Advertisement

 ನೆಟ್ಟಣಿಗೆಮುಡ್ನೂರು :ಮಹಿಳಾ, ಮಕ್ಕಳ ಗ್ರಾಮ ಸಭೆ

03:29 PM Nov 24, 2017 | |

ನೆಟ್ಟಣಿಗೆಮುಡ್ನೂರು: ಇಲ್ಲಿನ ಗ್ರಾ.ಪಂ. ಸಭಾಂಗಣದಲ್ಲಿ ಪುತ್ತೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುತ್ತೂರು ಶಿಕ್ಷಣ ಇಲಾಖೆ ಹಾಗೂ ನೆಟ್ಟಣಿಗೆಮುಡ್ನೂರು ಗ್ರಾ.ಪಂ. ವತಿಯಿಂದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ನಡೆಯಿತು.

Advertisement

ಸಂಪನ್ಮೂಲ ವ್ಯಕ್ತಿ ನೇತ್ರಾವತಿ ಸ್ತ್ರೀ ಶಕ್ತಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಜೋಹರ್‌ ನಿಸಾರ್‌ ಮಹಮ್ಮದ್‌ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರು ವಿವಿಧ ಸಂಘ ಸಂಸ್ಥೆಗಳಲ್ಲಿ ಸೇರಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ಜತೆಯಲ್ಲಿ ಮಹಿಳೆಯರು ಧೈರ್ಯ, ಛಲದಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಿದ್ದರೂ ವಿರೋಧಿಸುತ್ತ ಸಬಲೆಯಾಗಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾಳೆ. ಜೀವನದಲ್ಲಿ ಗಂಡ ಹೆಂಡತಿಯರ ಮಧ್ಯೆ ಎದುರಾಗುವ ಸಮಸ್ಯೆಗಳನ್ನು ಸ್ವಾಭಿಮಾನ ಬಿಟ್ಟು ಅಭಿಮಾನದಿಂದ ಮುಂದುವರಿಯಬೇಕು. ಸಣ್ಣ ಸಣ್ಣ ತಪ್ಪುಗಳನ್ನು ಹೊಂದಿಸಿಕೊಂಡು ಹೋದಾಗ ಸಂಸಾರ ಸುಖವಾಗಿರುತ್ತದೆ ಎಂದರು.

ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್‌ ಪಕ್ಕಳ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕತೆ, ಆರೋಗ್ಯ ಸುಧಾರಣೆ, ಶೈಕ್ಷಣಿಕ,ಆರ್ಥಿಕ, ಸಾಮಾಜಿಕ ಸುಧಾರಣೆಗಳ ಕುರಿತು ಪಂಚಾಯತ್‌ ನಿಗಾವಹಿಸಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸರೋಜಿನಿ ಕೆ. ಅವರು ಮಹಿಳೆಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಮೇನಾಲ ಕ್ಲಸ್ಟರ್‌ನ ಸಿಆರ್‌ಪಿ ಜಯಂತಿ ಶಾಲಾ ಮಕ್ಕಳಿಗೆ ಸಿಗುವ ಸವಲತ್ತುಗಳನ್ನು ತಿಳಿಸಿದರು. ಜ್ಞಾನಜ್ಯೋತಿ ಕೇಂದ್ರದ ಕೆ. ಶಿವಶಂಕರ ಮಕ್ಕಳಿಗೆ ಬ್ಯಾಂಕಿಂಗ್‌ ವಿಷಯದ ಬಗ್ಗೆ ಮಾಹಿತಿ ನೀಡಿದರು.

Advertisement

ವಿದ್ಯಾರ್ಥಿಗಳ ಬೇಡಿಕೆ
ಮಕ್ಕಳ ಗ್ರಾಮ ಸಭೆಯಲ್ಲಿ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಗೆ ಪ್ರಯೋಗಾಲಯ, ಸಾರ್ವಜನಿಕರು ಶಾಲೆ ಆವರಣವನ್ನು ಅಶುಚಿಗೊಳಿಸುವುದು, ಶಾಲೆಯ ಆಟದ ಮೈದಾನ ವಿಸ್ತರಣೆ, ಸರಕಾರಿ ಬಸ್‌ಗಳ ವೇಳಾಪಟ್ಟಿ ಬದಲಾವಣೆಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಮುಂತಾದ ಬೇಡಿಕೆ ಹಾಗೂ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತನುಜಾ ನೇತೃತ್ವದಲ್ಲಿ ಶಿಶು ಪ್ರದರ್ಶನ ಏರ್ಪಡಿಸಿ, ಮಹಿಳಾ ಗ್ರಾಮಸಭೆಯಲ್ಲಿ ಬಹುಮಾನ ವಿತರಿಸಲಾಯಿತು. ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ಆರೋಗ್ಯ ಕೇಂದ್ರದಿಂದ ಬಹುಮಾನ ವಿತರಿಸಲಾಯಿತು.

ಸದಸ್ಯರಾದ ಅಬ್ದುಲ್‌ ಖಾದರ್‌ ಕರ್ನೂರು, ರಮೇಶ್‌ ರೈ ಸಾಂತ್ಯ, ಅಬ್ದುಲ್ಲ ಕೆ., ಎಂ.ಬಿ. ಇಬ್ರಾಹಿಂ, ಲಲಿತಾ, ಮಾಧವಿ, ಸುರೇಶ್‌ ನಾಯ್ಕ, ಇಂದಿರಾ, ನಾರಾಯಣ ರೈ, ಆಯಿಷಾ, ಉಷಾ, ಕೆ.ಎಂ. ಮಹಮ್ಮದ್‌, ಮೇನಾಲ ಕ್ಲಸ್ಟರ್‌ನ ಸಿಆರ್‌ಪಿ ಜಯಂತಿ, ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯ ಶಿಕ್ಷಕರು, ವಿವಿಧ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮ್ಮಾನ
ನೆಟ್ಟಣಿಗೆಮುಟ್ನೂರು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿ ಮಿಥುನ್‌ ಕುಮಾರ್‌ ಅವರು 14ರ ವಯೋಮಾನದ ವಾಲಿಬಾಲ್‌ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ ಗ್ರಾ.ಪಂ. ವತಿಯಿಂದ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next