Advertisement

ಬೇಸಿಗೆಯಲ್ಲಿ ವರವಾದ ಪ್ಲಾಸ್ಟಿಕ್‌ ಹೊದಿಕೆ ಕೆರೆ

11:14 AM Mar 01, 2022 | Team Udayavani |

ಆಳಂದ: ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ (ಎನ್‌ ಎಚ್‌ಎಂ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ ಕೆವೈ) ಅಡಿ ಜಿಲ್ಲೆಯ ಆಯ್ದ ರೈತರ ಹೊಲಗಳಲ್ಲಿ ಸಮುದಾಯ ಕೃಷಿ ಹೂಂಡ ಅಥವಾ ಸಮುದಾಯ ಕೆರೆ ನಿರ್ಮಾಣದಂತ ಕಾರ್ಯದಲ್ಲೂ ತಾಲೂಕಿನ ತೋಟಗಾರಿಕೆ ರೈತರು ಹಿಂದೆ ಬೀಳದೇ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

Advertisement

ಕೊಳವೆ ಬಾವಿ, ತೆರೆದ ಬಾವಿಗಳಿಂದ ನೀರುಣಿಸಿಕೊಂಡು ಕೃಷಿ ಮಾಡುವ ರೈತರಿಗೆ ಬೇಸಿಗೆಯಲ್ಲಿ ಅಂತರ್ಜಲ ಕೊರತೆಯಿಂದ ಉಂಟಾಗುವ ಬೆಳೆ ನಷ್ಟ ತಪ್ಪಿಸಿಕೊಳ್ಳಲು ಈ ಯೋಜನೆ ವರದಾನವಾಗಿದೆ. ಯೋಜನೆ ಅಡಿ ಸಮುದಾಯ ಕೆರೆ ನಿರ್ಮಿಸಿ ವಿವಿಧ ಮೂಲಗಳಿಂದ ನೀರು ಸಂಗ್ರಹಿಸಿ, ಬೆಳೆಗಳಿಗೆ ಬೇಕಾದಾಗ ಬಳಸಿಕೊಂಡು ಹೆಚ್ಚಿನ ಉತ್ಪಾದನೆ ಮಾಡಲಾಗುತ್ತಿದೆ. ಬಯಲು ನಾಡಿನ ಸಣ್ಣ-ಅತಿ ಸಣ್ಣ ರೈತರಿಗೂ ಈ ಯೋಜನೆ ಲಾಭ ದೊರೆಯುವಂತೆ ಮಾಡಬೇಕಿದೆ.

ತಾಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಇದುವರೆಗೂ ಆಳಂಗಾ, ಸಾವಳೇಶ್ವರ, ಸುಂಟನೂರ, ಖಜೂರಿ, ಚಿಂಚನಸೂರ, ನಿಂಬಾಳ, ತಡಕಲ್‌, ಸೇರಿ 30ಕ್ಕೂ ಹೆಚ್ಚು ಕಡೆಗಳಲ್ಲಿ ಸಮುದಾಯ ಕೆರೆ ನಿರ್ಮಾಣವಾಗಿ ಬಳಕೆಯಲ್ಲಿವೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಯುವ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡು ಬೇಸಿಗೆಯಲ್ಲೂ ತರಕಾರಿ, ಹಣ್ಣು, ಮಾವು, ನಿಂಬೆ, ಈರುಳ್ಳಿ ಹೀಗೆ ಅನೇಕ ರೀತಿಯ ಬೆಳೆ ಬೆಳೆದು ಲಾಭ ಪಡೆಯುತ್ತಿದ್ದಾರೆ.

ಈ ಯೋಜನೆಗಳಲ್ಲಿ ಸಾಮೂಹಿಕ ಕೆರೆ ಅಥವಾ ಕೃಷಿ ಹೊಂಡ ಕಾಮಗಾರಿ ಅನುಷ್ಠಾನವಿದೆ. ಪ್ರತಿವರ್ಷ ತಾಲೂಕಿಗೆ ಐದರಿಂದ 10 ಯೂನಿಟ್‌ ಗುರಿಗಳನ್ನು ಹೊಂದಿ ಘಟಕಗಳನ್ನು ನೀಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ತಾಲೂಕು ಕಚೇರಿಗೆ ನೀರು ಬಳಕೆದಾರ ಸಂಘದಿಂದ ಅರ್ಜಿ ಪಡೆದು, ಹಾಕಿದಾಗ ಅವರಿಗೆ ಜೇಷ್ಠತಾ ಆಧಾರದ ಮೇಲೆ ಅರ್ಹತೆ ಪರಿಗಣಿಸಿ, ಕಾಮಗಾರಿಯ ಕಾರ್ಯಾದೇಶ ನೀಡಲಾಗುತ್ತಿದೆ. ಅಲ್ಲದೇ, ಆರ್‌ಕೆವೈ ಅಡಿ ಸಂಘ ಮತ್ತು ವೈಯಕ್ತಿಕವಾಗಿ ಕೃಷಿ ಸಮುದಾಯ ಕೆರೆ ಮಾಡಿಕೊಂಡರೆ ಕಾಮಗಾರಿ ಬಳಿಕ 3ಲಕ್ಷದಿಂದ 5ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ತಾಲೂಕಿನ ಆಳಂಗಾ ಗ್ರಾಮದ ರೈತ ರವಿ ಪಾಟೀಲ ತಮ್ಮ ಜಮೀನಿನಲ್ಲಿ ಪ್ಲಾಸ್ಟಿಕ್‌ ಹೊದಿಕೆ ಕೆರೆ ನಿರ್ಮಿಸಿಕೊಂಡಿದ್ದಾರೆ. ನಿಂಬೆ, ಹೆಬ್ಬೇವು, ತರಕಾರಿ, ಮಾವು ಬೆಳೆಗೆ ಬೇಸಿಗೆಯಲ್ಲಿ ಕೊಳವೆ ಬಾವಿ ನೀರಿನ ಕೊರತೆ ಮನಗಂಡು ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಹತ್ತಿರದಲ್ಲಿ ಹರಿಯುವ ನಾಲಾ ನೀರನ್ನು ಹೊಂಡದಲ್ಲಿ ಸಂಗ್ರಹಿಸಿ ಬೇಕಾದಾಗ ಹನಿ ನೀರಾವರಿಗೆ ಅಳವಡಿಸಿಕೊಳ್ಳುತ್ತಿದ್ದಾರೆ.

