Advertisement
ಮಗಳು ಸೋಲುತ್ತಾಳೆ, ನಿಜ. ನಿರೀಕ್ಷಿತ ಪೈಪೋಟಿ ಅವಳಿಂದ ಅಸಾಧ್ಯ ಎನ್ನುವುದೂ ಸತ್ಯವೇ. ಹಾಗಂತ, ಮಗಳೊಂದಿಗೆ ನೀವು ಆಡದೇ ಸುಮ್ಮನಿದ್ದರೆ, ಮುಂದೊಂದು ದಿನ ಬದುಕಿನಲ್ಲಿ ಮಗಳೇ ಸೋತುಬಿಡುತ್ತಾಳೆ! ಈಗ ನಿಮ್ಮ ಮಗಳು ಆಡುವ ಆಟವನ್ನು ನೀವು ಬಾಲ್ಯದಲ್ಲೇ ಆಡಿರುತ್ತೀರಿ. ಅದೇ ಆಟವನ್ನೇ ಪುಟಾಣಿಯೊಂದಿಗೆ ಆಡುವುದು ನಿಮಗೆ ಬೋರ್ ವಿಚಾರವೇ ಇದ್ದಿರಬಹುದು. ಆದರೆ, ಮಗಳ ಆಲೋಚನಾ ಶಕ್ತಿಯನ್ನು ವಿಸ್ತರಿಸಲು, ಒಳನೋಟಗಳನ್ನು ಬೆಳೆಸಲು ಆಕೆಯೊಂದಿಗೆ ನೀವು ಕೆಲ ಹೊತ್ತಾದರೂ ಕಳೆಯಲೇಬೇಕು. ಮಗಳಿಗೋಸ್ಕರ ಎಂಥ ಕೆಲಸವಿದ್ದರೂ ಸ್ವಲ್ಪ ಸಮಯವನ್ನು ಅವಳಿಗೆ ಮೀಸಲಿಡಬೇಕು. ಅರ್ಥಮಾಡಿಕೊಳ್ಳಿ. ಮಗಳೊಂದಿಗೆ ಮುಖಾಮುಖೀಯಾಗಿ ಇಂಥ ಆಟಗಳನ್ನು ಆಡುವುದರಿಂದ ಆಕೆಯ ಬೌದ್ಧಿಕ ಪ್ರಪಂಚ ವಿಕಾಸವಾಗುತ್ತೆ. ಜತೆಗೆ ನಿಮ್ಮ ಮನೆ-ಮನಸ್ಸು ಎರಡೂ ಲವಲವಿಕೆಯಿಂದಿರುತ್ತದೆ.
ಮಕ್ಕಳ ಜತೆ ಆಟಕ್ಕೆ ಕುಳಿತಾಗ ನೀವೇ ಪಂಟರ್. ಮಕ್ಕಳೊಂದಿಗೆ ಮಕ್ಕಳಂತೆ ಆಡಿ. ನಿಮ್ಮನ್ನು ಮಣಿಸುವಷ್ಟು ಬೌದ್ಧಿಕವಾಗಿ ಅವರು ಸರಿಸಮಾನರಲ್ಲ. ಆದರೆ, ನೀವು ಗೆಲ್ಲುತ್ತಾ ಹೋದಂತೆ, ಅವುಗಳಿಗೆ ಆ ಆಟದ ಮೇಲೆ ಆಸಕ್ತಿ ಕಳೆದುಹೋಗುವ ಅಪಾಯವೂ ಇದ್ದೀತು. ಈ ಕಾರಣದಿಂದ, ನೀವು ಬೇಕು ಬೇಕಂತಲೇ ತಪ್ಪು ಮಾಡುತ್ತಾ, ಸೋಲುತ್ತಾ ಹೋಗಿ. ನಿಮ್ಮ ಮೇಲಿನ ಒಂದು ಪುಟ್ಟ ಗೆಲುವೂ ಅವುಗಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ನಡುವೆ ಒಂದೊಂದು ಸಲ ಸೋಲುವುದನ್ನೂ ಕಲಿಸಿ. ಆಗ ಅವರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳುತ್ತಾರೆ. ನೀವೇ ಅವರಿಗೆ ಪಾಠ!
