Advertisement

ಜನ ಅರಿತರೆ ಮಾತ್ರ ಪ್ಲಾಸ್ಟಿಕ್‌ ಸಂಹಾರ!

09:09 AM Jun 06, 2019 | Lakshmi GovindaRaj |

“ಪ್ಲಾಸಿಕ್‌ ಮುಕ್ತ ಪರಿಸರದತ್ತ’ ಸರಣಿಯ ಭಾಗವಾಗಿ “ಉದಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಪಾಲ್ಗೊಂಡಿದ್ದರು. ಪ್ಲಾಸ್ಟಿಕ್‌ ಸಮಸ್ಯೆ ಪರಿಹಾರ ಜನಜಾಗೃತಿಯಿಂದ ಮಾತ್ರ ಸಾಧ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಆಡಳಿತ ಯಂತ್ರದ ಕ್ರಮಗಳು, ತ್ಯಾಜ್ಯ ವಿಲೇವಾರಿಗೆ ಸಾರ್ವಜನಿಕರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದಿರುವ ವಿಷಯಗಳ ಮೇಲೆ ಸಂವಾದದಲ್ಲಿ ಅತಿಥಿಗಳು ಬೆಳಕು ಚೆಲ್ಲಿದರು.

Advertisement

ಬೆಂಗಳೂರು: ಜನರಲ್ಲಿ ಪರಿಸರ ಪ್ರಜ್ಞೆ, ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ ಬಾರದ ಹೊರತು ಪ್ಲಾಸ್ಟಿಕ್‌ ಎಂಬ ರಕ್ತ ಬೀಜಾಸುರನ ಸಂಹಾರ ಸಾಧ್ಯವಿಲ್ಲ. ಜನರು ನಿಷೇಧಿತ ಪ್ಲಾಸ್ಟಿಕ್‌ ಹೆಚ್ಚೆಚ್ಚು ಬಳಸಿದಷ್ಟೂ ಕ್ಯಾನ್ಸರ್‌ ಮಹಾಮಾರಿಗೆ ಹತ್ತಿರವಾಗುತ್ತಾರೆ…

ದಿನ ನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್‌ ನಮ್ಮನ್ನು ಆವರಿಸಿಕೊಂಡಿರುವ ಪರಿ, ಅದರಿಂದ ಪರಿಸರ ಹಾಗೂ ಮನುಷ್ಯನ ಜೀವದ ಮೇಲಾಗುತ್ತಿರುವ ಪರಿಣಾಮಗಳು, ಹೆಚ್ಚು ಪ್ಲಾಸ್ಟಿಕ್‌ ಬಳಕೆಯಿಂದ ಬರುವ ಕಾಯಿಲೆಗಳು, ಪ್ಲಾಸ್ಟಿಕ್‌ ಮರು ಬಳಕೆ ಹೇಗೆ? ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಉದಯವಾಣಿಯು “ಪ್ಲಾಸ್ಟಿಕ್‌ ಮುಕ್ತ ಪರಿಸರದತ್ತ’ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

ಸರಣಿಯ ಭಾಗವಾಗಿ “ಉದಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಹಾಗೂ ಬಿಬಿಎಂಪಿ ಪರವಾಗಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ಪ್ಲಾಸ್ಟಿಕ್‌ ಸಮಸ್ಯೆ ಪರಿಹಾರ ಜನಜಾಗೃತಿಯಿಂದ ಮಾತ್ರ ಸಾಧ್ಯವೆಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ದಿನ ನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಹೇಗೆ ನಾವು ದಾಸರಾಗಿದ್ದೇವೆ, ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಅರಿವಿದ್ದರೂ ಬಳಸುವ ಜನರ ಧೋರಣೆ ಕುರಿತಂತೆ ಟಿ.ವಿ.ರಾಮಚಂದ್ರ ಅವರು ವಿಷಯ ಮಂಡಿಸಿದರೆ, ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿಯಾಗಿ ಆಗದಿರಲು ಪಾಲಿಕೆಯ ಮುಂದಿರುವ ಸವಾಲುಗಳು, ಪಾಲಿಕೆಯಿಂದ ಕೈಗೊಂಡ ಕ್ರಮಗಳು, ಜನರ ಪಾಲ್ಗೊಳ್ಳುವಿಕೆ ಹೊರತಾಗಿ ಪ್ಲಾಸ್ಟಿಕ್‌ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬ ಅಂಶಗಳ ಮೇಲೆ ಮಂಜುನಾಥ ಪ್ರಸಾದ್‌ ಬೆಳಕು ಚೆಲ್ಲಿದರು.

