Advertisement

ಕಿಂಡಿ ಅಣೆಕಟ್ಟುಗಳಿಗೆ ಅವಧಿಗೆ ಮೊದಲೇ ಹಲಗೆ ಜೋಡಣೆ?

10:30 AM Sep 27, 2018 | |

ಸುಳ್ಯ: ಮುಂಗಾರು ಅವಧಿಯಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ಬಳಿಕ ಮಾಯವಾಗಿದೆ. ನದಿ, ಹಳ್ಳ – ಕೊಳ್ಳಗಳಲ್ಲಿ ನೀರು ಅಷ್ಟೇ ವೇಗವಾಗಿ ಇಂಗತೊಡಗಿದೆ. ನಡು ಬೇಸಗೆಯಲ್ಲಿ ನದಿಮೂಲಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀರಿನ ಪ್ರಮಾಣದ ಸನಿಹಕ್ಕೆ ನೀರಿನ ಮಟ್ಟ ಈಗಲೇ ಇಳಿದಿದೆ. ಅವಧಿಗೂ ಮುನ್ನ ನೀರಿನ ಹರಿವು ಕ್ಷೀಣವಾಗಿದ್ದು ಆತಂಕ ತಂದಿದೆ. ಈಗಲೇ ಜಲ ಸಂರಕ್ಷಣೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಲು ಸಿದ್ಧತೆಗಳು ನಡೆಸಬೇಕೇನೋ ಎಂದು ಕೃಷಿಕರು ಮಾತಾಡಿಕೊಳ್ಳಲು ಆರಂಭಿಸಿದ್ದಾರೆ.

Advertisement

ಸುಳ್ಯ ತಾಲೂಕಿನಲ್ಲಿ ಇರುವ ಬಹುತೇಕ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸುವ ಕೆಲಸಗಳು ಡಿಸೆಂಬರ್‌ ಕೊನೆ ಅಥವಾ ಜನವರಿ ಮೊದಲ ವಾರದಲ್ಲಿ ಆರಂಭಗೊಳ್ಳುತ್ತದೆ. ನೀರಿನ ಹರಿವು ಗಮನಿಸಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಜಲಾನಯನ ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಮಾಡಿದ ಬಳಿಕ ಅದರ ನಿರ್ವಹಣೆಯ ಹೊಣೆಯನ್ನು ಅಣೆಕಟ್ಟಿನ ಫಲಾನುಭವಿಗಳೇ ವಹಿಸಿಕೊಳ್ಳುತ್ತಾರೆ.

ಒಣಗಿದ ಒರತೆಗಳು
ಈ ಬಾರಿ ಮುಂಗಾರು ಭಾರೀ ಅಬ್ಬರ ಸೃಷ್ಟಿಸಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿ ದರೆ ಮಳೆ ಪ್ರಮಾಣ ಅತ್ಯಧಿಕವಾಗಿತ್ತು. ಮಳೆ, ನೆರೆ ಜತೆಗೆ ಭೂಕುಸಿತದಂತಹ ಘಟನೆಗಳು ಸಂಭವಿಸಿ ಭಾರೀ ಅನಾಹುತ ಸೃಷ್ಟಿಸಿತ್ತು. ಎಲ್ಲೆಡೆ ಒರತೆಗಳು ಸೃಷ್ಟಿಯಾಗಿದ್ದವು. ಮಳೆ ನಿಂತು ಕೆಲವೇ ದಿನಗಳಲ್ಲಿ ಒರತೆಗಳೆಲ್ಲ ಕ್ಷೀಣಿಸಿ, ನದಿ ಮೂಲಗಳಲ್ಲಿ ನೀರು ಕಡಿಮೆಯಾಗತೊಡಗಿದೆ.

ಬೇಸಿಗೆ ದಿನಗಳಲ್ಲಿ ನದಿ, ತೊರೆ, ಕೆರೆ, ತೋಡುಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ಕುಡಿಯುವ ನೀರು ಮತ್ತು ಕೃಷಿ ಸಂಬಂಧಿಸಿ ಚಟುವಟಿಕೆಗೆ ತೊಂದರೆ ಆಗುತ್ತದೆ. ಆದರೆ ಈ ಬಾರಿ ನೀರಿನ ಮಟ್ಟ ಬೇಸಿಗೆ ಪೂರ್ಣ ಆರಂಭವಾಗುವ ಮೊದಲೇ ಕಡಿಮೆಗೊಂಡಿರುವುದು ಆತಂಕದ ಸಂಗತಿ. ಹೀಗಾಗಿ, ಅವಧಿಗೂ ಮೊದಲೇ ಹಲಗೆ ಅಳವಡಿಸಬೇಕಾದೀತು ಎನ್ನುವ ಅಭಿಪ್ರಾಯವನ್ನು ತಾಲೂಕಿನ ಕೃಷಿಕರು ಹೊಂದಿದ್ದಾರೆ.

110 ಅಣೆಕಟ್ಟುಗಳು
ಸುಳ್ಯ ತಾಲೂಕಿನಲ್ಲಿ ಸುಮಾರು 110 ಕಿಂಡಿ ಅಣೆಕಟ್ಟುಗಳು ಇವೆ. ಇದು ಜಲ ಸಂರಕ್ಷಣೆ ಜತೆಗೆ ಕೃಷಿ ತೋಟಗಳಿಗೆ ನೀರು ಬಳಕೆಗೆ ಸಹಕಾರಿಯಾಗಿದೆ. ಜಲಾನಯನ ಇಲಾಖೆ ಮೂಲಕ ಅಣೆಕಟ್ಟು ಇದ್ದು, ಸಣ್ಣ ನೀರಾವರಿ ಇಲಾಖೆಯ ಮೂಲಕ ಕೂಡ ಕಿಂಡಿ ಅಣೆಕಟ್ಟು ತಾಲೂಕಿನ ವಿವಿಧ ಕಡೆಗಳಲ್ಲಿ ಪ್ರತಿ ವರ್ಷ ನಿರ್ಮಾಣಗೊಳ್ಳುತ್ತದೆ.

