ಬೆಂಗಳೂರಿನ ಕಂಪನಿ ಕೆಲಸಕ್ಕಿಂತ ಊರಲ್ಲಿ ತೋಟದ ಕೆಲಸವೇ ವಾಸಿ ಅನ್ನಿಸಿದೆ. ಏಕೆಂದರೆ, ಕಂಪನಿ ಕೊಡುತ್ತಿರುವಷ್ಟು ಹಣವನ್ನು ತೋಟದಲ್ಲಿ ದುಡಿದೇ ಗಳಿಸಬಹುದು…
ಆಫೀಸಿಂದ ಇ-ಮೇಲ್ ಬಂದಿತ್ತು. ನಾನು ನೋಡಿರಲಿಲ್ಲ. ಮಾರನೆ ದಿನ ಬಾಸ್ ಎರಡು ಬಾರಿ ಕರೆ ಮಾಡಿದ್ದರು. ಅದೂ ನನಗೆ ತಲುಪಿರಲಿಲ್ಲ. ಕಾರಣ ಇಷ್ಟೇ, ನಾನು ವರ್ಕ್ ಫ್ರಂ ಹೋಂ. ತೋಟದಲ್ಲಿ ನಮ್ಮ ಮನೆ. ಮಳೆ ಬಂದರೆ ಸೋರುತ್ತದೆ. ಗುಡುಗು, ಸಿಡಿಲು ಬಡಿದರೆ ಕರೆಂಟೇ ಇರೋಲ್ಲ. ಕರೆಂಟ್ ಬೇಕೇಬೇಕು ಅನ್ನೋದಾದರೆ ಜನರೇಟರ್ ಹಾಕಿಕೊಳ್ಳಬೇಕು. ಕೆಲಸಕ್ಕೆ ಸೇರಿ ಈಗಿನ್ನೂ 6 ತಿಂಗಳಾಗಿರುವುದರಿಂದ, ನಾನು ಜನರೇಟರ್ ತರಿಸುವಷ್ಟು ಸ್ಥಿತಿವಂತನೂ ಆಗಿರಲಿಲ್ಲ. ಈ ತೋಟದ ಮನೆಗೆ ಬಂದು ಕೆಲಸ ಮಾಡುವ ಆಸೆಯಾಗಲಿ, ಉದ್ದೇಶವಾ ಗಲಿ ನನಗಿರಲಿಲ್ಲ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿದ್ದ ಪಿ.ಜಿ. ಒಂದರಲ್ಲಿ ನಾನಿದ್ದೆ. ಲಾಕ್‌ಡೌನ್ ಆರಂಭವಾಗು ತ್ತಿದ್ದಂತೆ- “ಇನ್ನುಮುಂದೆ ಯಾರೂ ಆಚೆ ಹೋಗಬಾ ರದು. ಹೋಗುವುದಾದರೆ ಪಿ.ಜಿ. ಖಾಲಿ ಮಾಡಿ’ ಅಂದರು ನಮ್ಮ ಪಿ.ಜಿ. ಓನರ್. ನನ್ನದು ಮಾರ್ಕೆಟಿಂಗ್ ಕೆಲಸ. ಆಚೆ ಹೋಗದೇ ಇರುವುದಾದರೂ ಹೇಗೆ? ಸೋಂಕು ಹೆಚ್ಚಾದಂತೆ, ವರ್ಕ್ ಫ್ರಂ ಹೋಂ ಮಾಡುವಂತೆ ಹೇಳಿದರು. ನಾನು, ಬಿಕಾಂ ಮಾಡಿದ್ದರಿಂದ ಅಕೌಂಟ್ಸ್‌ನ ಒಂದಷ್ಟು ಫೈಲ್‌ಗಳನ್ನು ನೋಡಲು ತಿಳಿಸಿದರು. ಜೊತೆಗೆ, ಸಂಬಳ ಶೇ.50ರಷ್ಟು ಮಾತ್ರ ಅಂದರು.
