ಮಾಸ್ಕೋ: ತುರ್ತು ಭೂಸ್ಪರ್ಶ ಮಾಡುತ್ತಿದ್ದಾಗಲೇ ರಷ್ಯಾದ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ 78 ಪ್ರಯಾಣಿಕರಲ್ಲಿ 41 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇವರಲ್ಲಿ ಇಬ್ಬರು ಮಕ್ಕಳೂ ಸೇರಿದ್ದಾರೆ.
ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಾಗ 33 ಜನ ತುರ್ತು ನಿರ್ಗಮನದ ಮೂಲಕ ವಿಮಾನದಿಂದ ಆಚೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಈ ಪೈಕಿ 11 ಜನರು ಸುಟ್ಟಗಾಯಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಯಾಣಿಕರ ದಟ್ಟಣೆಯಿಂದಾಗಿ ಸದಾ ಗಿಜಿಗುಟ್ಟುವ ಹಾಗೂ ಮಾಸ್ಕೋದ ಅತಿ ಹೆಚ್ಚು ಜನಸಂದಣಿಯ ವಿಮಾನ ನಿಲ್ದಾಣವೆಂದೇ ಹೆಸರಾಗಿರುವ ಶೆರೆಮೆತ್ಯೆವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನ ಮಾಸ್ಕೋದಿಂದ ಮುರ್ಮಾನ್ಸ್ಕ್ ನ ಆರ್ಕ್‌ಟಿಕ್ ನಗರಕ್ಕೆ ಪ್ರಯಾಣ ಬೆಳೆಸುತ್ತಿತ್ತು.
ವಿಮಾನದ ಪೈಲಟ್ ಡೆನಿಸ್ ಯೆವ್ದೋಕಿಮೊವ್ ಹೇಳುವ ಪ್ರಕಾರ, ಸ್ಥಳೀಯ ಕಾಲಮಾನ ರವಿವಾರ ಸಂಜೆ ಸುಖೋಯ್ ಸೂಪರ್ ಜೆಟ್ 100 ಮಾದರಿಯ ವಿಮಾನ ಗಗನಕ್ಕೆ ಹಾರಿದ ಕೆಲವೇ ಸೆಕೆಂಡ್‌ಗಳಲ್ಲಿ ವಿಮಾನದ ಹಿಂಬದಿಗೆ ಸಿಡಿಲು ಬಡಿದ ಅನುಭವವಾಗಿ, ಆ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿತು.
ತತ್‌ಕ್ಷಣವೇ, ವಿಮಾನವನ್ನು ನಿಲ್ದಾಣದೊಳಕ್ಕೆ ಚಲಾಯಿಸಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ಆನಂತರ, ಕಾಕ್‌ಪಿಟ್‌ನಿಂದ ತುರ್ತು ನಿರ್ಗಮನ ದ್ವಾರವನ್ನು ತೆರೆದು ಅಲ್ಲಿಂದ ಪ್ರಯಾಣಿಕರನ್ನು ಹೊರಗೆ ದಬ್ಬಲಾಯಿತು.
ಅಷ್ಟರಲ್ಲಿ ವಿಮಾನದ ಹಿಂಭಾಗದಲ್ಲಿ ಭಾರೀ ಸ್ಫೋಟವಾಗಿದ್ದರಿಂದ ಹಲವಾರು ಪ್ರಯಾಣಿಕರು ಸಜೀವ ದಹನವಾದರು ಎನ್ನಲಾಗಿದೆ. ಇಂಧನ ಟ್ಯಾಂಕ್ ಭರ್ತಿಯಾಗಿದ್ದರಿಂದ ಈ ಸ್ಫೋಟವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ವಿಮಾನದ ಅವಶೇಷಗಳಡಿ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆಯಾಗಿದ್ದು, ಅದನ್ನು ತನಿಖೆಗೆ ಪರಿಗಣಿಸಲಾಗಿದೆ.