Advertisement

ಮೂಲದಲ್ಲೇ ತ್ಯಾಜ್ಯ ವಿಂಗಡಣೆಗೆ ಪಾಲಿಕೆ ಸಜ್ಜು

12:34 PM Mar 14, 2018 | Team Udayavani |

ಮೈಸೂರು: ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡುವ ಬಗ್ಗೆ ಪೌರಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಪೋ›ತ್ಸಾಹಿಸಲು ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಮೈಸೂರು ಮಹಾನಗರ ಪಾಲಿಕೆ ಯೋಜನೆ ರೂಪಿಸಿದ್ದು, ಮೂಲದಲ್ಲೇ ತ್ಯಾಜ್ಯವನ್ನು ವಿಂಗಡಿಸುವ ಪೌರಕಾರ್ಮಿಕರಿಗೆ ನಗರದಲ್ಲಿ ದಿನನಿತ್ಯ ಪ್ರೋತ್ಸಾಹಧನ ನೀಡಲು ಮುಂದಾಗಿದೆ.

Advertisement

ನಗರದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಕೈಗೊಂಡಿರುವ ಮೈಸೂರು ಮಹಾನಗರ ಪಾಲಿಕೆ ಇದೀಗ ಸಿಎಸ್‌ಆರ್‌ ಯೋಜನೆಯಡಿ ಐಟಿಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆ ಹಿನ್ನೆಲೆಯಲ್ಲಿ ಐಟಿಸಿ ಕಂಪನಿಯ ಸ್ವಯಂ ಸೇವಕರು ನಗರ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ, ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮಾಡುವ ಬಗ್ಗೆ ಅರಿವು ಮೂಡಿಸಲಿದ್ದಾರೆ.

ಅಲ್ಲದೆ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸುವ ಪೌರಕಾರ್ಮಿಕರು ತಾವು ಸಂಗ್ರಹಿಸಿದ ತಾಜ್ಯವನ್ನು ಮೂಲದಲ್ಲೇ ವಿಂಗಡಿಸಿ, ನಗರ ಪಾಲಿಕೆಯ 49 ತಾಜ್ಯ ವಿಲೇವಾರಿ ಘಟಕಗಳಿಗೆ ನೀಡಿದರೆ ಐಟಿಸಿ ಕಂಪನಿಯು 150 ರಿಂದ 200 ರೂ.ಗಳ ಪೋ›ತ್ಸಾಹಧನ ನೀಡಲಿದೆ.

ಆರ್ಥಿಕ ಸ್ಥಿತಿ ಸುಧಾರಣೆ: ಕೇವಲ ಪೌರಕಾರ್ಮಿಕರು ಮಾತ್ರವಲ್ಲದೆ, ಸಾರ್ವಜನಿಕರು ಸಹ ಮೂಲದಲ್ಲೇ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ಐಟಿಸಿ ಕಂಪನಿಗೆ ಪೂರೈಸಿಸಬಹುದಾಗಿದ್ದು, ಅವರಿಗೂ ಸಹ ಹಣ ನೀಡಲಾಗುವುದು.

ನಗರ ಪಾಲಿಕೆ ಹಾಗೂ ಐಟಿಸಿ ಕಂಪನಿಯ ಈ ಒಡಂಬಡಿಕೆಯು ತ್ಯಾಜ್ಯಗಳ ನಿರ್ವಹಣೆಯಲ್ಲಿ ಹೆಚ್ಚಿನ ನೆರವಾಗುವುದಲ್ಲದೆ, ಸ್ವತ್ಛತಾ ಕಾರ್ಯದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸಹ ಸುಧಾರಿಸಲಿದೆ. ಅಲ್ಲದೆ ಬಹುತೇಕ ಮಂದಿ ಬೃಹತ್‌ ಪ್ರಮಾಣದ ತ್ಯಾಜ್ಯವನ್ನು ಹರಿಯುವ ನೀರಿನಲ್ಲಿ ವಿಲೇವಾರಿ ಮಾಡುತ್ತಿದ್ದು,