Advertisement

ಹೆಚ್ಚಿನ ಕೊಳೆಗೇರಿಗಳಿರುವ ಕಡೆ ತ್ಯಾಜ್ಯ ವಿಂಗಡಣೆ ಪ್ರಮಾಣ ಹೆಚ್ಚಾಗಿದ್ದರೆ, ಸುಶಿಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಗಳಲ್ಲಿ ಹಸಿ ಮತ್ತು ಒಣ ಕಸದ ವಿಂಗಡಣೆ ಸಮರ್ಪಕವಾಗಿ ಆಗುತ್ತಿಲ್ಲ. ಜತೆಗೆ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಹೆಚ್ಚಿನ ಬ್ಲಾಕ್‌ಸ್ಪಾಟ್‌ಗಳು ನಿರ್ಮಾಣವಾಗುತ್ತಿರುವ ಬಗ್ಗೆ ರಾಮಚಂದ್ರ ಅವರು ಬೇಸರ ವ್ಯಕ್ತಪಡಿಸಿದರು.

ಹಲವಾರು ಜಾಗೃತಿ ಕಾರ್ಯಕ್ರಮಗಳ ಬಳಿಕವೂ ಜನರು ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಿಸಲು ಮುಂದಾಗುತ್ತಿಲ್ಲ. ಹೀಗಾಗಿ ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಇನ್ನು ಮುಂದೆ ತ್ಯಾಜ್ಯ ವಿಂಗಡಣೆ ಮಾಡದ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ಮಾರ್ಷಲ್‌ಗ‌ಳು ದಂಡ ವಿಧಿಸಲಿದ್ದಾರೆ. ಜತೆಗೆ ಲಿಂಕ್‌ ವರ್ಕ್‌ರ್ ಹಾಗೂ ಮಾರ್ಷಲ್‌ಗ‌ಳು ಪ್ಲಾಸ್ಟಿಕ್‌ನಿಂದಾಗುವ ಸಮಸ್ಯೆಗಳ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ನಗರದಲ್ಲಿ ತ್ಯಾಜ್ಯ ವಿಂಗಡಣೆ ಆಗದ ಹೊರತು ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಹಾಗೂ ಒಣ ತ್ಯಾಜ್ಯ ವಿಲೇವಾರಿ ಸಾಧ್ಯವಿಲ್ಲ. ಸದ್ಯ ನಗರದಲ್ಲಿ ಮಿಶ್ರತ್ಯಾಜ್ಯ ಹೆಚ್ಚಾಗಿರುವುದರಿಂದ ತ್ಯಾಜ್ಯವನ್ನು ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ಇನ್ನು ಪಾಲಿಕೆಯಿಂದ ಕರೆಯಲಾಗಿರುವ ಪ್ರತ್ಯೇಕ ಹಸಿ ತ್ಯಾಜ್ಯ ಸಂಗ್ರಹ ಟೆಂಡರ್‌ ಕುರಿತು ಪಾಲಿಕೆಗೆ ಸದಸ್ಯರು ಅಪಸ್ವರ ಎತ್ತಿದ್ದಾರೆ. ನಗರದಲ್ಲಿ ಹಸಿತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸದ ಹೊರತು ಪ್ಲಾಸ್ಟಿಕ್‌ ಹಾಗೂ ಘನತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆಯುಕ್ತರು.

ಗುತ್ತಿಗೆದಾರರ ಲಾಬಿ ಅಡ್ಡಿ: ಪಾಲಿಕೆಯ ಆಯುಕ್ತರು ತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಮಹತ್ವ ನೀಡಿದರೂ, ನಗರದಲ್ಲಿರುವ ಗುತ್ತಿಗೆದಾರರ ಮಾಫಿಯಾ ಅದಕ್ಕೆ ಅವಕಾಶ ನೀಡುವುದಿಲ್ಲ. ಸಾವಿರ ಆಯುಕ್ತರು ಬಂದರೂ ಘನತ್ಯಾಜ್ಯ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಈ ಮಾಫಿಯಾ ಬಿಡುವುದಿಲ್ಲ. ಹೀಗಾಗಿ ಜನರು ಜಾಗೃತರಾಗಬೇಕಿದ್ದು, ಪ್ಲಾಸ್ಟಿಕ್‌ನಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಹಾಗೂ ನಮ್ಮ ಮಕ್ಕಳಿಗೆ ನಾವೇ ರೋಗಗಳು ಬರುವಂತೆ ಮಾಡುತ್ತಿದ್ದೇವೆ ಎಂಬುದನ್ನು ಅರಿಯಬೇಕಿದೆ ಎಂದು ರಾಮಚಂದ್ರ ಅವರು ಸಲಹೆ ನೀಡಿದರು.

