ಕನ್ನಡದಲ್ಲಿ ಈಗ ತರಹೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. “ದಯವಿಟ್ಟು ಗಮನಿಸಿ’, “ಅಡಚಣೆಗಾಗಿ ಕ್ಷಮಿಸಿ’, “ನೀವು ಕರೆ ಮಾಡಿದ ಚಂದಾದಾರರು …’, “ಕನ್ನಡಕ್ಕಾಗಿ ಒಂದನ್ನು ಒತ್ತಿ …’ ಹೀಗೆ ವಿಭಿನ್ನ ಶೀರ್ಷಿಕೆ ಹೊತ್ತ ಚಿತ್ರಗಳು ಒಂದಷ್ಟು ಕುತೂಹಲ ಮೂಡಿಸಿವೆ. ಅವುಗಳ ಸಾಲಿಗೆ ಈಗ ಹೊಸಬರೇ ಸೇರಿ ಚಿತ್ರವೊಂದನ್ನು ಶುರುಮಾಡುವ ಉತ್ಸಾಹದಲ್ಲಿದ್ದಾರೆ.
ಆ ಚಿತ್ರಕ್ಕೆ “ನಿಧಾನವಾಗಿ ಚಲಿಸಿ…’ ಎಂದು ನಾಮಕರಣ ಮಾಡಿದ್ದಾರೆ. ಶೀರ್ಷಿಕೆಗೆ “ಅವಸರವೇ ಅಪಘಾತಕ್ಕೆ ಕಾರಣ’ ಎಂಬ ಅಡಿಬರಹವೂ ಇದೆ. ಅಲ್ಲಿಗೆ ಇದೊಂದು ಅಪಘಾತಕ್ಕೆ ಸಂಬಂಧಿಸಿದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ. ಆದರೆ, ಇಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶದೊಂದಿಗೆ ಚಿತ್ರ ಸಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಈ ಚಿತ್ರದ ಮೂಲಕ ನವೀನ್ ಶೆಟ್ಟಿ ನಿರ್ದೇಶಕರಾಗುತ್ತಿದ್ದಾರೆ.
ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇನ್ನು, ಸೂರ್ಯ ಈ ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ. ಇವರಿಗಿನ್ನೂ ನಾಯಕಿಯ ಆಯ್ಕೆಯಾಗಿಲ್ಲ. ಬಹುತೇಕ ಹೊಸಬರೇ ಇರುವುದರಿಂದ ಹೊಸ ಮುಖ ಇರುವ ನಾಯಕಿಗಾಗಿ ಹುಡುಕಾಟ ಶುರುಮಾಡಿದೆ ಚಿತ್ರತಂಡ. ಶೀರ್ಷಿಕೆಯಲ್ಲೇ ಕುತೂಹಲ ಕೆರಳಿಸುವ ಚಿತ್ರಗಳಲ್ಲಿ ಕಥೆಯಲ್ಲೂ ಅಂಥದ್ದೊಂದು ಕುತೂಹಲ ಕೆರಳಿಸುತ್ತವೆಯಾ?
ಈ ಪ್ರಶ್ನೆಗೆ ಉತ್ತರಿಸುವ ನಾಯಕ ಸೂರ್ಯ, “ಹೆಸರಿಗೆ ತಕ್ಕ ಕಥೆ ಇದೆ. ಕಥೆಗೆ ಹೊಂದಿಕೆಯಾಗುತ್ತೆ ಎಂಬ ಕಾರಣಕ್ಕೆ “ನಿಧಾನವಾಗಿ ಚಲಿಸಿ’ ಎಂದು ಹೆಸರಿಡಲಾಗಿದೆ. ಒಂದು ಪಾರ್ಟಿ ಮುಗಿಸಿ ಬರುವಾಗ, ಫ್ಯಾಮಿಲಿಯೊಂದು ರಸ್ತೆ ಅಪಘಾತಕ್ಕೀಡಾಗುತ್ತದೆ. ಅದರಲ್ಲಿ ಒಂದು ಸಣ್ಣ ಮಗು ಮಾತ್ರ ಉಳಿದುಕೊಳ್ಳುತ್ತೆ. ಅವಳೊಂದಿಗೆ ಒಂದು ಗೊಂಬೆಯೂ ಇರುತ್ತೆ. ಅಪಘಾತ ಯಾಕಾಗುತ್ತೆ, ಹೇಗಾಗುತ್ತೆ, ಯಾರು ಮಾಡುತ್ತಾರೆ?
ಇದು ಚಿತ್ರದೊಳಗಿರುವ ಸಸ್ಪೆನ್ಸ್. ಒಂದು ಫ್ಯಾಮಿಲಿ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಸಾಕಷ್ಟು ತಿರುವುಗಳು ಬಂದುಹೋಗುತ್ತವೆ. ಅವೆಲ್ಲವೂ ಸಿನಿಮಾದ ಹೈಲೆಟ್’ ಎಂದು ವಿವರ ಕೊಡುತ್ತಾರೆ ಸೂರ್ಯ. ಚಿತ್ರಕ್ಕೆ ಲೋಕೇಶ್ ಮತ್ತು ರುದ್ರ ಶೆಟ್ಟಿ ನಿರ್ಮಾಪಕರು. ಪ್ರೇಮ್‌ಕುಮಾರ್ ನಂದು ಸಂಗೀತ ನೀಡುತ್ತಿದ್ದಾರೆ. ಇವರಿಗಿದು ಮೊದಲ ಅನುಭವ. ನಾಲ್ಕು ಹಾಡುಗಳಿದ್ದು, ಜಯಂತ್ ಕಾಯ್ಕಿಣಿ ಹಾಗೂ ಗೌಸ್‌ಪೀರ್ ಗೀತೆರಚಿಸುತ್ತಿದ್ದಾರೆ.
ಮಂಜೇಶ್ ಛಾಯಾಗ್ರಹಣವಿದೆ. ರಾಕಿ ಮಹೇಶ್ ಸಾಹಸವಿದೆ, ಹರಿಕೃಷ್ಣ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಚಿತ್ರದಲ್ಲಿ ಪ್ರಮೋದ್, ರಚನಾ, ನಾಗಮಣಿ ನಾಯ್ಡು, ಮಾಸ್ಟರ್ ಗಮನ ಸೇರಿದಂತೆ ಹೊಸಪ್ರತಿಭೆಗಳಿವೆ. ಒಂದು ಕಮರ್ಷಿಯಲ್ ಅಂಶಗಳಿರುವ ಚಿತ್ರದಲ್ಲಿ ಸಂದೇಶವೂ ಇರಲಿದೆ. ಜೂನ್ 15 ರಿಂದ ಚಿತ್ರೀಕರಣ ಶುರುವಾಗಲಿದ್ದು, ರಾಮನಗರ, ಬೆಂಗಳೂರು ಸುತ್ತಮುತ್ರ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂಬುದು ಚಿತ್ರತಂಡದ ಮಾತು.