Advertisement

ಬೆಂಗಳೂರಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಯೋಜನೆ: ಶಶಿಕಲಾ

03:41 PM Jun 01, 2017 | |

ಹುಬ್ಬಳ್ಳಿ: ರಾಜ್ಯದಲ್ಲಿನ ಸಾಂಬಾರು ಪದಾರ್ಥಗಳ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಿಂದ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಯೋಜಿಸಲಾಗಿದೆ. ಅದಕ್ಕಾಗಿ 1.10ಕೋಟಿ ರೂ. ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ತಿಳಿಸಿದರು. 

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಸಾಂಬಾರು ಪದಾರ್ಥಗಳನ್ನು ಬೆಳೆಯಲಾಗುತ್ತಿದ್ದರೂ ಹೊರ ರಾಜ್ಯದವರು ಅದನ್ನು ಖರೀದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಹಾಗೂ ನಮ್ಮ ರೈತರು, ಬೆಳೆಗಾರರು ಬೆಳೆದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಮಂಡಳಿ ಮುಂದಾಗಿದೆ.

ಮಂಡಳಿಯ ಪ್ರಸ್ತಾವನೆಗೆ ಸರಕಾರ ಸ್ಪಂದಿಸಿದೆ ಎಂದರು. ಜೂನ್‌ 1ರಂದು ಕುಂದಗೋಳದಲ್ಲಿ ರೈತ ಉತ್ಪಾದಕ ಸಂಘದ ಸದಸ್ಯರಿಗೆ ಮೆಣಸಿನಕಾಯಿ ಬೀಜ ಉಚಿತವಾಗಿ ವಿತರಿಸಲಾಗುವುದು. ಸಂಘದಲ್ಲಿ 611 ಸದಸ್ಯರು ಹೆಸರು ನೋಂದಾಯಿಸಿದ್ದು, ಪ್ರತಿಯೊಬ್ಬರಿಗೆ ಅರ್ಧ ಕೆಜಿಯಂತೆ ಎಲ್ಲರಿಗೂ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೀಜ ವಿತರಿಸಲಾಗುವುದು.

20ರಂದು ಹಿರೇಕೆರೂರಿನಲ್ಲಿ ರೈತರ ಸಮಾವೇಶ ಆಯೋಜಿಸಲಾಗುವುದು. ಸಮಾವೇಶದಲ್ಲಿ ರೈತರಿಗೆ ಕೃಷಿ ಉತ್ಪನ್ನಗಳ ಬೆಳೆಗಳ ಬಗ್ಗೆ, ನಾಟಿ ಮಾಡುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಕುಂದಗೋಳದಲ್ಲಿ ಮೆಣಸಿನಕಾಯಿ ಸಂಸ್ಕರಣಾ ಘಟಕ ಆರಂಭಿಸಲಾಗುವುದು. ಅದರ ಪ್ರಕ್ರಿಯೆ ನಡೆದಿದೆ.

ಮೆಣಸಿನಕಾಯಿ ಬೆಳೆಯುವ ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾವಾರು ಮೆಣಸಿನಕಾಯಿ ಮೇಳ ಆಯೋಜಿಸಲು ಯೋಜಿಸಲಾಗಿದೆ ಎಂದರು. ಮಂಡಳಿಯು 2016-17ನೇ ಸಾಲಿನಲ್ಲಿ ಒಣಮೆಣಸಿನಕಾಯಿ ಮಿನಿ ಕಿಟ್‌ ಯೋಜನೆಯಡಿ 1000 ಫಲಾನುಭವಿ ರೈತರಿಗೆ ಮಿನಿ ಕಿಟ್‌ ವಿತರಿಸಲಾಗಿದೆ. 

Advertisement

ಕೋಯ್ಲೋತ್ತರ ಯೋಜನೆಯಡಿ 100 ರೈತ ಫಲಾನುಭವಿಗಳಿಗೆ ತಾಡುಪಾಲು ವಿತರಿಸಲಾಗಿದೆ. ಯಾಂತ್ರೀಕರಣ ಯೋಜನೆಯಡಿ 51 ಸಾಂಬಾರು ಬೆಳೆ ರೈತ ಸಂಘಟನೆಗಳಿಗೆ ಸಹಾಯಧನ ವಿತರಿಸಲಾಗಿದೆ. ಸಂಸ್ಕರಣಾ ಘಟಕ ಯೋಜನೆಯಡಿ 15 ಸಾಂಬಾರು ಸಂಸ್ಕರಣಾ ಘಟಕಗಳಿಗೆ ಸಹಾಯಧನ ವಿತರಿಸಲಾಗಿದೆ ಎಂದರು.

