Advertisement

ಸಮುದ್ರ ಸೇರುವ ಪ್ಲಾಸ್ಟಿಕ್‌ ರಸ್ತೆಗೆ ಸೇರಿಸುವ ತಂತ್ರ!

02:04 AM Jul 07, 2020 | Sriram |

ಉಡುಪಿ: ಅನಗತ್ಯವಾಗಿ ಪೋಲಾಗಿ ಸಮುದ್ರ ಸೇರುವ ಪ್ಲಾಸ್ಟಿಕ್‌ಗಳು ಇನ್ನು ಮಂದೆ ಜಿಲ್ಲೆಯಲ್ಲಿ ಉತ್ತಮ ಕಾರ್ಯಕ್ಕೆ ಬಳಕೆಯಾಗಲಿವೆ.

Advertisement

ಜಿಲ್ಲೆಯ 158 ಗ್ರಾ.ಪಂ.ಗಳಲ್ಲಿ ಮಳೆಗಾಲ ಮುಗಿದ ಬಳಿಕ ಸ್ವಚ್ಛ  ಭಾರತ್‌ ಯೋಜನೆಯಡಿ 300 ಮೀ. ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ 100 ಲಕ್ಷ ಟನ್‌ಗಳಷ್ಟು ಪ್ಲಾಸ್ಟಿಕ್‌ ಅಗತ್ಯವಿದೆ. ಪ್ರಸ್ತುತ ಕೇವಲ 10 ಲಕ್ಷ ಟನ್‌ ಲಭ್ಯವಾಗುತ್ತಿದ್ದು, ಸಮುದ್ರ ಸೇರುವ 80 ಲಕ್ಷ ಟನ್‌ ಪ್ಲಾಸ್ಟಿಕ್‌ ರಕ್ಷಿಸುವ ಅನಿವಾರ್ಯ ಎದುರಾಗಿದೆ.

ಉಡುಪಿ ಜಿಲ್ಲೆಯಲ್ಲಿ ನಿತ್ಯ 350 ಟನ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 75 ಟನ್‌ಗಳಷ್ಟು ಪ್ಲಾಸ್ಟಿಕ್‌ ಪಾಲಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ಹಿನ್ನೆಲೆಯಲ್ಲಿ ಈಗಾಗಲೇ ಅಲೆವೂರು, ವಂಡ್ಸೆ ಗ್ರಾ.ಪಂ.ವ್ಯಾಪ್ತಿಯಲ್ಲಿ ತಲಾ 300 ಮೀ. ಪ್ಲಾಸ್ಟಿಕ್‌ ರಸ್ತೆಯನ್ನು ಪ್ರಾಯೋಗಿಕವಾಗಿ ರೂಪಿಸಿದ್ದು, ಸಿಲ್ವರ್‌ ಕೋಟೆಡ್‌ ಪ್ಲಾಸ್ಟಿಕ್‌ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಕೆಲವೆಡೆ ಈಗಾಗಲೇ ಸ್ಥಾಪನೆ
ಉಡುಪಿ, ಕಾರ್ಕಳ, ಕುಂದಾಪುರ ತಾ.ಪಂ.ಅನುದಾನದಲ್ಲಿ ಪ್ಲಾಸ್ಟಿಕ್‌ ಪುಡಿ ಮಾಡುವ ಯಂತ್ರ (ಶ್ರೆಡ್ಡರ್‌)ವನ್ನು ತಲಾ 5 ಲ.ರೂ. ವೆಚ್ಚದಲ್ಲಿ ಖರೀದಿಸಿದ್ದು, ಕುಂದಾಪುರದ ವಂಡ್ಸೆ, ಉಡುಪಿಯ 80 ಬಡಗಬೆಟ್ಟು, ಕಾರ್ಕಳದ ಹೆಬ್ರಿಯಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ.

ಸಂಗ್ರಹಿಸಿಟ್ಟರೆ ಉತ್ತಮ
ಜನರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದಾಗಿ ನಗರ, ಸ್ಥಳೀಯ ಸಂಸ್ಥೆಗಳಿಗೆ ವಿಲೇವಾರಿ ಮಾಡಲು ಸಮಸ್ಯೆ ಉಂಟಾಗುತ್ತಿದೆ. ಗುಜರಿ ಹೆಕ್ಕುವವರ ಸಂಖ್ಯೆಯೂ ಕಡಿಮೆಯಾಗಿದ್ದು, ಕೆಲವೊಂದು ಪ್ಲಾಸ್ಟಿಕ್‌ಗಳು ಮರುಬಳಕೆಗೂ ಯೋಗ್ಯವಲ್ಲದಂತಿರುತ್ತವೆ. ಇವುಗಳನ್ನು ಸಂಗ್ರಹಿಸಿಟ್ಟರೆ ಪ್ಲಾಸ್ಟಿಕ್‌ ರಸ್ತೆಗೆ ಸದುಪಯೋಗಿಸಬಹುದಾಗಿದೆ.