ಕಡಿಮೆ ಸಂಬಳದಲ್ಲಿ ಬೆಂಗಳೂರಲ್ಲಿ ಬದುಕುವುದಾದರೂ ಹೇಗೆ ಅನ್ನಿಸಿದಾಗ, ಮಧುಗಿರಿಯ ನನ್ನ ಹಳ್ಳಿಗೆ ಬಂದೆ. ನಮ್ಮ ಪರಿಸ್ಥಿತಿ ಆಫೀಸಿನ ಬಾಸ್ ಗೆ ಹೇಗೆ ಅರ್ಥವಾಗಬೇಕು? ಅವರಿಗೆ ಟಾರ್ಗೆಟ್ ಮುಖ್ಯ. ಅದಾಗಲಿಲ್ಲ ಅಂದರೆ, ನಾವುಗಳೇ ಟಾರ್ಗೆಟ್ ಆಗಿಬಿಡ್ತೇವೆ ಅಂತ ಅರ್ಥವಾಗಿದ್ದೇ ಮೊನ್ನೆ. ಅವರಿಗೆ, 50 ಲಕ್ಷದಷ್ಟು ಹಣ ಒಬ್ಬರಿಂದ ಬರಬೇಕಿತ್ತಂತೆ. ಆ ಕುರಿತು ಮಾಹಿತಿ ಪಡೆಯಲು ನನಗೆ ಕಾಲ್ ಮಾಡಿದ್ದಾರೆ. ಮೇಲ್ ಕಳಿಸಿದ್ದಾರೆ.
ನೆಟ್ ವರ್ಕ್ ಸಮಸ್ಯೆ ಮತ್ತು ಮೊಬೈಲ್ ಚಾರ್ಜ್ ಆಗಿಲ್ಲದ ಕಾರಣಕ್ಕೆ ನನಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೂ, ಕಚೇರಿಯಿಂದ ಏನಾದರೂ ಸುದ್ದಿ ಇರಬಹುದಾ ಎಂದು ತಿಳಿಯಲು, ಗೆಳೆಯನ ಮನೆಗೆ ಬಂದು ಅಲ್ಲಿಂದಲೇ ಬಾಸ್‌ಗೆ ಕರೆ ಮಾಡಿ- “ನಮಸ್ತೆ ಸರ್’ ಅಂದೆನಷ್ಟೆ. ಅತ್ತ ಕಡೆಯಿಂದ ಬಾಸ್ ಕುದಿಗೋಪದಲ್ಲಿ ಬಾಯಿಗೆ ಬಂದಂತೆ ಮಾತನಾಡಿದರು. ಇದನ್ನು ನಿರೀಕ್ಷಿಸ ದ ನಾನು, ಗೊಂದಲಗೊಂಡೆ. ಮತ್ತೆ ಮನೆಗೆ ಬಂದು, ಲ್ಯಾಪ್‌ಟಾಪ್‌ನಲ್ಲಿದ್ದ ಒಂದಷ್ಟು ಫೈಲ್‌ಗಳನ್ನು ತೆಗೆದುಕೊಂಡು ಹೋಗಿ, ಬಾಸ್‌ಗೆ ಮೇಲ್ ಮಾಡಿ, ನಡೆದುದ್ದನ್ನೆಲ್ಲಾ ಹೇಳಿದೆ.
ಅವರ ಸೂಚನೆಯಂತೆ ರಾಜೀನಾಮೆ ಪತ್ರ ಕೊಟ್ಟು ಸುಮ್ಮನೆ ಕೂತಿದ್ದೇನೆ. ಸಹೃದಯತೆ ಇದ್ದರೆ ಕೆಲಸಕ್ಕೆ ಕರೆಯಲಿ. ಇಲ್ಲದೇ ಇದ್ದರೆ ಅಪ್ಪನ ತೆಂಗಿನ ತೋಟದಲ್ಲೇ ಕೆಲಸ ಮಾಡು ವುದು ಅಂತ ನಿರ್ಧರಿಸಿದ್ದೇನೆ. ಏಕೆಂ ದರೆ, ಈ ಕಂಪನಿ ಕೊಡುತ್ತಿರುವ ಚಿಕ್ಕ ಮೊತ್ತದ ಸಂಬಳವನ್ನು ತೋಟದಲ್ಲೇ ಗಳಿಸಬಹುದು. ಇನ್ನು ಕಂಪನಿಗೆ ಹೋದರೂ, ಪರಿಸ್ಥಿತಿ ಹೇಗಿರುತ್ತದೋ, ಸಂಬಳ ಮೊದಲಷ್ಟು ಕೊಡುತ್ತಾರೋ ಇಲ್ಲವೋ. ಅದಕ್ಕಿಂತ ಅಪ್ಪನ ತೋಟವೇ ವಾಸಿ ಅನಿಸುತ್ತಿದೆ.