Advertisement

ಇದರ ನಿಯಂತ್ರಣಕ್ಕೂ ನೆರವಾಗಲಿದೆ. ಈ ರೀತಿ ವಿಂಗಡಣೆಯಾಗಿರುವ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಐಟಿಸಿ ಕಂಪನಿಯು ವಿವಿಧ ಉತ್ಪನ್ನಗಳನ್ನು ತಯಾರಿಸಲು, ಮರುಬಳಕೆ ಮಾಡಲಿದೆ ಎಂದು ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌ ಮಾಹಿತಿ ನೀಡಿದರು.

ತಿಂಗಳಾಂತ್ಯಕ್ಕೆ ಆರಂಭ: ನಗರದಲ್ಲಿ ಸದ್ಯ ಪ್ರತಿನಿತ್ಯ 410 ಟನ್‌ ತ್ಯಾಜ್ಯ ಸಂಗ್ರಹವಾಗಲಿದ್ದು, ಇದರಲ್ಲಿ ಶೇ.70 ಹಸಿ ಕಸ ಹಾಗೂ ಶೇ.30 ತ್ಯಾಜ್ಯ ಸಂಗ್ರಹವಾಗಲಿದೆ. ನಗರ ಪಾಲಿಕೆ ಹಾಗೂ ಐಟಿಸಿ ಕಂಪನಿಯೊಂದಿಗಿನ ಒಡಂಬಡಿಕೆ ಮಾಡಿಕೊಳ್ಳಲು ಕೆಲವು ತಿಂಗಳ ಹಿಂದಷ್ಟೇ ಸರ್ಕಾರದಿಂದ ಅನುಮತಿ ಲಭಿಸಿದೆ. ಹೀಗಾಗಿ ಪಾಲಿಕೆ ಹಾಗೂ ಐಟಿಸಿ ಕಂಪನಿಯ ಒಡಂಬಡಿಕೆಯಂತೆ ಮೂಲದಲ್ಲೇ ಒಣ ತ್ಯಾಜ್ಯ ಬೇರ್ಪಡಿಸುವ ಯೋಜನೆ ಈ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಸದ್ಯ 1700 ಪೌರರ್ಕಾರ್ಮಿಕರಿದ್ದು, ಇವರಲ್ಲಿ 600 ಮಂದಿ ಕಾಯಂ ಉದ್ಯೋಗಿಗಳಾಗಿದ್ದಾರೆ. ಉಳಿದವರು ಪಾಲಿಕೆಯ 65 ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಪೌರಕಾರ್ಮಿಕರಿಗೆ 22,000 ರೂ. ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೆ 17,000 ರೂ. ವೇತನ ನೀಡಲಾಗುತ್ತಿದೆ.

ದಂಡ ವಿಧಿಸಲು ಚಿಂತನೆ: ಐಟಿಸಿ ಕಂಪನಿಯೊಂದಿಗಿನ ಒಡಂಬಡಿಕೆಯಂತೆ ಮೂಲದಲ್ಲೇ ಒಣ ತ್ಯಾಜ್ಯ ಬೇರ್ಪಡಿಸುವ ಯೋಜನೆ ಪ್ರಾರಂಭಿಸಿದ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲು ನಗರ ಪಾಲಿಕೆ ತೀರ್ಮಾನಿಸಿದೆ. ನಗರದ ವಿವಿಧೆಡೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ 19 ಸ್ಥಳಗಳನ್ನು ನಗರ ಪಾಲಿಕೆ ಈಗಾಗಲೇ ಗುರುತಿಸಿದೆ. ಈ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರಿಗೆ 500 ರಿಂದ 1 ಸಾವಿರ ರೂ.ವರೆಗೆ ದಂಡ ವಿಧಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next