ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್ ಅನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶ ಮಾಡಲು ನಿರ್ಧರಿಸಿರುವ ತೋಟಗಾರಿಕೆ ಇಲಾಖೆ, ಉದ್ಯಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ. ಈಗಾಗಲೇ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ತಡೆಹಿಡಿಯಲಾಗಿದ್ದು, ಉದ್ಯಾನವನದಲ್ಲೂ ಪ್ಲಾಸ್ಟಿಕ್ ನೀರಿನ ಬಾಟಲಿ, ತಿಂಡಿ ತಿನಿಸುಗಳ ಕವರ್‌ಗಳನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಅಕ್ರಮವಾಗಿ ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ 100ರಿಂದ 500 ರೂ.ವರೆಗೂ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ. ನೀರಿನ ಬಾಟಲ್ ನಿಷೇಧಿಸಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಿರಲಿ ಎಂದು ಉದ್ಯಾನದ ಒಳಗೆ ಏಳು ಕಡೆ ಕುಡಿಯುವ ನೀರಿನ ಘಟಕ, ಒಂದು ಆರ್.ಒ ಶುದ್ಧೀಕರಣ ಘಟಕ ಹಾಗೂ ತಾತ್ಕಾಲಿಕ ನೀರಿನ ಘಟಕಗಳ ವ್ಯವಸ್ಥೆ ಮಾಡಲಾಗಿದೆ.
ಉದ್ಯಾನದ ಒಳ ಭಾಗದ ವ್ಯಾಪಾರ ಮಳಿಗೆಗಳಲ್ಲೂ ಹಾಗೂ ಅನಧಿಕೃತವಾಗಿ ವ್ಯಾಪಾರ ಮಾಡುವರಿಗೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಇನ್ನು ಸಾರ್ವಜನಿಕರು ಪ್ಲಾಸ್ಟಿಕ್ ತರದಂತೆ ತಪಾಸನೆ ಕೈಗೊಳ್ಳಲು ಲಾಲ್‌ಬಾಗ್‌ನ ಎಲ್ಲ ದ್ವಾರಗಳಲ್ಲಿಯೂ ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ.
ಸಾರ್ವಜನಿಕರು ಉದ್ಯಾನವನಕ್ಕೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ತರುವಂತಿಲ್ಲ. ಲಾಲ್‌ಬಾಗ್ ಸಸ್ಯತೋಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿಸಲು ವಾಯು ವಿಹಾರಿಗಳು, ಸಾರ್ವಜನಿಕರು ಸಹಕರಿಸಬೇಕು.
-ಚಂದ್ರಶೇಖರ್, ತೋಟಗಾರಿಕೆ ಉಪ ನಿರ್ದೇಶಕ, ಲಾಲ್‌ಬಾಗ್