Advertisement

1 ಎಕರೆಯಲ್ಲಿ 20 ಸಸಿ ನೆಡುವುದು ಕಡ್ಡಾಯ

06:40 AM Sep 07, 2018 | |

ಬೆಂಗಳೂರು: ರೈತರು ಕೃಷಿ ಭೂಮಿಯಲ್ಲಿ ಒಂದು ಎಕರೆಗೆ ಕನಿಷ್ಠ 20 ಸಸಿ ನೆಟ್ಟು ಫೋಷಿಸುವುದು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.

Advertisement

ಒಂದು ಎಕರೆಗೆ 20 ಸಸಿ ನೆಟ್ಟು ಪೋಷಿಸಲು ಸರ್ಕಾರದ ವತಿಯಿಂದ ಪ್ರತಿ ಮರಕ್ಕೆ 100 ರೂ. ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಹಾಗೂ ಪರಿಸರ ಸಚಿವ ಆರ್‌.ಶಂಕರ್‌, ರೈತರು ತಮ್ಮ ಜಮೀನಿನಲ್ಲಿ ಒಂದು ಎಕರೆಗೆ 20 ಸಸಿ ನೆಟ್ಟು ಪೋಷಿಸುವುದು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದ್ದು ಸದ್ಯದಲ್ಲೇ  ಈ ಸಂಬಂಧ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಸ್ಥಾಪಿಸಲಾಗುತ್ತಿದ್ದು ಕಾಮಗಾರಿ ಭರದಿಂದ ಸಾಗಿದೆ.  ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು 97 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಹಸಿರು ಕರ್ನಾಟಕ ಯೋಜನೆಯಡಿ 10 ಕೋಟಿ ಸಸಿ ನೆಡುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ  ಆಗಸ್ಟ್‌ 15 ರಂದು ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಎಲ್ಲಿಯೂ ರೆಸಾರ್ಟ್‌ಗೆ ಅನುಮತಿ ಕೊಟ್ಟಿಲ್ಲ. ಜತೆಗೆ ಸೂಕ್ಷ್ಮ ಪರಿಸರ ವಲಯದಲ್ಲೂ ಎಲ್ಲ ಕಡೆ ಅನುಮತಿ ಇಲ್ಲ. ಕೆಲವೆಡೆ ನಿಬಂಧನೆಗೊಳಪಟ್ಟು ಅವಕಾಶ ಇದೆ. ಆದರೆ, ಅಕ್ರಮವಾಗಿ ಎಲ್ಲಿಯೇ ರೆಸಾರ್ಟ್‌ ನಿರ್ಮಾಣ ಮಾಡಿದ್ದರೂ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Advertisement

ಪ್ಲಾಸ್ಟಿಕ್‌ ನಿಷೇಧ ಸಂಬಂಧ ಈಗಾಗಲೇ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಕೆಳ ಹಂತದಿಂದ ಮೇಲಿನ ಹಂತದವರೆಗೂ ಇದರ ಬಗ್ಗೆ ನಿಗಾ ವಹಿಸಬೇಕಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳ ಪಾತ್ರ ಇದರಲ್ಲಿ ಹೆಚ್ಚಿದೆ. ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಪಶ್ಚಿಮಘಟ್ಟ ಸಂರಕ್ಷಣೆ ಕುರಿತಂತೆ ರಾಜ್ಯ ಸರ್ಕಾರ ಡಾ.ಕಸ್ತೂರಿ ರಂಗನ್‌ ವರದಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಕೋರಿಕೆಯಂತೆ ಕ್ರಮ ವಹಿಸಿ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ  ಈ ಕುರಿತು ಇತ್ತೀಚೆಗಷ್ಟೇ ನೀಡಿರುವ ತೀರ್ಪು ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಆರ್‌.ಶಂಕರ್‌,ಅರಣ್ಯ ಹಾಗೂ ಪರಿಸರ ಸಚಿವ

ವೆಬ್‌ಸೈಟ್‌ಗೆ ಚಾಲನೆ
ಇದೇ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೈಬ್‌ಸೈಟ್‌ಗೆ ಸಚಿವ ಶಂಕರ್‌ ಚಾಲನೆ ನೀಡಿದರು. ವೆಬ್‌ಸೈಟ್‌ ಮೂಲಕ ಸಾರ್ವಜನಿಕರು ರಾಜ್ಯದ 9 ಮೃಗಾಲಯಗಳಲ್ಲಿರುವ ಮಾಹಿತಿ ಪಡೆಯಬಹುದು. ಮೈಸೂರು, ಬನ್ನೇರುಘಟ್ಟ, ಬಳ್ಳಾರಿ, ಕಲಬುರಗಿ, ದಾವಣಗೆರೆ, ಗದಗ, ಬೆಳಗಾವಿ, ಹೊಸಪೇಟೆ, ಕಮಲಾಪುರ ಮೃಗಾಲಯಗಳ ಮಾಹಿತಿ ಇದರಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ 1.70 ಪ್ರವಾಸಿಗರ ಮೃಗಾಲಯ ವೀಕ್ಷಣೆ ಮಾಡಿದಾರೆ. 2017-18 ನೇ ಸಾಲಿನಲ್ಲಿ 6,91,386 ಮಂದಿ ವೀಕ್ಷಣೆ ಮಾಡಿದ್ದಾರೆ. 9 ಮೃಗಾಲಯಗಳಲ್ಲಿ 2907 ಸಸ್ತನಿಗಳು, 1615 ಪಕ್ಷಿಗಳು,844 ಸರೀಸೃಪಗಳು ಇವೆ. 38 ಆನೆ, 30 ಸಿಂಹ, 50 ಹುಲಿ, 69 ಚಿರತೆ,  2 ಘೇಂಡಾ ಮೃಗ, 5 ಚಿಂಪಾಂಜಿ, 14 ಜೀಬ್ರಾ, 98 ಜಿರಾಫೆ ಇದರಲ್ಲಿ ಸೇರಿದೆ ಎಂದು ವಿವರಿಸಿದರು.  www.zoosofkarnataka.com ಮೂಲಕ ಮೃಗಾಲಯದ ಮಾಹಿತಿ ಪಡೆಯಬಹುದು.

ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ನೀರಿನ ಬಳಕೆ ನಿಷೇಧ
ಬೆಂಗಳೂರು
: ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ, ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ನೀರಿನ ಬಳಕೆಯನ್ನು ನಿಷೇಧಿಸಿದೆ. 

ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯ, ಸರ್ಕಾರದಿಂದ ಅನುದಾನ ಪಡೆಯುವ ಯಾವುದೇ ಸಂಸ್ಥೆಗಳಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್‌ ಬಾಟಲ್‌ (ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಾಟಲ್‌) ನೀರಿನ ಬಳಕೆ/ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆದೇಶ ಹೊರಡಿಸಿದೆ.

ಸಭೆ, ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್‌, ಸ್ಟೀಲ್‌, ಪೇಪರ್‌ ಮತ್ತಿತರ ಪ್ಲಾಸ್ಟಿಕ್‌ರಹಿತ ಲೋಟಗಳಲ್ಲಿ ಸರಬರಾಜು ಮಾಡಬೇಕು. 20 ಲೀಟರ್‌ಗೆ ಮೇಲ್ಪಟ್ಟ ಕ್ಯಾನ್‌ಗಳಲ್ಲಿ ನೀರನ್ನು ತಂದು ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next