2017-18ನೇ ಸಾಲಿನಲ್ಲಿ 2000 ರೈತರಿಗೆ ಒಣಮೆಣಸಿನಕಾಯಿ ಬೀಜಗಳನ್ನು ಪ್ರತಿಯೊಬ್ಬರಿಗೆ ಅರ್ಧ ಕೆಜಿಯಂತೆ ವಿತರಿಸಲಾಗುತ್ತಿದೆ. 2000 ತಾಡುಪಾಲುಗಳನ್ನು ರೈತರಿಗೆ ವಿತರಿಸಲಾಗುವುದು. ಯಾಂತ್ರೀಕರಣ ಯೋಜನೆಯಡಿ ಸಹಾಯಧನಕ್ಕಾಗಿ ವಿವಿಧ ಜಿಲ್ಲೆಗಳಿಂದ ಮಂಡಳಿಗೆ 81 ಸಾಂಬಾರು ಬೆಳೆ ರೈತರು ಅರ್ಜಿ ಸಲ್ಲಿಸಿದ್ದು, ಇನ್ನು ಹೆಚ್ಚಿನ ರೈತರಿಗೆ ಸಹಾಯಧನ ಒದಗಿಸಲಾಗುವುದು. 

ಸಾಂಬಾರು ಬೆಳೆಯುವ ಅನೇಕ ರೈತರು ಸಾಂಬಾರ ಬೆಳೆ ಸಂಸ್ಕರಣೆಗಾಗಿ ಅರ್ಜಿ ಸಲ್ಲಿಸಿದ್ದು, ಈ ಯೋಜನೆಯಡಿ ರೈತರಿಗೆ ಗರಿಷ್ಠ 10ಲಕ್ಷ ರೂ. ಸಹಾಯಧನ ಒದಗಿಸಲಾಗುತ್ತಿದೆ ಎಂದರು. ಕೋಯ್ಲೋತ್ತರ ಯೋಜನೆಯಡಿ ಸಾಂಬಾರು ಬೆಳೆ ಒಣಗಿಸಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ತಾಡುಪಾಲುಗಳ ವಿತರಣೆ, ಯಾಂತ್ರೀಕರಣ ಯೋಜನೆಯಡಿ

-ಸಾಂಬಾರು ಬೆಳೆಗೆ ಬೇಕಾಗುವ ಯಂತ್ರೋಪಕರಣಗಳಿಗೆ ಸಹಾಯಧನ, ಒಣಮೆಣಸಿನಕಾಯಿ ಬೀಜಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಮಂಡಳಿಯ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ 78 ಕೋಟಿ ರೂ. ಮಂಜೂರು ಮಾಡುವಂತೆ ಕೋರಲಾಗಿದೆ. ಕೇಂದ್ರದ ಕೃಷಿ ಇಲಾಖೆ ಮನವಿಗೆ ಸ್ಪಂದಿಸಿ ಬಜೆಟ್‌ನಲ್ಲಿ 58 ಕೋಟಿ ರೂ. ಮೀಸಲಿಟ್ಟಿದೆ.

ಇಲಾಖೆಯ ಆಯುಕ್ತರಿಂದ ಆ ಹಣ ಬಿಡುಗಡೆಯಾಗುವುದು ಬಾಕಿ ಉಳಿದಿದೆ. ಮಂಡಳಿಯಲ್ಲಿ 7500 ಫಲಾನುಭವಿಗಳಿದ್ದಾರೆ. ರಾಜ್ಯ ಸರಕಾರ 3  ಕೋಟಿ ರೂ. ನೀಡಿದೆ. ಆ ಹಣವನ್ನು 3ಸಾವಿರ ಫಲಾನುಭವಿಗಳಿಗೆ ಹಂಚಲಾಗುವುದು. ಈ ವರ್ಷ 8ಕೋಟಿ ರೂ. ಹೆಚ್ಚುವರಿಯಾಗಿ ನೀಡಬೇಕೆಂದು ಸರಕಾರಕ್ಕೆ ಕೋರಲಾಗಿದೆ ಎಂದರು. ಮಂಡಳಿ ಸದ್ಯ ಬಾಡಿಕೆ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸ್ವಂತ ಕಟ್ಟಡ ಹೊಂದುವ ಸಲುವಾಗಿ ಎಪಿಎಂಸಿಯಲ್ಲಿ ನಾಲ್ಕು ಎಕರೆ ಜಾಗ ಗುರುತಿಸಲಾಗಿದ್ದು, ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಮಂಜೂರಾತಿ ಪಡೆದು, ಶೀಘ್ರ ಮಂಡಳಿಯ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಂಡಳಿಯ ಅಧಿಕಾರ ವಹಿಸಿಕೊಂಡ ಏಳು ತಿಂಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. 

ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್‌ ಅಳವಡಿಸಲಾಗಿದೆ ಎಂದರು. ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ  ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಚ್‌. ಆರ್‌. ನಾಯ್ಕ, ಕೆಸಿಸಿಐ ಮಾಜಿ ಅಧ್ಯಕ್ಷ ವಸಂತ ಲದವಾ, ಪದ್ಮಾ ಪ್ರಕಾಶ, ಜ್ಯೋತಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next