ಉದಯವಾಣಿ ಕಾಳಜಿಗೆ ಮೆಚ್ಚುಗೆ: ಜನರಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆರಂಭಿಸಿದ “ಪ್ಲಾಸ್ಟಿಕ್‌ ಮುಕ್ತ ಪರಿಸರದತ್ತ’ ಸರಣಿಯಡಿ “ಪ್ಲಾಸ್ಟಿಕ್‌ ತ್ಯಾಜ್ಯವೆಂಬ ಮಾರಕಾಸುರ’, ಪ್ಲಾಸ್ಟಿಕ್‌ ಮರುಬಳಕೆಗಿವೆ ನಾನಾ ಮಾರ್ಗಗಳು’, “ಅರಿತು ದೇಹದಲ್ಲಿ ಬೆರೆತ ಪ್ಲಾಸ್ಟಿಕ್‌!’, “ಮೈಕ್ರೋಪ್ಲಾಸ್ಟಿಕ್‌ ಎಂಬ ರಕ್ತ ಬೀಜಾಸುರ!’ ಎಂಬ ಶೀರ್ಷಿಕೆಗಳಡಿ ವಿವರವಾದ ವರದಿಗಳನ್ನು “ಉದಯವಾಣಿ’ ಪ್ರಕಟಿಸಿತ್ತು. ಅದಕ್ಕೆ ಸಂವಾದದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಟಿ.ರಾಮಚಂದ್ರ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ಡ್‌ಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಸೂಕ್ತ: ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಜತೆಗೆ ವಾರ್ಡ್‌ ಅಥವಾ ಬಡಾವಣೆಗಳಲ್ಲಿ ಘನತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್‌ಗಳನ್ನು ಹಣಕೊಟ್ಟು ಖರೀದಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿದರೆ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅಭಿಪ್ರಾಯಪಟ್ಟರು.

ಜನ ಕಸ ಎಲ್ಲಿಯಂದರಲ್ಲಿ ಎಸೆಯುತ್ತಿದ್ದಾರೆ ಎಂದರೆ, ಅದು ಅವರ ತಪ್ಪು ಮಾತ್ರವಲ್ಲ, ಅದರಲ್ಲಿ ವ್ಯವಸ್ಥೆಯ ಲೋಪವೂ ಇದೆ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ, ಖಂಡಿತವಾಗ್ಯೂ ರಸ್ತೆ ಬದಿಗಳಲ್ಲಿ, ಫ್ಲೇಓವರ್‌ ಕೆಳಭಾಗದಲ್ಲಿ ಕಸ ಎಸೆಯುವುದು ಕಡಿಮೆಯಾಗುತ್ತದೆ. ವಿದೇಶಗಳ ಮಾದರಿಯಲ್ಲಿ ವಾರ್ಡ್‌ ಅಥವಾ ಲೇಔಟ್‌ ಸಮೀಪದಲ್ಲೇ ಒಣಕಸ (ಪ್ಲಾಸ್ಟಿಕ್‌) ಖರೀದಿ ಮಾಡುವ ವ್ಯವಸ್ಥೆಯನ್ನು ಮಾಡಬೇಕು. ಒಂದು ಕೆ.ಜಿ. ಪ್ಲಾಸ್ಟಿಕ್‌ಗೆ 1 ರೂ. ಅಥವಾ 1.50 ರೂ. ನೀಡಿ ಖರೀದಿ ಮಾಡಿದರೆ, ಜನರು ಖಂಡಿತವಾಗಿಯೂ ಪ್ಲಾಸ್ಟಿಕ್‌ ಎಲ್ಲಿಯಂದರಲ್ಲಿ ಎಸೆಯದೇ ಖರೀದಿ ಕೇಂದ್ರಕ್ಕೆ ತಂದು ಕೊಡುತ್ತಾರೆ. ಈ ವ್ಯವಸ್ಥೆ ಆದಷ್ಟು ಬೇಗ ಜಾರಿಯಾಗಬೇಕು ಎಂದರು.

ಬಿ.ಎಸ್ಸಿ, ಎಂ.ಎಸ್ಸಿ ಓದಿರುವವರೇ ಕಸವನ್ನು ಕೆರೆಗೆ ಎಳೆಸುತ್ತಾರೆ. ನಾವು ಅವರಿಗೆ ಶಿಕ್ಷಣ ಮಾತ್ರ ಕಲಿಸಿದ್ದೇವೆ. ಆದರೆ, ಮಾನವರಾಗಿ ಹೇಗೆ ಬದುಕೆಂಬುದನ್ನು ಕಲಿಸಿಲ್ಲ. ಕೆರೆಗೆ ಕಸ ಹಾಕುವುದರಲ್ಲಿ ಸುಶಿಕ್ಷಕರದ್ದೇ ಸಿಂಹಪಾಲಿದೆ. ಮನೆಯಲ್ಲಿ ಕಸ ವಿಂಗಡಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿ ಮಾಡಿ, ಅದು ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು.

ಜನರಲ್ಲಿ ಅರಿವು ಮೂಡಿಸದೇ ಪ್ಲಾಸ್ಟಿಕ್‌ ನಿಷೇಧ ಸಾಧ್ಯವೇ ಇಲ್ಲ. ಪ್ಲಾಸ್ಟಿಕ್‌ ಬಳಕೆಯಿಂದ ವೈಯಕ್ತಿಕ ಜೀವನ, ಸಮಾಜ ಹಾಗೂ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು, ಪ್ಲಾಸ್ಟಿಕ್‌ ಸಂಗ್ರಹಕ್ಕೆ ಪರ್ಯಾಯ ವ್ಯವಸ್ಥೆ ಮಾಡಲೇಬೇಕದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next