Advertisement

ತಿಂಗಳಾಂತ್ಯಕ್ಕೆ  ನೀರು ಹರಿಸಲು ಚಿಂತನೆ

06:47 PM Jun 16, 2021 | Team Udayavani |

ವರದಿ :ಕೆ.ನಿಂಗಜ್ಜ

Advertisement

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಭತ್ತದ ಬೆಳೆಗೆ ಜೂ. 30ರೊಳಗೆ ನೀರು ಹರಿಸುವ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೀರಾವರಿ ತಜ್ಞರು ಚಿಂತನೆ ಮಾಡುತ್ತಿದ್ದಾರೆ.

ಈ ಬಾರಿ ಉತ್ತಮ ಮಳೆಯಾಗುವ ಕುರಿತು ಹವಾಮಾನ ತಜ್ಞರು, ವಿಜ್ಞಾನಿಗಳು ಸಲಹೆ ನೀಡಿದ್ದು, ಈಗಾಗಲೇ ಡ್ಯಾಂನಲ್ಲಿ 10 ಟಿಎಂಸಿ ಅಡಿಗೂ ಅಧಿ ಕ ನೀರು ಸಂಗ್ರಹವಾಗಿರುವುದರಿಂದ ಬೇಗನೆ ಕಾಲುವೆಗಳಿಗೆ ನೀರು ಹರಿಸುವುದರಿಂದ ಮುಂಗಾರು ಭತ್ತವನ್ನು ಜುಲೈನಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ. ಇದರಿಂದ ಮಳೆಗಾಲದಲ್ಲಿ ತುಂಗಭದ್ರಾ ಡ್ಯಾಂ ಭರ್ತಿಯಾಗಿ ನದಿ ಮೂಲಕ ನೀರು ಪೋಲಾಗುವುದನ್ನು ತಡೆಯಲು ಸಾಧ್ಯ ಹಾಗೂ ಭತ್ತದ ಬೆಳೆ ಚಳಿಗೆ ಸಿಗದೇ ಉತ್ತಮ ಇಳುವರಿ ಬರುತ್ತದೆ. ಕ್ರಿಮಿಕೀಟಗಳ ಹಾವಳಿ ಇರುವುದಿಲ್ಲ. ಮಳೆಗಾಲದಲ್ಲಿ ಭತ್ತ ಚೆನ್ನಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಕಳೆದ 10 ವರ್ಷಗಳ ಹಿಂದೆ ಪ್ರತಿ ವರ್ಷ ಮುಂಗಾರು ಬೆಳೆಗೆ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಕಾಲುವೆಗೆ ನೀರು ಹರಿಸಲಾಗುತ್ತಿತ್ತು. ಬೇಸಿಗೆ ಹಂಗಾಮಿನಲ್ಲಿ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಕಡ್ಡಾಯವಾಗಿ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ನೀರಿನ ಹಂಚಿಕೆ ಮಾಡಲಾಗುತ್ತಿತ್ತು. 10 ವರ್ಷಗಳಿಂದೀಚೆಗೆ ಮುಂಗಾರು ಮತ್ತು ಬೇಸಿಗೆ ಸಂದರ್ಭದಲ್ಲಿ ನೀರಾವರಿ ಸಲಹಾ ಸಭೆ ಕರೆಯಲಾಗುತ್ತದೆ.

ಡ್ಯಾಂ ನಿರ್ಮಾಣ ಆದಾಗಿನಿಂದ ಮುಂಗಾರು ಹಂಗಾಮಿನಲ್ಲಿ ಐಸಿಸಿ ಸಭೆ ನಡೆಸಿದ ಉದಾಹರಣೆ ಇಲ್ಲ ಎನ್ನುತ್ತಾರೆ. ಅಚ್ಚುಕಟ್ಟು ಪ್ರದೇಶದ ಹಿರಿಯ ರೈತರ ಮುಖಂಡರು.

Advertisement

ಎರಡು ವರ್ಷಗಳಿಂದ ಕೊರೊನಾ ಹಾವಳಿಯಿಂದಾಗಿ ಯಾವುದೇ ಬೆಳೆಗೂ ಸೂಕ್ತ ಬೆಲೆ ಸಿಗದೇ ರೈತರಿಗೆ ನಷ್ಟವುಂಟಾಗುತ್ತಿದೆ. ಈ ವರ್ಷ ಮುಂಗಾರು ಭತ್ತದ ನಾಟಿ ಕಾರ್ಯ ನದಿ ಪಾತ್ರ ಮತ್ತು ಪಂಪ್‌ಸೆಟ್‌ ಇರುವ ನೀರಾವರಿ ಪ್ರದೇಶದಲ್ಲಿ ನಡೆಯುತ್ತಿದೆ. ಡ್ಯಾಂ ನೀರಿನಿಂದ ಭತ್ತ ಬೆಳೆಯುವ ರೈತರು ಭತ್ತದ ಸಸಿ ಮಡಿ ಹಾಕುವ ಕಾರ್ಯ ಆರಂಭಿಸಿದ್ದು, ಜುಲೈ ಮೊದಲ ವಾರದಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಸಿ ಮಡಿ ಹಾಕುವ ಕಾರ್ಯ ಭರದಿಂದ ಮಾಡುತ್ತಿದ್ದಾರೆ.

ಇನ್ನೂ ಮಾರಿಲ್ಲ ಭತ್ತ: ಕೊರೊನಾ ಪರಿಣಾಮವಾಗಿ ಜಾತ್ರೆ, ಸಾಮೂಹಿಕ ಮದುವೆ, ಹೊಟೇಲ್‌, ಹಾಸ್ಟೆಲ್‌, ಮಠಗಳಲ್ಲಿ ದಾಸೋಹ ಬಂದ್‌ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವಾಗುತ್ತಿಲ್ಲ. ಇದರಿಂದ ಕಳೆದ ವರ್ಷದ ಮುಂಗಾರು, ಹಿಂಗಾರಿನಲ್ಲಿ ಬೆಳೆದ ಭತ್ತ ಶೇ. 60ರಷ್ಟು ಮಾರಾಟವಾಗಿಲ್ಲ. ಪುನಃ ಮುಂಗಾರು ಹಂಗಾಮಿನಲ್ಲಿ ರೈತರು ಭತ್ತ ನಾಟಿಗೆ ಸಜ್ಜಾಗಿದ್ದಾರೆ. ಕೃಷಿ ತಜ್ಞರು ವಿಜ್ಞಾನಿಗಳು ಬೆಳೆ ಪದ್ಧತಿ ಬದಲಾವಣೆ ಅಥವಾ ಕ್ರಾಪ್‌ ಹಾಲೀಡೇ ಮಾಡುವಂತೆ ಸಲಹೆ ನೀಡಿದರೂ ಪ್ರಯೋಜನವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next