನಿರ್ಮಾಣ ಆಂದಂತಾಗಿದೆ. ನನ್ನ ಬಸಿರೊಳಗಿನ ಪ್ರಾಥಮಿಕ ಶಾಲೆ, ಅಂಗನವಾಡಿಯಲ್ಲಿ ಮಕ್ಕಳ ಸದ್ದು ಗದ್ದಲವಿಲ್ಲ. ದಿನನಿತ್ಯ ಹೆಂಗಳೆಯರು ಮನೆಯಂಗಳ ತೊಳೆಯುತ್ತಿದ್ದ ದೃಶ್ಯ ಈಗ ಕಾಣಸಿಗುತ್ತಿಲ್ಲ.  ಅಭಿವೃದ್ಧಿ ಕಂಡಿಲ್ಲದ ಈ ಹಳ್ಳಿಯಲ್ಲಿ ಇನ್ನು ಬದುಕು ನಡೆಸುವುದು ದುಸ್ತರ ಎಂದೋ ಏನೋ..ಎಲ್ಲರೂ ನನ್ನ ತೊರೆದು ದೂರದೂರಿಗೆ ಸೇರಿಕೊಂಡರು… 

Advertisement

ಕಳೆದ 6 ವರ್ಷಗಳಿಂದಲೂ ನಿರಂತರವಾಗಿ  ನನ್ನೊಡಲಿನಲ್ಲಿದ್ದವರು ಬರದ ನೆಪವೊಡ್ಡಿ, ಮೂಲಭೂತ ಸಮಸ್ಯೆಗಳ ಕಾರಣ ಹೇಳಿ ನನ್ನನ್ನು ತೊರೆದು ದೂರದ ಮೈಸೂರಿನಲ್ಲಿ ವಾಸವಾಗಿದ್ದಾರೆ.  ಇವರನ್ನೆಲ್ಲಾ ಕಳೆದುಕೊಂಡ ಸಂಕಟ ಹೇಳಿಕೊಳ್ಳಲಾಗದೆ ಮೂಕ ವೇದನೆ ಕಾಡುತ್ತಿದೆ. ದೀಪಾವಳಿ ಹಬ್ಬದಲ್ಲಿ ನಡೆಯುವ ಸಿದ್ದೇಶ್ವರ ಜಾತ್ರೆಯನ್ನು ನೀವು ನೋಡಬೇಕಿತ್ತು. ಈಗ ಮಾರಮ್ಮನ ಹಬ್ಬ ಬರುವುದನ್ನೇ ನಾನು ಚಾತಕ ಪಕ್ಷಿಯಂತೆ ಕಾಯುತ್ತೇನೆ. ಅಲ್ಲಿಗೆ ಬರುವ ಇವರು ತೇರನ್ನು ಕಟ್ಟಿ ಎಳೆಯುವ ಜವಾಬ್ದಾರಿಯನ್ನು ಮುಗಿಸಲು ಬಂದೇ ಬರುತ್ತಾರೆ. ಏಕೆಂದರೆ ಆ ದಿನ ಮಾತ್ರ ಬಂದು ಒಮ್ಮೆ ನನ್ನನ್ನು ನೋಡಿ, ಪಾಳುಬಿದ್ದ ಮನೆಗಳಲ್ಲಿ ಎಲ್ಲಿ ಕುಸಿಯುವುದೋ ಎಂಬ ಭೀತಿಯಿಂದ ವಾಸ ಮಾಡಲು ಭಯಪಟ್ಟು, ಶಾಮಿಯಾನ ಹಾಕಿ ಊಟೋಪಚಾರ ಮುಗಿಸಿ ಮತ್ತೆ ವಾಪಸ್ಸಾಗುತ್ತಾರೆ. 

ಅದೇ ನೋವಿನ ಸಂಗತಿ.

ಈ ಊರಿನ ನೂರಾರು ಮಂದಿ, ಒಕ್ಕಲುತನವನ್ನೇ ನಂಬಿ ನೂರಾರು ವರ್ಷಗಳಿಂದ ನನ್ನೊಂದಿಗೆ ವಾಸವಾಗಿದ್ದರು. ಸತತ ಬರದಿಂದ ನಲುಗಿ ಹೋಗಿದ್ದರು. ಬೆಳೆ ಕೈಸೇರದೆ, ಕೈಸಾಲ ಮಾಡಿಕೊಂಡು ಪಕ್ಕದ ಮೈಸೂರಿನಲ್ಲಿ ಬಾಳೇ ಹಣ್ಣಿನ ವ್ಯಾಪಾರ ಮಾಡತೊಡಗಿದರು. ಅಲ್ಲಿ ಹಣವನ್ನು ಕಂಡ ಕೆಲ ಕುಟುಂಬಗಳನ್ನೇ ಎಲ್ಲರೂ ಹಿಂಬಾಲಿಸಿದರ ಪರಿಣಾಮ  ಊರು ಖಾಲಿ, ಖಾಲಿ; ನಾನು ಏಕಾಂಗಿ.