Advertisement

6 ಲೋಡುಗಳಷ್ಟು ತ್ಯಾಜ್ಯ ಬಾಕಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಗ್ರಹಿಸಿದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಪ್ರತ್ಯೇಕಿಸಿ ಏಜೆನ್ಸಿ ಗಳಿಗೆ ಮಾರಾಟ ಮಾಡಿ ಎಸ್‌ಎಲ್‌ಆರ್‌ಎಂ ಘಟಕಗಳು ಆದಾಯ ಗಳಿಸುತ್ತಿವೆ. ಈಗಾಗಲೇ ಸುಮಾರು 5ಲೋಡುಗಳಷ್ಟು ಹಳೆ ಚಾಪೆ, ಚಪ್ಪಲಿ, ಶೂಗಳನ್ನು ಎಸ್‌ಎಲ್‌ಆರ್‌ಎಂ ಘಟಕಗಳ ಮೂಲಕ ಸಿಮೆಂಟ್‌ ಫ್ಯಾಕ್ಟರಿಗೆ ಕಳುಹಿಸಲಾಗಿದೆ. ಇನ್ನೂ ಆರು ಲೋಡುಗಳಷ್ಟು ಕಳುಹಿಸಲು ಬಾಕಿಯಿದೆ.

ಬಾಳಿಕೆ ಹೆಚ್ಚು
300 ಮೀ. ರಸ್ತೆಗೆ 1.32 ಲ.ರೂ.ವೆಚ್ಚವಾಗುತ್ತಿದ್ದು, 300 ಕೆ.ಜಿ. ಪ್ಲಾಸ್ಟಿಕ್‌, ಕುದಿಯುವ ಡಾಮರು ಜತೆಗೆ ಮಿಶ್ರಣ ಮಾಡಿ ಬಳಸಿದರೆ ಡಾಮರು ರಸ್ತೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ನಗರ, ಗ್ರಾಮೀಣ, ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾದ ಪ್ಲಾಸ್ಟಿಕ್‌ ಸಮಸ್ಯೆ ನೀಗಲು ಸಾಧ್ಯವಿದೆ.

1ಕಿ.ಮೀ. ರಸ್ತೆಗೆ 1ಟನ್‌ ಪ್ಲಾಸ್ಟಿಕ್‌!
ಒಂದು ಕಿ.ಮೀ.ರಸ್ತೆಗೆ ಒಂದು ಟನ್‌ ಪ್ಲಾಸ್ಟಿಕ್‌ ಬೇಕು. ಕೇರಳದಲ್ಲಿ 2014ರಿಂದ ಶುಚಿತ್ವ ಮಿಷನ್‌ ಯೋಜನೆಯಡಿ 9,700 ಟನ್‌ ಪ್ಲಾಸ್ಟಿಕ್‌ ಬಳಸಿ 246 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ 100 ಲಕ್ಷ ಟನ್‌ ಪ್ಲಾಸ್ಟಿಕ್‌ ಅಗತ್ಯವಿದ್ದರೆ ಕೇವಲ 10 ಲಕ್ಷ ಟನ್‌ ಲಭ್ಯವಾಗುತ್ತಿದೆ. 80 ಲಕ್ಷ ಟನ್‌ ಪ್ಲಾಸ್ಟಿಕ್‌ ಪ್ರತಿವರ್ಷ ಸಮುದ್ರ ಪಾಲಾಗುತ್ತಿದೆ.

ಲ್ಯಾಂಡ್‌ ಫಿಲ್ಲಿಂಗ್‌
ಸಮಸ್ಯೆ ಪರಿಹಾರ
ಸಂಗ್ರಹಿತ ಪ್ಲಾಸ್ಟಿಕ್‌ ವ್ಯವಸ್ಥಿತ ವಿಲೇವಾರಿ ಮಾಡಿದರೂ ಶೇ.20ರಷ್ಟು ಪ್ಲಾಸ್ಟಿಕ್‌ ವ್ಯರ್ಥವಾಗುತ್ತಿದೆ. ಇದನ್ನು ರಸ್ತೆ ನಿರ್ಮಾಣಕ್ಕೆ ಬಳಸಿದರೆ ಲ್ಯಾಂಡ್‌ ಫಿಲ್ಲಿಂಗ್‌ ಸಮಸ್ಯೆ ನೀಗಲಿದೆ. ಈ ಕಾರಣಕ್ಕಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ.ವ್ಯಾಪ್ತಿ ರಸ್ತೆಗಳಲ್ಲಿಯೂ ಪ್ಲಾಸ್ಟಿಕ್‌ ಮಿಶ್ರಿತ ರಸ್ತೆ ನಿರ್ಮಾಣದ ಉದ್ದೇಶ ಹೊಂದಲಾಗಿದೆ.
-ದಿನಕರ ಬಾಬು, ಶ್ರೀನಿವಾಸ ರಾವ್‌, ಅಧ್ಯಕ್ಷರು/ ಮುಖ್ಯಯೋಜನಾಧಿಕಾರಿ, ಜಿ.ಪಂ., ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next