Advertisement

ನಕಲಿ ಕಾರ್ಮಿಕರ ಪತ್ತೆಗೆ ಪ್ಲಾನಿಂಗ್‌

12:58 PM Sep 23, 2018 | Team Udayavani |

ಬೆಂಗಳೂರು: ನಕಲಿ ಪೌರಕಾರ್ಮಿಕರ ಹಾವಳಿ ತಪ್ಪಿಸಲು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಣೆಗಾಗಿ ಬಿಬಿಎಂಪಿ “ಮೈಕ್ರೋ ಪ್ಲಾನಿಂಗ್‌’ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. 

Advertisement

ಜತೆಗೆ ಸಾರ್ವಜನಿಕರಿಗೆ ಅವರ ಏರಿಯಾ, ಮನೆ ಮುಂದೆ ಕಸ ಗುಡಿಸಲು ಬರುವ ಪೌರಕಾರ್ಮಿಕರು ಯಾರು ಎಂಬುದೂ ಸೇರಿದಂತೆ ಕಸ ಸಂಗ್ರಹಿಸಲು ಬರುವ ಆಟೋ ಟಿಪ್ಪರ್‌ಗಳು ಹಾಗೂ ಇನ್ನಿತರ ಮಾಹಿತಿ ಇನ್ನುಮುಂದೆ ಸುಲಭವಾಗಿ ದೊರೆಯಲಿದೆ. ಈ ನೂತನ ವ್ಯವಸ್ಥೆ ಜಾರಿಗೊಂಡರೆ ಆಯಾ ಪ್ರದೇಶ, ಬಡಾವಣೆಗಳಲ್ಲಿ ಕಸ ಗುಡಿಸುವ ಪೌರಕಾರ್ಮಿಕರ ಮೊಬೈಲ್‌ ಸಂಖ್ಯೆ ಸಹಿತ ಎಲ್ಲ ಮಾಹಿತಿ ದೊರೆಯಲಿದೆ.

ಮೈಕ್ರೋಪ್ಲಾನ್‌ ಮ್ಯಾಪಿಂಗ್‌ ವ್ಯವಸ್ಥೆಯಲ್ಲಿ ಎಲ್ಲ 198 ವಾರ್ಡ್‌ಗಳಲ್ಲಿನ ಯಾವ ರಸ್ತೆಯನ್ನು ಯಾವ ಪೌರಕಾರ್ಮಿಕ ಸ್ವತ್ಛಗೊಳಿಸಬೇಕು, ಯಾವ ಆಟೋ ಟಿಪ್ಪರ್‌ ಯಾವ ಬ್ಲಾಕ್‌ಗೆ ಹೋಗಬೇಕು ಎಂಬುದನ್ನು ಮ್ಯಾಪಿಂಗ್‌ ಮಾಡಲಾಗುತ್ತಿದೆ. ಈಗಾಗಲೇ ಮ್ಯಾಪಿಂಗ್‌ ವ್ಯವಸ್ಥೆ ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ತಾಂತ್ರಿಕ ತೊಂದರೆಗಳು ಪರಿಹರಿಸಿದ ನಂತರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಮ್ಯಾಪಿಂಗ್‌ ವ್ಯವಸ್ಥೆ ಯಾಕೆ?: ನಗರದಲ್ಲಿ 14 ಸಾವಿರ ಕಿ.ಮೀ. ಉದ್ದದ 93 ಸಾವಿರ ರಸ್ತೆಗಳಿದ್ದು, ಪ್ರತಿಯೊಂದು ರಸ್ತೆಯನ್ನು ಮ್ಯಾಪಿಂಗ್‌ ಮಾಡಲಾಗುತ್ತಿದೆ. ಆ ಪೈಕಿ 2 ಸಾವಿರ ಕಿ.ಮೀ. ಉದ್ದದ ಪ್ರಮುಖ ರಸ್ತೆಗಳಿವೆ. ಐಐಎಂಬಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಅಧ್ಯಯನದಿಂದ ದಿನದಲ್ಲಿ ಒಬ್ಬ ಪೌರಕಾರ್ಮಿಕರು ಅರ್ಧ ಕಿ.ಮೀ. ಉದ್ದದ ವಾರ್ಡ್‌ ರಸ್ತೆ ಅಥವಾ 0.35 ಕಿ.ಮೀ. ಉದ್ದದ ಪ್ರಮುಖ ರಸ್ತೆ ಗುಡಿಸಲು ಸಾಧ್ಯವಿದ್ದು, ಅದರಂತೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ.

ಕಡಿಮೆ ಆಟೋ ಟಿಪ್ಪರ್‌ಗಳನ್ನು ಬಳಸಿ ಹೆಚ್ಚಿನ ಆಟೋಟಿಪ್ಪರ್‌ಗಳಿಗೆ ಬಿಲ್‌ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಬ್ಲಾಕ್‌ಗೆ ಒಂದರಂತೆ ನಿಯೋಜನೆ ಮಾಡಲಾಗುತ್ತಿದ್ದು, ಜಿಪಿಎಸ್‌ ವ್ಯವಸ್ಥೆ ಅಳವಡಿಸುವುದರಿಂದ ಆಟೋಗಳು ತ್ಯಾಜ್ಯ ಸಂಗ್ರಹಣೆಯಲ್ಲಿ ತೊಡಗಿವೆಯೇ ಇಲ್ಲವೆ ಎಂಬುದು ತಿಳಿಯಲಿದೆ. 

Advertisement

18 ಸಾವಿರ ಪೌರಕಾರ್ಮಿಕರು ಬೇಕು: ಮೈಕ್ರೋ ಪ್ಲಾನಿಂಗ್‌ ಪ್ರಕಾರ ನಗರದ 198 ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಲು 18 ಸಾವಿರ ಪೌರಕಾರ್ಮಿಕರ ಅಗತ್ಯವಿದೆ. ಆದರೆ, ರಾಜ್ಯ ಸರ್ಕಾರ 2017ರ ಆಗಸ್ಟ್‌ ತಿಂಗಳಲ್ಲಿ ಹೊರಡಿಸಿದ್ದ ಆದೇಶದ ಪ್ರಕಾರ ನಗರತದಲ್ಲಿ ಪ್ರತಿ 700 ಜನರಿಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಬೇಕು.

ಅದರಂತೆ ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡಲು 15,810 ಪೌರಕಾರ್ಮಿಕರ ಅಗತ್ಯವಿದೆ. ಇದೀಗ ಮ್ಯಾಪಿಂಗ್‌ನಿಂದ 18 ಸಾವಿರ ಪೌರಕಾರ್ಮಿಕರು ಬೇಕಾಗುತ್ತದೆ ಎಂಬುದು ತಿಳಿದು ಬಂದಿರುವುದರಿಂದ ಅದನ್ನು ಸರ್ಕಾರಕ್ಕೆ ಕಳುಹಿಸಿ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ಪಡೆಯಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. 

ಮೈಕ್ರೋ ಪ್ಲಾನಿಂಗ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವೊಂದು ತಾಂತ್ರಿಕ ದೋಷಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಅದು ಮುಗಿದ ನಂತರ ಒಂದು ತಿಂಗಳು ಪರೀಕ್ಷೆ ನಡೆಸಿ, ನಂತರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪಾಲಿಕೆ ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕಲಾಗುವುದು.
-ಸಫ್ರಾರ್ಜ್‌ ಖಾನ್‌, ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next