Advertisement

ಪ್ಲಾಸ್ಟಿಕ್ ತ್ಯಾಜ್ಯದಿಂದ ಸಕಲರಿಗೆ ಅಪಾಯ

11:19 AM Jun 06, 2018 | |

ದಾವಣಗೆರೆ: ಪ್ಲಾಸ್ಟಿಕ್‌ ತ್ಯಾಜ್ಯದಿಂದ ಭೂಮಂಡಲದ ಸಕಲ ಜೀವ ಸಂಕುಲಕ್ಕೆ ಅಪಾಯ ಎದುರಾಗುತ್ತಿದ್ದು, ಪ್ರತಿಯೊಬ್ಬರೂ ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಎಚ್‌. ಹೊಸಗೌಡರ್‌ ಮನವಿ ಮಾಡಿದ್ದಾರೆ.

Advertisement

ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌, ಜಿಲ್ಲಾ ವಕೀಲರ ಸಂಘ, ಪರಿಸರ ಸಂರಕ್ಷಣಾ, ಮಾನವ ಹಕ್ಕುಗಳ ವೇದಿಕೆ ಸಹಯೋಗದಲ್ಲಿ ಮಾಗನೂರು ಬಸಪ್ಪ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ, ಮಾತನಾಡಿದ ಅವರು, ಪ್ಲಾಸ್ಟಿಕ್‌, ತ್ಯಾಜ್ಯ ಹೊರಸೂಸುವ ರಾಸಾಯನಿಕದಿಂದ ಭೂಮಿ ಮೇಲಿನ ಜೀವ ಸಂಕುಲ, ಜಲಮೂಲ ಮತ್ತು ಜಲಚರಗಳು ನಾಶವಾಗುವ ಅಪಾಯ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್‌ ಮಣ್ಣಿನಲ್ಲಿ ಎಂದಿಗೂ ಕೊಳೆಯದು. ಅದನ್ನು ಸುಟ್ಟಾಗ ಹೊರಸೂಸುವ ರಾಸಾಯನಿಕಯುಕ್ತ ಹೊಗೆಯು ಕ್ಯಾನ್ಸರಿಗೆ ಕಾರಣ ಆಗುವ ವಿಷಕಾರಿ ಅನಿಲ ಬಿಡುಗಡೆ ಆಗುತ್ತದೆ. ಕಸದ ಜೊತೆ ಪ್ಲಾಸ್ಟಿಕ್‌ ಸೇವಿಸುವ ಪಶುಪಕ್ಷಿ, ಪ್ರಾಣಕ್ಕೆ ಕಂಟಕ ಎದುರಾಗುತ್ತಿದೆ.

ಆದ್ದರಿಂದ ಜನತೆ ಎಚ್ಚೆತ್ತು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಲ್ಲಿಸಲೇ ಬೇಕು ಎಂದರು. ಪ್ಲಾಸ್ಟಿಕ್‌ ತ್ಯಾಜ್ಯ ಉಂಟು ಮಾಡುತ್ತಿರುವ ಘೋರ ಪರಿಣಾಮದ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಿಲ್ಲ. ಸಿಕ್ಕಸಿಕ್ಕಲ್ಲಿ ಕಸ ಬಿಸಾಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದೇವೆ. ಪರಿಸರ ಸ್ವಚ್ಚವಾಗಿಡುವುದು ಕೇವಲ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಹೊಣೆಯಲ್ಲ. ಪರಿಸರ ಸ್ವಚ್ಚವಾಗಿಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ತಿಳಿಸಿದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಜಿ. ಶಿವಶಂಕರೇಗೌಡ ಮಾತನಾಡಿ, ಪ್ರತಿಯೊಬ್ಬರಲ್ಲಿರುವ ಮೊಬೈಲ್‌ ಹೊರ ಸೂಸುವ ವಿಕಿರಣದಿಂದಲೂ ಸಹ ಪರಿಸರಕ್ಕೆ ಅಪಾಯ ಇದೆ. ಮೊಬೈಲ್‌ ಟವರ್‌ಗಳನ್ನು
ಜನವಸತಿಯಿಂದ ದೂರದಲ್ಲಿ ಸ್ಥಾಪಿಸಬೇಕಿದೆ. ಇ-ತ್ಯಾಜ್ಯವೂ ಪರಿಸರಕ್ಕೆ ಗಂಭೀರ ಸವಾಲಾಗುತ್ತಿದೆ. ಅದರ ನಿರ್ಮೂಲನೆಗೆ ಪರಿಣತರು ಸಂಶೋಧನೆ ನಡೆಸಬೇಕು ಎಂದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜನ್ಮದಿನ ಒಂದೊಂದು ಸಸಿ ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಮಾಲಿನ್ಯ ಜೀವಕ್ಕೆ ಮಾರಕ…
ವಿಷಯ ಕುರಿತು ಉಪನ್ಯಾಸ ನೀಡಿದ ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಎಲ್‌. ಎಚ್‌. ಅರುಣ್‌ಕುಮಾರ್‌, ನಾವೆಲ್ಲರೂ ವಾಸಿಸುವ ಭೂಮಿಯ ಮೇಲೆ ಅರಣ್ಯ ನಾಶದ ಮೂಲಕ ನದಿ ಮೂಲಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದೇವೆ. ಅಪಾಯಕಾರಿ ಘನ ತ್ಯಾಜ್ಯ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಎಸೆಯುವ, ಗಣಿಗಾರಿಕೆ ಮೂಲಕ ಪ್ರಕೃತಿಯ ವಿರುದ್ಧ ದೌರ್ಜನ್ಯ ಎಸಗುತ್ತಿದ್ದೇವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂಬರುವ ದಿನಗಳಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. 5 ವರ್ಷ ತನಕ ಸೆರೆವಾಸ ಅಥವಾ 1ಲಕ್ಷದವರೆಗೂ ದಂಡ ವಿಧಿಸಬಹುದು ಎಂದು ತಿಳಿಸಿದರು.

ಮಾಗನೂರು ಬಸಪ್ಪ ಪಬ್ಲಿಕ್‌ ಟ್ರಸ್ಟ್‌ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಚ್‌. ಲೋಕಿಕೆರೆ ಸಿದ್ದಪ್ಪ, ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next