Advertisement

ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ನಿಷೇಧ ಬರೀ ನೋಟಿಸ್‌ಗೆ ಸೀಮಿತ?

11:24 PM Jan 28, 2020 | Team Udayavani |

ಉಡುಪಿ: ಜಿಲ್ಲೆಯಲ್ಲಿ ಪರಿಸರ ಹಾಗೂ ಜೀವಿಗಳ ಪ್ರಾಣಕ್ಕೆ ಎರವಾಗುವ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ಹೊರಡಿಸಿರುವ ಆದೇಶ ಕೇವಲ ನೋಟಿಸ್‌ಗೆ ಸೀಮಿತವಾಗಿದೆಯೇ? ಅಂಗಡಿಗಳ ಮೇಲೆ ದಾಳಿ ನಡೆದು ಒಂದಿಷ್ಟು ಪ್ಲಾಸ್ಟಿಕ್‌ ಚೀಲಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವರದಿ ಬರುತ್ತಿದ್ದರೂ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ನಿಷೇಧವಾಗಿಲ್ಲ ಎಂಬ ಸ್ಥಿತಿ ಇದೆ.

Advertisement

ಯಾವುದು ನಿಷೇಧ?
ಸರಕಾರದ ಆದೇಶದಂತೆ 40 ಮೈಕ್ರಾನಿಗಿಂತ ತೆಳುವಾದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಭಿತ್ತಿಪತ್ರ, ತೋರಣ, ಬಾವುಟ, ಫ್ಲೆಕ್ಸ್‌, ತಟ್ಟೆ, ಚಮಚ, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್‌ ಹಾಳೆ, ಥರ್ಮಾಕೋಲ್‌ನಿಂದ ತಯಾರಾದ ವಸ್ತುಗಳ ಬಳಕೆ ನಿಷೇಧಿಸಲಾಗಿದೆ.

ನಿಷೇಧವಿದ್ದರೂ ಮಾರಾಟ
ಜಿಲ್ಲಾಡಳಿತ ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ ಹಾಗೂ ಮಾರಾಟ, ಬಳಕೆ ನಿಷೇಧಿಸಿ 2019ರ ಅಕ್ಟೋಬರ್‌ 2ರಂದು ಆದೇಶ ಹೊರಡಿಸಿದೆ. ಆದರೆ ಉಡುಪಿ ನಗರ ಹೊರತುಪಡಿಸಿದರೆ ಜಿಲ್ಲೆಯಲ್ಲಿನ ಇತರ ನಗರ, ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಲ್ಲಿ ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂದು ಅಂಕಿ ಅಂಶಗಳು ಸಾರುತ್ತಿವೆ. ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಮದುವೆ ಸಮಾರಂಭ, ಅಂಗಡಿಗಳಲ್ಲಿ ರಾಜಾರೋಷವಾಗಿ ಗ್ರಾಹಕರಿಗೆ ವಸ್ತುಗಳನ್ನು ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ನಲ್ಲಿ ನೀಡಲಾಗುತ್ತಿದೆ.

ಪರಿಣಾಮಕಾರಿ ಅನುಷ್ಠಾನವಿಲ್ಲ
ಕಾಯ್ದೆ ಜಾರಿ ಬಳಿಕ ಆರಂಭದಲ್ಲಿ ಜಿಲ್ಲೆಯಲ್ಲೆಡೆ ವ್ಯಾಪಕ ಪ್ರಮಾಣದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತು ವಶಕ್ಕೆ ಪಡೆಯಲಾಗಿತ್ತು. ಪೇಪರ್‌ ಬ್ಯಾಗ್‌ಗಳೂ ಜಿಲ್ಲೆಯ ಹಲವೆಡೆ ಕಂಡುಬಂದಿದ್ದವು. ಆದರೆ, ಅಧಿಕಾರಿಗಳು ಆರಂಭದಲ್ಲಿ ತೋರಿಸಿದ ಉತ್ಸಾಹ ಅನಂತರದಲ್ಲಿ ತೋರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಇತ್ತಿಚೆಗೆ ಕೆಲ ದಿನಗಳಿಂದೀಚೆ ಜಿಲ್ಲೆಯ ಹಲವೆಡೆ ದಾಳಿ ಮಾಡಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯುತ್ತಿರುವುದು ಕೇಳಿಬರುತ್ತಿದ್ದರೂ ಕಾಟಾಚಾರದ ದಾಳಿ ಎಂಬಂತಾಗಿದೆ.