ಮಕ್ಕಳು ಬಿಳಿ ಹಾಳೆ ಇದ್ದಂತೆ. ನೀವು ಚುಕ್ಕಿ ಇಟ್ಟ ಹಾಗೆ, ಅವರು ಚಿತ್ತಾರವಾಗುತ್ತಾರೆ. ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ಚುರುಕಾಗುತ್ತವೆ ಎನ್ನುವುದು ಎಲ್ಲ ಮನಃಶಾಸ್ತ್ರಜ್ಞರು ಹೇಳುವಂಥ ಮಾತು. ನಿಮ್ಮ ಪ್ರತಿ ಹೆಜ್ಜೆ , ನಡತೆಗಳನ್ನೂ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತವೆ. ಅವರ ಪಾಲಿಗೆ ನೀವೇ ದೊಡ್ಡ ಸಿಲೆಬಸ್. ಹಾಗಿದ್ದೂ , ನೀವು ಸುಮ್ಮನೆ ಕುಳಿತರೆ, ಅವುಗಳ ಕಲಿಕೆಯೇ ನಿಂತುಹೋಗುತ್ತದೆ. ಅವುಗಳೊಂದಿಗೆ ಆಡುವಾಗ, ಪುಟ್ಟ ಪುಟ್ಟ ಸಂಗತಿಗಳ ಬಗ್ಗೆ ವಿಚಾರಗಳನ್ನು ಹೇಳುತ್ತಾ ಇರಿ. ಮಕ್ಕಳು ಅದನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತವೆ.
Related Articles
.ಮಕ್ಕಳೊಂದಿಗೆ ನೀವು ಕಳೆದಷ್ಟು ಹೊತ್ತು, ಅವು ನಿಮ್ಮಿಂದ ಹೊಸ ವಿಚಾರಗಳನ್ನು ಕಲಿಯುತ್ತವೆ.
Advertisement
.ಆಟದಲ್ಲಿ ಮಕ್ಕಳೆದುರು ಸೋಲೊಪ್ಪಿಕೊಳ್ಳಿ. ಆ ಒಂದೇ ಒಂದು ಗೆಲುವಿನಿಂದ ಅವುಗಳ ಕಲಿಯುವ ಉತ್ಸಾಹ ಇಮ್ಮಡಿಗೊಳ್ಳುತ್ತದೆ.
.ಮಕ್ಕಳು ಬಿಳಿ ಹಾಳೆ ಇದ್ದ ಹಾಗೆ. ನೀವು ಚುಕ್ಕಿ ಇಟ್ಟಂತೆ, ಅವರು ಚೆಂದದ ಚಿತ್ತಾರವಾಗುತ್ತಾರೆ ಎಂಬುದು ತಿಳಿದಿರಲಿ.
.ಹೊಸ ಪದ, ಹೊಸ ವಿಚಾರ, ವಿಭಿನ್ನ ಒಳನೋಟಗಳನ್ನು ಮಕ್ಕಳು ಕಲಿಯುತ್ತವೆ.
.ದೊಡ್ಡವರನ್ನು ಹೇಗಾದರೂ ಮಣಿಸಬೇಕೆಂಬ ಅವುಗಳ ಛಲವೇ, ಬದುಕಿನ ಹೋರಾಟವನ್ನು ಕಲಿಸುತ್ತದೆ.
.ಮಕ್ಕಳೊಂದಿಗೆ ನೀವು ಕಳೆದುಹೋದಷ್ಟು , ನಿಮ್ಮ ಒತ್ತಡವೂ ಕರಗಿಹೋಗುತ್ತದೆ.
ಸ್ಮಿತಾ