 ಈಗ ಉಳಿದಿರುವುದು ಪಾಳುಬಿದ್ದ ಬಾವಿ, ಹಾಳಾದ ಮನೆಗಳು, ನೆಲ, ಕಿಟಕಿ ಕಿತ್ತು ಬಂದ ಮನೆಗಳು, ಗಿಡಕಂಟಿಗಳು, ಬೆಳೆದಿರುವ ವಿಷಜಂತುಗಳು ವಾಸ ಮಾಡಲು ಯೋಗ್ಯವಾಗಿರುವ ಶಾಲಾ, ಅಂಗನವಾಡಿ ಕಟ್ಟಡ, ನೆಪಮಾತ್ರಕ್ಕೆ ಇರುವ ಕೈಪಂಪು 
ಗಾದೆ ಮಾತಲ್ಲಿ ಹೇಳುವುದಾದರೆ, ಬಿಟ್ಟೋದ ಊರು ಅಂತಾರಲ್ಲ… ಹಾಗಿದ್ದೀನಿ ನಾನು. 

Advertisement

ನನ್ನನ್ನು ಕೊನೆಗೆ ತೊರೆದದ್ದು ಮಾದೇಗೌಡ, ಕಾಳೇಗೌಡ. ಏಕೆ ಹೀಗೆ ಮಾಡಿದ್ರೀ ಅಂದರೆ- ಈ ಗ್ರಾಮಕ್ಕೆ ಮೂಲ ಸೌಲಭ್ಯ ನೀಡುವಲ್ಲಿ ಪಂಚಾಯಿತಿ ವಿಫ‌ಲವಾಯಿತು. ಸತತ ಬರದಿಂದ ಕುಡಿಯುವ ನೀರಿಗೂ ತೊಂದರೆಯಾಯಿತು. ಹತ್ತು ಹಲವು ಬಾರಿ ಜನಪ್ರತಿನಿಧಿಗಳು, ಮಂತ್ರಿ ಮಹೋದರಯರನ್ನು ಸಂಪರ್ಕಿಸಿದರೂ ಕೆಲಸವಾಗಲಿಲ್ಲ. ಊರು ಬಿಡಬೇಕೆಂಬ ಮನಸ್ಸು ಇಲ್ಲದಿದ್ದರೂ ನಮ್ಮ ಮನೆ ಜಮೀನು, ಊರು ಬಿಟ್ಟು ಭಾರದ ಹೃದಯದಿಂದ ಮೈಸೂರಿನಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ತೊರೆದ ಊರಿಗೆ ಆಗಾಗ ಬಂದು ಮನೆ ಹಸನುಮಾಡಿ ಮತ್ತೆ ವಾಪಸ್ಸಾಗುತ್ತೇವೆ’ ಅಂದರು. 

ಕಾರ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಸಿದ್ದಯ್ಯಸ್ವಾಮಿ -ಅರಳಿಕಟ್ಟೆಹುಂಡಿ ಗ್ರಾಮದಲ್ಲಿ ಇನ್ನು 30 ಮಂದಿ ಮತದಾರರ ಪಟ್ಟಿಯಲ್ಲಿದ್ದಾರೆ.  ಇಲ್ಲಿ ಮೂರು ಬೋರ್‌ವೆಲ್‌ ಕೊರೆಯಿಸಿದ್ದೇವೆ. ಎರಡರಲ್ಲಿ ನೀರೂ ಸಿಕ್ಕಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಕಾರ್ಯ ಹಾಗೂ ದಾಸನೂರು ಪಂಚಾಯಿತಿಗೆ ಕುಡಿಯುವ ನೀರಿಗೆ ರೂ. 23 ಕೋಟಿ ಅನುದಾನ ಲಭ್ಯವಾಗಿದೆ. ಗ್ರಾಮಸ್ಥರ ಮನವೊಲಿಸಿ ಅವರಿಗೆ ಸೌಲಭ್ಯ ನೀಡಿ ಮತ್ತೆ ಇಲ್ಲಿಗೆ ಕರೆ ತರುವುದಕ್ಕೆ ತಾವು ಬದ್ಧರಾಗಿದ್ದೇವೆ – ಮಾತಿಗೆ ರಾಜಕೀಯದ ಸ್ನೋ ಪೌಡರ್‌ ಹಾಕಿ ಮಾತನಾಡುತ್ತಿದ್ದಾರೆ.