Advertisement

ಅರ್ಜಿ ಸಲ್ಲಿಸಿದವರು ಈ ಕೃಷಿ ಹೊಂಡಕ್ಕೆ 500 ಮೈಕ್ರಾನ್‌ ಪ್ಲಾಸ್ಟಿಕ್‌ ಹೊದಿಕೆ ಮೂಲಕ ನೀರು ಹಿಂಗುವುದನ್ನು ತಪ್ಪಿಸಿ ಬಹುದಿನಗಳ ವರೆಗೆ ನೀರು ಸಂಗ್ರಹಿಸಿದರೆ ತೋಟಗಾರಿಕೆ ಬೆಳೆ, ಮೀನುಗಾರಿಕೆ ಅನುಕೂಲವಾಗುತ್ತಿದೆ. ಪ್ರಸಕ್ತ ಸಾಲಿನ ಸಾವಳೇಶ್ವರ, ಖಜೂರಿಯಲ್ಲಿನ ಸಮುದಾಯ ಕೆರೆ ಮುಕ್ತಾಯ ಹಂತದಲ್ಲಿವೆ. ರೈತರು ಕಾಮಗಾರಿ ಕಾರ್ಯಾದೇಶ ಪಡೆದು, 45x45x3 ಮೀ ಅಳತೆಯ (6500 ಘ.ಮೀ) ಸುಮಾರು 60×80 ಸಾವಿರ ಲಿಟರ್ಸ್‌ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿಕೊಂಡು 4 ಲಕ್ಷ ರೂ. ಸಹಾಯಧನ ಪಡೆದಿದ್ದಾರೆ. ಮಳೆಗಾಲದಲ್ಲಿ ಕೆರೆ, ಕಾಲುವೆ ಮತ್ತು ಇತರೆ ಮೂಲಗಳಿಂದ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ ಬೇಸಿಗೆಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಮೂಲಕ ತೋಟಗಾರಿಕೆ ಬೆಳೆ ವಿಸ್ತರಿಸಿಕೊಂಡಿದ್ದಾರೆ. ಹೊಂಡದಲ್ಲಿ ಮೀನು ಸಾಕಾಣಿಕೆ ಕೂಡಾ ಮಾಡಿ ಲಾಭ ಪಡೆಯುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ತಾಂತ್ರಿಕ, ಆರ್ಥಿಕ ನೆರವಿನಿಂದ ಕೃಷಿ ಹೊಂಡ ನಿರ್ಮಿಸಿಕೊಂಡು ನೀರಿನ ಕೊರತೆ ನೀಗಿಸಿ ವರ್ಷವಿಡಿ ಬೆಳೆ ಬೆಳೆದು ಆದಾಯ ದ್ವಿಗುಣ ಮಾಡಿಕೊಂಡಿದ್ದಾರೆ.

ವ್ಯಾಲಿಂ ಎಂಟು ಸಾವಿರ ಘನ ಮೀಟರ್‌ ನೀರು ಸಂಗ್ರಹ ಸಾಮರ್ಥ್ಯಕ್ಕೆ ಸಹಾಯಧನ ಶೇ. 50ರಂತೆ ಗರಿಷ್ಠ 5.30ಲಕ್ಷ ರೂ. ಸಹಾಯಧನವಿದೆ. ನೀರಿನ ಸಂಗ್ರಹ ಸಾಮರ್ಥ್ಯ ಒಂದು ಕೋಟಿಯಿಂದ 1.20 ಕೋಟಿ ಲೀಟರ್‌ ಇದೆ. ರೈತರು ಇದರ ಲಾಭ ಪಡೆಯಬೇಕು. -ಶಂಕರಗೌಡ ಪಾಟೀಲ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next