ಸವಣೂರು: ತಳಿರು ತೋರಣಗಳಿಂದ ಶೃಂಗರಿಸಿದ ಶಾಲಾ ಮುಖ್ಯದ್ವಾರ, ಅಲ್ಲಿ ಹೊಸ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತ, ಅಲ್ಲಿಂದ ನೇರವಾಗಿ ಬ್ಯಾಂಡ್ ವಾಲಗದ ಸದ್ದಿನೊಂದಿಗೆ ಕಲಿಕಾ ಮಂಟಪಕ್ಕೆ ಮಕ್ಕಳನ್ನು ಕರೆತರುವ ಸಂಭ್ರಮ. ಆ ಕಲಿಕಾ ಮಂಟಪದಲ್ಲಿ ಹಣ್ಣು ಹಂಪಲಿನ ಗಿಡಗಳು, ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳು ಶಾಲಾ ಅಂಗಳದಲ್ಲಿ ಗಿಡ ನೆಡುವ ಸಂಭ್ರಮ.
ಹೌದು ಇದು ಶಾಲೆಗೆ ಹೊಸದಾಗಿ ಸೇರುವ ಸಂಭ್ರಮ. ಗಿಡ ನೆಟ್ಟು ಪುಳಕಿತರಾದ ಮಕ್ಕಳು ಮತ್ತೆ ಮಂಟಪದೊಳಗೆ ಅಕ್ಕಿಯಲ್ಲಿ ಅಕ್ಷರಗಳನ್ನು ಬರೆಯುವ ಮೂಲಕ ವಿದ್ಯಾರಂಭ ಮಾಡಿದರು. ಶಾಲೆಯ ಹೆಸರಿನ ಬ್ಯಾಜ್ ಧರಿಸಿಕೊಂಡರು. ಈ ವಿಶೇಷ ಸನ್ನಿವೇಶ ಮೂಡಿಬಂದುದು ಪುತ್ತೂರು ತಾಲೂಕಿನ ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣಪ್ಪಾಡಿ ಹಿ.ಪ್ರಾ.ಶಾಲೆಯ ಆರಂಭೋತ್ಸವದಲ್ಲಿ.
ಹೆತ್ತವರು ಮಕ್ಕಳಿಗೆ ಆರತಿ ಬೆಳಗಿದರೆ ಊರ ಹಿರಿಯರಾದ ಸವಣೂರು ಗ್ರಾಮ ಪಂ. ಮಾಜಿ ಉಪಾಧ್ಯಕ್ಷ, ಪುಣಪ್ಪಾಡಿ ಶಾಲಾ ನೂತನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪಿ.ಡಿ. ಗಂಗಾಧರ್ ರೈ ಅವರ ನೇತೃತ್ವದಲ್ಲಿ ಗಿಡ ನೆಡುವ, ಅಕ್ಕಿಯಲ್ಲಿ ಅಕ್ಷರ ಬರೆಸುವ ಕಾರ್ಯಕ್ರಮ ನಡೆಸಲಾಯಿತು.
ಪಿ.ಡಿ. ಗಂಗಾಧರ್ ರೈ, ಶಾಲೆ ಎಂಬುದು ಪವಿತ್ರ ವಾದ ದೇಗುಲವಿದ್ದಂತೆ. ಶಾಲೆಯಲ್ಲಿ ದೊರಕುವ ಸಂಸ್ಕಾರವೇ ಮಕ್ಕಳನ್ನು ಸಾಮರ್ಥ್ಯವಂತರನ್ನಾಗಿಸುತ್ತದೆ. ಆದ್ದರಿಂದ ಶಾಲೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಆಲಯವಾಗಬೇಕು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಸುಮತಿ ಶುಭ ಹಾರೈಸಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವತಿ ಯಿಂದ ಸೇರ್ಪಡೆಯಾದ ವಿದ್ಯಾರ್ಥಿ ಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿತ್ ಕುಮಾರ್, ಕಾರ್ಯದರ್ಶಿ ಯತೀಶ್ ಕುಮಾರ್, ಸದಸ್ಯರಾದ ಸುರೇಶ್, ದಕ್ಷಿತ್, ಸುದರ್ಶನ್, ಎಸ್‌ಡಿಎಂಸಿ ಸದಸ್ಯರು, ಹೆತ್ತವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ನಿರ್ವಹಿಸಿದರು.
ಪರಿಕಲ್ಪನೆ
ಕಳೆದ ವರ್ಷಗಳಲ್ಲಿ ಅಕ್ಷರ ರಥ, ಕಲಿಕಾ ಪಲ್ಲಕ್ಕಿ ಮೂಲಕ ವಿಶಿಷ್ಟವಾಗಿ ಆರಂಭೋತ್ಸವವನ್ನು ಆಚರಿಸಿದ ಪುಣಪ್ಪಾಡಿ ಶಾಲೆ ಈ ಬಾರಿ ಹೊಸ ಮಕ್ಕಳನ್ನು ಕರೆ ತಂದದ್ದು ಹಸಿರಿನ ಉಸಿರನ್ನು ಉಳಿ ಸುವ ಉತ್ತಮ ಪರಿಕಲ್ಪನೆಯ ಕಲಿಕಾ ಮಂಟಪದ ಮೂಲಕ ಹಾಸುರಾಗಿದೆ.
ವಿಶೇಷ ವರದಿ