 ಮೊನ್ನೆ ಇದ್ದಕ್ಕಿಂದ್ದಂತೆ ನನ್ನ ಸಂತೋಷ ಇಮ್ಮಡಿಯಾಯಿತು. ಏಕೆಂದರೆ, ಇದ್ದಕ್ಕಿದ್ದಂತೆ ಎಲ್ಲರೂ ಹಳ್ಳಿ ತುಂಬಿಕೊಂಡಿದ್ದರು. ಬಿಟ್ಟು ಹೋದವರೆಲ್ಲಾ ಕಾಣುತ್ತಾ ಉಭಯ ಕುಶಲೋಪರಿ ಮಾತನಾಡಿಕೊಳ್ಳುತ್ತಿದ್ದರು. ಅರಳಿಕಟ್ಟೆಯ ಸುತ್ತ ಜನ ಸೇರಿದ್ದರು. ಇದೆಂಥ ದೇವರೇ ಮಾಯೆ ಅಂದು ಕೊಂಡೆ.  

ನಿಜ ವಿಚಾರ ಏನೆಂದರೆ, ಇವರೆಲ್ಲ ಬಂದಿದ್ದು ನನ್ನನ್ನು ನೋಡೋದಕ್ಕೆಲ್ಲ ಅಲ್ಲ, ಊರಲ್ಲಿ ವಾಸ ಮಾಡಲು ಅಲ್ಲ. ಎಲ್ಲರೂ ಬಂದಿದ್ದು ಈ ಉಪಚುನಾವಣೆಗೆ. ಇಲ್ಲಿದ್ದಾಗ ರಸ್ತೆ, ನೀರು, ವಿದ್ಯುತ್‌ ಕೊಡದ ನಾಯಕರು ಎಲ್ಲ ಬಿಟ್ಟು ಹೊರಟ ಮೇಲೆ ಮತ್ತೆ ದುಡ್ಡು ಕೊಟ್ಟು ಕರೆಸಿ ಮತ ಹಾಕಿಸಿಕೊಂಡಿದ್ದಾರೆ. ಇದನ್ನು ತಿಳಿದು ಮತ್ತಷ್ಟು ನೋವಾಯಿತು.  

ನೋಡ ನೋಡುತ್ತಿದ್ದಂತೆ ಎಲ್ಲರೂ ಊಟು ಮುಗಿಸಿ ಎದ್ದಂತೆ ವೋಟ ಹಾಕಿ ಹೊರಟೇ ಬಿಟ್ಟರು. ಎಲ್ಲವನ್ನು ನೋಡಿ ಕರುಳು ಕಿವುಚಿಬಿಟ್ಟಿತು. 

ಈಗಲಾದರೂ ಮತ್ತೆ ವಾಪಸ್ಸು ಬನ್ನಿ, ನನ್ನ ಬೀದಿಗಳಿಗೆ ನೀರು ಚಿಮುಕಿಸಿ ರಂಗೋಲಿ ಹಾಕಿ,  ಮನೆಗಳಿಗೆ ತೋರಣ ಕಟ್ಟಿ,  ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳನ್ನು ತುಂಬಿಸಿ ಜೀವ ಕಳೆಯನ್ನು ತನ್ನಿ.  ಪೇಟೆಯದು ಥಳುಕಿನ ಬದುಕು.  ಹೊಳೆಯೋಥನಕ ಮಾಣಿಕ್ಯ ಅಂತರಲ್ಲ ಹಾಗೇ.  ಇಷ್ಟು ವರ್ಷ ಅನ್ನ, ನೀರು ಇಟ್ಟ ನನ್ನನ್ನು ಒದ್ದು ಹೋದವರು ಅಲ್ಲಿ ನೆಮ್ಮದಿಯಾಗಿ ಹೇಗೆ ಇರಲು ಸಾಧ್ಯ? 

ಮುಖ್ಯಮಂತ್ರಿಗಳೇ,  ನಿಮ್ಮ ಸ್ವ ಕ್ಷೇತ್ರದ ಗ್ರಾಮವೊಂದು ಪಾಳು ಬಿದ್ದಿದೆ. ಇದು ಹಳ್ಳಿ ಸಂಕುಲದ ಸರ್ವನಾಶದ ಕುರುಹು. ದೊಡ್ಡ ಎಚ್ಚರಿಕೆ.  ಈಗಲಾದರೂ ನನ್ನನ್ನು ಉಳಿಸಿಕೊಳ್ಳಲು ಮುಂದಾಗಿ. ನನ್ನ ಸಂಕಟದಕಥೆ ಕೇಳಲು ಕಿವಿಯಾಗಿ. ಪಟ್ಟಣ ಸೇರಿರುವ  ನನ್ನ ಕಂದಗಳಿರಾ ವಾಪಸ್ಸು  ಮರಳಿ ಬನ್ನಿ,  ನಿಮ್ಮ ಅರಳಿ ಕಟ್ಟೆ ಹುಂಡಿಗೆ… ನಾನು ಕಾದಿರುವೆ… 

ಇಂತಿ, ನಿಮ್ಮ ಅರಳಿಕಟ್ಟೆಹುಂಡಿ

ಫೈರೋಜ್‌ ಖಾನ್‌ 

Advertisement

Udayavani is now on Telegram. Click here to join our channel and stay updated with the latest news.

Next