ಬೆಳಗಾವಿ: ಸಸಿ ನೆಟ್ಟು ಗಿಡಗಳನ್ನು ಬೆಳೆಸುವುದೇ ನಮ್ಮ ಆದಾಯ ಎಂದುಕೊಂಡು ಪರಿಸರ ಪ್ರೇಮ ಮೆರೆಯುತ್ತಿರುವ ಬೆಳಗಾವಿಯ ಗ್ರೀನ್ ಸೇವಿಯರ್ ಎಂಬ ಸಂಸ್ಥೆ ಆರು ವರ್ಷಗಳಿಂದ ಸದ್ದಿಲ್ಲದೇ ಕಾರ್ಯ ಮಾಡುತ್ತಿದೆ.
ಕೆಎಲ್‌ಇ ಸಂಸ್ಥೆಯಲ್ಲಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮೀರ್ ಮಜಲಿ 2016ರಲ್ಲಿ ಸ್ಥಾಪಿಸಿದ ಈ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಜನ ಸ್ವಯಂ ಸೇವಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಇರುವವರು ಪ್ರತಿಯೊಬ್ಬರೂ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಈವರೆಗೆ 50 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದ್ದಾರೆ.
318 ರವಿವಾರದಂದು ನಿರಂತರ ಸಸಿಗಳನ್ನು ನೆಡುವ ಕೆಲಸ ಮಾಡುತ್ತಿರುವ ಸಮೀರ್ ಮಜಲಿ ನೇತೃತ್ವದ ತಂಡ ಒಂದೇ ಒಂದೂ ರವಿವಾರವನ್ನು ತಪ್ಪಿಸಿಲ್ಲ. ಅರಣ್ಯ ಇಲಾಖೆ, ನರ್ಸರಿ ಸೇರಿದಂತೆ ವಿವಿಧ ಕಡೆಗಳಿಂದ ಸಸಿ ತಂದು ನೆಡುತ್ತಿದ್ದು, ಬೆಳಗಾವಿ ವಿಮಾನ ನಿಲ್ದಾಣ ಆವರಣದಲ್ಲಿ 13 ಸಾವಿರ ಸಸಿ ನೆಟ್ಟಿದ್ದಾರೆ. ದಾನಿಗಳು, ವಿವಿಧ ಕಂಪನಿಯವರು ನೀಡುವ ಸಹಾಯದಿಂದ ನಿಸರ್ಗ ಪೋಷಿಸುವ ಕಾರ್ಯ ನಿರಂತರ ಸಾಗಿದೆ.
ಸದ್ಯ ಪಶ್ಚಿಮ ಘಟ್ಟದಲ್ಲಿ ಕೆಲವು ತಿಂಗಳಿಂದ ಸಸಿ ನೆಟ್ಟು ಹಳ್ಳಿಗರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಖಾನಾಪುರ ತಾಲೂಕಿನ ಸದ್ಯ 3-4 ಹಳ್ಳಿಗಳಲ್ಲಿ ಗ್ರೀನ್ ಸೇವಿಯರ್ ಅಸೋಸಿಯೇಷನ್‌ದವರು ಸಸಿ ನೆಡುತ್ತಿದ್ದಾರೆ. ಜತೆಗೆ ಹಳ್ಳಿಗರಿಗೆ ಉತ್ಪನ್ನ ಸಿಗುವ ಸಸಿಗಳನ್ನು ಕೊಟ್ಟು ಪೋಷಿಸುವ ಜವಾಬ್ದಾರಿ ವಹಿಸಿ ಕೊಟ್ಟಿದ್ದಾರೆ. ಬಾಳೆ, ನುಗ್ಗೆ, ನೇರಲು, ಕೋಕಮ್, ನೆಲ್ಲಿಕಾಯಿ, ಮಸಾಲೆ ಪದಾರ್ಥಳಾದ ದಾಲಿcನ್ನಿ, ಯಾಲಕ್ಕಿ ಸಸಿ ಹಚ್ಚಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಬಂದ ಆದಾಯ ರೈತರಿಗೆ ಹಂಚುತ್ತಿದ್ದಾರೆ. ಇದರಿಂದ ಹೆಚ್ಚೆಚ್ಚು ಸಸಿಗಳನ್ನು ಹಚ್ಚುವಲ್ಲಿ ಪ್ರೋತ್ಸಾಹಿಸುವ ಕಾರ್ಯ ಸಂಸ್ಥೆ ಮಾಡುತ್ತಿದೆ. ಅಸೋಸಿಯೇಷನ್ ಸಂಸ್ಥಾಪಕರಾದ ಸಮೀರ್ ಮಜಲಿ, ಜಯದೀಪ ಲೇಂಗಡೆ, ಮಹಾವೀರ ಉಪಾಧ್ಯೆ, ಅಶೋಕ ಕರಪೆ, ಸಂತೋಷ ಮಮದಾಪುರ ನೇತೃತ್ವದಲ್ಲಿ ಈ ಸೇವೆ ಮುಂದುವರಿದಿದೆ.
ಭೈರೋಬಾ ಕಾಂಬಳೆ