Advertisement

ತಾರಾಲಯ ಕಾಮಗಾರಿಗೆ ಹಿಡಿದಿದೆ ಗ್ರಹಣ! ಅನೈತಿಕ ಚಟುವಟಿಕೆ ತಾಣವಾಗಿದೆ ಜ್ಞಾನಾರ್ಜನೆ ಕಟ್ಟಡ

03:39 PM Dec 08, 2020 | sudhir |

ಗದಗ: ಬೆಟಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ಶೈಲಿಯ ತಾರಾಲಯ ಕಾಮಗಾರಿಗೆ ಅನುದಾನ ಕೊರತೆಯಿಂದ ಗ್ರಹಣ ಹಿಡಿದಿದೆ. ಮೂರು ವರ್ಷಗಳು ಕಳೆದರೂ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ಪರಿಣಾಮ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.

Advertisement

ಈ ಭಾಗದ ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಮಹದಾಸೆಯೊಂದಿಗೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸ್ಥಳೀಯ ಶಾಸಕ ಎಚ್‌.ಕೆ. ಪಾಟೀಲ ಅವರ ಪ್ರಯತ್ನದಿಂದ ಗದಗ ನಗರಕ್ಕೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ
ಹಾಗೂ ತಾರಾಲಯ ಮಂಜೂರಾಗಿದೆ.

2 ವರ್ಷ ಕಳೆದರೂ ಪೂರ್ಣಗೊಂಡಿಲ್ಲ: ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ 2017ರಲ್ಲೇ ಗದಗದಲ್ಲಿ ಮಿನಿ ತಾರಾಲಯ ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ನಿರ್ಮಾಣಕ್ಕಾಗಿ ಸುಮಾರು 7 ಕೋಟಿ ರೂ. ಮಂಜೂರಾತಿ ನೀಡಿದೆ.

ಉಭಯ ಕಟ್ಟಡಗಳ ಕಾಮಗಾರಿಗಳಿಗೆ 2018ರಲ್ಲಿ ಚಾಲನೆ ನೀಡಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ 1.99 ಕೋಟಿ ರೂ. ಮಂಜೂರಾಗಿತ್ತು. ಅದರಲ್ಲಿ ಮಿನಿ ತಾರಾಲಯ ಕಟ್ಟಡ ಭಾಗಶಃ ಪೂರ್ಣಗೊಂಡಿದೆ. ನೆಲ ಮಹಡಿಯಲ್ಲಿ ಖಗೋಳ ವಿಜ್ಞಾನ ಕುರಿತು ಮಾಹಿತಿ ನೀಡುವ ವಸ್ತು ಪ್ರದರ್ಶನ, ಕಚೇರಿ ಬಳಕೆಗೆ ಮೀಸಲಿಡಲಾಗಿದೆ. ಇನ್ನುಳಿದಂತೆ ಮೊದಲ ಮಹಡಿಯನ್ನು ಗೋಳಾಕಾರದಲ್ಲಿ ಗುಮ್ಮಟ ನಿರ್ಮಿಸಲಾಗಿದೆ. ಅದರಲ್ಲಿ ತಾರಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಚಿರತೆ ದಾಳಿಗೆ ಕರು ಜಿಂಕೆ ಬಲಿ : ಮನೆಯಿಂದ ಹೊರಬರಲು ಹೆದರುತ್ತಿರುವ ನಿವಾಸಿಗಳು

Advertisement

ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಮುಕ್ತಾಯ ಹಂತಕ್ಕೆ ತಲುಪಿದೆಯಾದರೂ, ತಾರಾಲಯ ಒಳಾಂಗಣ ನಿರ್ಮಾಣ, ಅತ್ಯಾಧುನಿಕ ಪರಿಕರ ಒದಗಿಸುವುದು ಬಾಕಿ ಉಳಿದಿದೆ. ಈ ನಡುವೆ ಕಾಮಗಾರಿಗೆ ಅನುದಾನ ಕೊರತೆ ಎದುರಾಗಿದೆ. ಹೀಗಾಗಿ ತಾರಾಲಯ ನಿರ್ಮಾಣ ಕುಂಟುತ್ತ ಸಾಗಿದೆ. ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಬರೋಬ್ಬರಿ ಎರಡು ವರ್ಷಗಳು ಕಳೆದರೂ ಪೂರ್ಣಗೊಳ್ಳುತ್ತಿಲ್ಲ.