Advertisement

ಬೇಸಗೆಯಲ್ಲಿ ನೀರಿನ ಸಮಸ್ಯೆ ವಿಪರೀತ ಕಾಡುತ್ತದೆ. ಸುಳ್ಯ ಕೃಷಿ ಅವಲಂಬಿತ ಪ್ರದೇಶ. ಒಂದೆಡೆ ಅತಿವೃಷ್ಟಿಯಿಂದ ಭಾರೀ ನಷ್ಟ ಅನುಭವಿಸುವಂತಾಗಿದೆ. ಮುಂದಿನ ಅವಧಿಗೆ ಕೃಷಿ ಚಟುವಟಿಕೆಗೆ ನೀರು ಅತ್ಯವಶ್ಯಕ. ಹೀಗಿರುವಾಗ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಆದರೆ ಈ ಬಾರಿ ಎರಡು ತಿಂಗಳ ಮುನ್ನವೆ ಈ ವ್ಯವಸ್ಥೆ ಮಾಡಿಕೊಳ್ಳಬೇಕಿದ್ದರಿಂದ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ನೀರಿನ ಕೊರತೆ ಬಗ್ಗೆಯೂ ಚಿಂತೆ ಮೂಡಲಾರಂಭಿಸಿದೆ. ಸ್ಥಳೀಯಾಡಳಿತಗಳೂ ಸಿದ್ಧತೆ ನಡೆಸುವ ಅನಿವಾರ್ಯತೆ ಇದೆ.

ಕೃಷಿ ಪ್ರಧಾನ ಸುಳ್ಯದಲ್ಲಿ ಕೃಷಿ ಬಿಟ್ಟರೆ ಬೇರೆ ಬದುಕಿಲ್ಲ. ಕೃಷಿ ಬೆಳೆಗಳಿಗೆ ನೀರು ಮುಖ್ಯ. ಕೃಷಿಕರಿಗೆ ಬೇಕಾದ ಸಾಕಷ್ಟು ಪ್ರಮಾಣದ ನೀರನ್ನು ಕೆರೆ, ಬಾವಿ, ನದಿ ಮೂಲಗಳು ಭರಿಸುತ್ತವೆ. ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಯಂತೆ ಮಳೆ ಆಗದೆ ಸಮಸ್ಯೆಗಳು ಉಂಟಾದಾಗ ನೀರಿನ ಕೊರತೆ ಬಂದು ಭೂಮಿಯಲ್ಲಿ ರಂಧ್ರ ಕೊರೆದು ತಳಭಾಗದ ನೀರು ಪಡೆಯಲು ಮುಂದಾಗುತ್ತೇವೆ. ಆದರೆ ನೀರನ್ನು ಹಿಡಿದಿಡುವ ಅಂತರ್ಜಲ ಸಂರಕ್ಷಣೆಗೆ ಕುರಿತು ನಿರ್ಲಕ್ಷ್ಯ ವಹಿಸುವುದು ಕಂಡು ಬರುತ್ತಿದೆ.

ಗಾಬರಿ ಹುಟ್ಟಿಸುತ್ತದೆ
ಸುಳ್ಯ ತಾ|ನಲ್ಲಿ ಈ ಬಾರಿ ಮಳೆ ಪ್ರಮಾಣ ಅಧಿಕವಾಗಿತ್ತು. ಆದರೆ ಈಗ ನೀರಿನ ಪ್ರಮಾಣ ನೋಡಿದರೆ ಗಾಬರಿಯಾಗುತ್ತದೆ. ಈ ಬಾರಿ ಅವಧಿಗೆ ಮುಂಚಿತ ನೀರನ್ನು ತಡೆ ಹಿಡಿಯಲು ಕಿಂಡಿ ಅಣೆಕಟ್ಟುಗಳಿಗೆ ಒಡ್ಡು ನಿರ್ಮಿಸುವುದು, ಹಲಗೆ ಜೋಡಿಸುವುದು ಅನಿವಾರ್ಯ.
ಶಿವಪ್ರಸಾದ ಪೆರಾಲು
   ಕೃಷಿಕ

ನೋಡಿಕೊಂಡು ಕ್ರಮ
ನೀರಿನ ಹರಿವು ಗಮನಿಸಿಕೊಂಡು ಹಲಗೆ ಜೋಡಣೆ ಕಾರ್ಯ ಪ್ರತಿ ವರ್ಷ ನಡೆಸುತ್ತೇವೆ. ಈ ಬಾರಿ ನೀರು ಬೇಗನೆ ಇಂಗಿರುವುದರಿಂದ ಈ ಕುರಿತು ಸಂಬಂಧಿಸಿದ ಅಧಿಕಾರಿ, ಎಂಜಿನಿಯರ್‌ಗಳ ಜತೆ ಚರ್ಚಿಸಿ ಆವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳುತ್ತೇವೆ.
– ಅನಿತಾ ಕೆ.,
ಸಂಪಾಜೆ ಗ್ರಾ.ಪಂ.

. ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next