ನಿಷೇಧ ಕಡತಕ್ಕೆ ಸೀಮಿತ
ಜಿಲ್ಲೆಯಲ್ಲಿನ ಯಾವುದೇ ನಗರ, ಸ್ಥಳೀಯ ಸಂಸ್ಥೆಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಈ ಕಾಯ್ದೆ ಅನುಷ್ಠಾನ ಗೊಳಿಸಲು 5-6 ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಇದರಲ್ಲಿ ಸ್ಥಳೀಯ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಆದರೆ, ಈ ಕುರಿತು ಸಮಿತಿ ಸದಸ್ಯರ ಸಭೆ, ಜಂಟಿ ಸಭೆ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ನಿಷೇಧ ಎನ್ನುವುದು ಬರೀ ಕಾಗದಕ್ಕೆ ಸೀಮಿತವಾಗಿದೆ ಎಂಬ ಸಂಶಯ ಮೂಡುತ್ತಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ ಜಾರಿ
ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ನಗರಸಭೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿ 500 ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದು 70,000 ರೂ. ದಂಡ ಸಂಗ್ರಹಿಸಲಾಗಿದೆ. ಇಲ್ಲಿ ಕೇವಲ ಎಚ್ಚರಿಕೆ ಕೊಡಲಾಗುತ್ತಿದೆಯೆ ವಿನಾ ಪ್ರಕರಣ ದಾಖಲಿಸಿಕೊಂಡಿಲ್ಲ.

ಜನಜಾಗೃತಿ
ಜಿ.ಪಂ. ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ಸಹಕಾರದಲ್ಲಿ ಅಂಗಡಿಗಳಿಗೆ ತೆರಳಿ ಬಟ್ಟೆ ಚೀಲ ವಿತರಿಸಲಾಗಿದೆ. ಮರುಬಳಕೆಗೆ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೆಲ ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆ ಜನರು ಪ್ರೋತ್ಸಾಹ ನೀಡುತ್ತಿಲ್ಲ. ಗ್ರಾ.ಪಂ. ಮಟ್ಟದಲ್ಲಿ ಪ್ಲಾಸ್ಟಿಕ್‌ ನಿಷೇಧದ ಕುರಿತು ವಿಶೇಷ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. -ದಿನಕರ್‌ ಬಾಬು, ಅಧ್ಯಕ್ಷ ಜಿ. ಪಂ. ಉಡುಪಿ.

ಪರಿಣಾಮಕಾರಿಯಾಗಿ ಜಾರಿ
ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಂಡ ರಚಿಸಲಾಗಿದೆ. ಅಧಿಕಾರಿಗಳ ತಂಡ ಅಂಗಡಿಗಳಿಗೆ ದಿಢೀರ್‌ ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳುತ್ತಿದೆ.
-ಸ್ನೇಹಾ, ಪರಿಸರ ಎಂಜಿನಿಯರ್‌ ನಗರ ಸಭೆ ಉಡುಪಿ

ಪರ್ಯಾಯವೇನು?
ಪ್ಲಾಸ್ಟಿಕ್‌ ನಿಷೇಧಿಸುವಂತೆ ಅಧಿಕಾರಿ ಹೇಳುತ್ತಾರೆ. ಅದರೆ ಬಟ್ಟೆ ಚೀಲಕ್ಕೆ 5ರಿಂದ 15 ರೂ. ಕೈಯಿಂದ ನೀಡಬೇಕು. ಮೀನುಮಾರುಕಟ್ಟೆಗೆ ಬರುವ ಜನರು ಬರಿ ಕೈಯಲ್ಲಿ ಬರುತ್ತಾರೆ. ಚೀಲ ನೀಡದೆ ಇದ್ದರೆ ಮೀನು ಖರೀದಿಸದೆ ಹಾಗೇ ತೆರಳುತ್ತಾರೆ. ಮನೆ ಮನೆ ತೆರಳಿ ಮಾರಾಟ ಮಾಡುವುದಾದರೆ ಪ್ಲಾಸ್ಟಿಕ್‌ ಚೀಲದ ಅಗತ್ಯವಿಲ್ಲ.
-ಅಮ್ಮಣ್ಣಿ, ಮೀನು ಮಾರಾಟಗಾರರು.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next