ಅನೈತಿಕ ಚಟುವಟಿಕೆ ತಾಣ: ಕಾಮಗಾರಿ ಸ್ಥಳದಲ್ಲಿ ಯಾವುದೇ ಕಾವಲುಗಾರರಿಲ್ಲ. ನೆಲಮಹಡಿ ಬಾಗಿಲುಗಳನ್ನು ಭದ್ರವಾಗಿ ಬಂದ್‌ ಮಾಡಿರುವ ಗುತ್ತಿಗೆದಾರರು, ಮೊದಲ ಮಹಡಿಯಲ್ಲಿರುವ ಗುಮ್ಮಟ ಮುಕ್ತವಾಗಿರಿಸಿದ್ದಾರೆ. ಈ ನಡುವೆ ಅದಕ್ಕೆ ಕಬ್ಬಿಣದ ಏಣಿ ಅಳವಡಿಸಿದ್ದರಿಂದ ಪುಂಡ-ಪೋಕರಿಗಳ ಹಾವಳಿ ಹೆಚ್ಚಿದೆ. ಪೋಲಿಗಳು ಕೆಲವೊಮ್ಮೆ ದಿನವಿಡೀ ಇಸ್ಪಿಟ್‌ ಜೂಜಾಡುತ್ತಾರೆ. ಹಗಲಿರುಳಿನ ವ್ಯತ್ಯಾಸವಿಲ್ಲದೇ ಕೆಲವರು ಸ್ನೇಹಿತರೊಂದಿಗೆ ಬಂದು ಮದ್ಯ ಸೇವನೆ ಮಾಡುತ್ತಾರೆ. ಪೋಲಿಗಳ ಅನುಚಿತ
ವರ್ತನೆಯಿಂದ ತಾರಾಲಯ ಹಿಂಭಾಗದಲ್ಲೇ ಇರುವ ರಾಮ ಮಂದಿರಕ್ಕೆ ಆಗಮಿಸುವ ಮಹಿಳೆಯರು, ಯುವತಿಯರಿಗೆ ಇರಿಸು-ಮುರುಸಾಗುತ್ತದೆ. ಇದನ್ನು ಪ್ರಶ್ನಿಸುವ ಸ್ಥಳೀಯರೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ. ಪೊಲೀಸರನ್ನು ಕರೆಯುವಷ್ಟರಲ್ಲಿ ಕಾಲು ಕೀಳುತ್ತಾರೆ ಎಂಬುದು ಸ್ಥಳೀಯರಾದ ರಮೇಶ್‌ ಜೋಷಿ, ಹದ್ದಣ್ಣವರ ಮತ್ತಿತರರ ದೂರು.

ಇದನ್ನೂ ಓದಿ:ಚುನಾವಣೆಯಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ: ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದ DYSP

ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಂತ ಉತ್ಸಾಹದಿಂದ ಆರಂಭಿಸಿರುವ ತಾರಾಲಯದ ಕಟ್ಟಡ ಅರ್ಧಕ್ಕೆ ನಿಂತಿದ್ದರಿಂದ ಸುತ್ತಮುತ್ತಲಿನ ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಈ ಬಗ್ಗೆ ಶಾಸಕರು ಗಮನ ಹರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಓರ್ವ ಕಾವಲುಗಾರರನ್ನು ನೇಮಿಸುವಂತೆ ಸಂಬಂಧಿ ಸಿದವರಿಗೆ ಸೂಚಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಾರಾಲಯ ಕಟ್ಟಡದಿಂದ ಸಮಸ್ಯೆ ಹೆಚ್ಚಿದೆ. ಸಕಾಲಕ್ಕೆ ಕಾಮಗಾರಿ ಮುಗಿಯದೇ ಇರುವುದರಿಂದ ಪೋಲಿಗಳ ತಾಣವಾಗಿದೆ. ನಾನಾ ರೀತಿಯ ಅನೈತಿಕ ಚಟುವಟಿಕೆಗಳಿಗೆ ಕಟ್ಟಡ ಬಳಕೆಯಾಗುತ್ತಿದೆ. ಕೆಲವೊಮ್ಮೆ ಅವರವರ ಮಧ್ಯೆಯೇ ಜಗಳ ನಡೆಯುತ್ತವೆ. ಇದನ್ನು ಪ್ರಶ್ನಿಸುವ ಸ್ಥಳೀಯರೊಂದಿಗೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಾರೆ. ಏನಾದರೂ ಅಹಿತಕರ ಘಟನೆ ಸಂಭವಿಸಿದರೆ ಯಾರು ಹೊಣೆ?
– ಭೀಮಸೇನ್‌ ಕುಲ್ಕರ್ಣಿ, ಸ್ಥಳೀಯ ನಿವಾಸಿ

ಅನುದಾನ ಕೊರತೆಯೊಂದಿಗೆ ತಾರಾಲಯದ ವಿನ್ಯಾಸ ಬದಲಾವಣೆಗೆ ಶಾಸಕ ಎಚ್‌.ಕೆ.ಪಾಟೀಲ ಸೂಚಿಸಿದ್ದಾರೆ. ಸದ್ಯ
ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಅತ್ಯಾಧುನಿಕವಾಗಿ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ.
– ಗಣೇಶ್‌ಸಿಂಗ್‌ ಬ್ಯಾಳಿ, ಬೆಟಗೇರಿ ಭಾಗದ ಹಿರಿಯರು.

Advertisement

Udayavani is now on Telegram. Click here to join our channel and stay updated with the latest news.

Next