ಬೆಂಗಳೂರು: ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಭಾರತೀಯ ಕರಾವಳಿ ರಕ್ಷಣಾ ಅಕಾಡೆಮಿಗೆ ಸಂಬಂಧಿಸಿದಂತೆ ಇಂಡಿಯನ್ ಕೋಸ್ಟ್ ಗಾರ್ಡ್‌ನ ಪಶ್ಚಿಮ ವಲಯದ ಇನ್‌ಸ್ಪೆಕ್ಟರ್ ಜನರಲ್ ಎಸ್. ಪರಮೇಶ್ ಮತ್ತು ತಂಡವು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಪ್ರಸ್ತಾವಿತ ಯೋಜನೆ ಪ್ರಗತಿ, ತ್ವರಿತ ಗತಿಯಲ್ಲಿ ಅದರ ಅನುಷ್ಠಾನ, ಇದರ ಅನುಕೂಲಗಳು, ಅನುಷ್ಠಾನಕ್ಕಿರುವ ಅಡೆತಡೆ ಗಳ ಕುರಿತು ಚರ್ಚಿಸಲಾಯಿತು. ಅಲ್ಲದೆ, ರಾಜ್ಯ ಕಡಲ ತೀರವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಮತ್ತು ಇತರೆ ಮೂಲಸೌಕರ್ಯಗಳು, ಭದ್ರತೆ ಹೆಚ್ಚಿಸುವ ಅಗತ್ಯತೆ ಬಗ್ಗೆ ಎಸ್. ಪರಮೇಶ್ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ:- ಮೊಸಳೆ ಮರಿ ಮಾರಾಟ: ಇಬ್ಬರ ಬಂಧನ
ಇದೇ ವೇಳೆ, ಈಚೆಗೆ ತೌಖ್ತೆ ಚಂಡಮಾರುತ ಮತ್ತು ತೀವ್ರ ಮಳೆಯಿಂದ ರಾಜ್ಯದ ಕರಾವಳಿಯಲ್ಲಿ ಮೀನುಗಾರರು ಸೇರಿದಂತೆ 233 ಜೀವಗಳನ್ನು ರಕ್ಷಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ಚಂಡಮಾರುತದಿಂದ ಯಾವುದೇ ಪ್ರಾಣ ಹಾನಿ ಆಗಲಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಕಾಡೆಮಿ ಸ್ಥಾಪನೆ ಸೇರಿದಂತೆ ವಿವಿಧ ಪ್ರಸ್ತಾವನೆಗಳಿಗೆ ಪೂರಕವಾಗಿ ಸ್ಪಂದಿಸಿದರು. ಕರಾವಳಿ ರಕ್ಷಣಾ ವಲಯ (ಕರ್ನಾಟಕ)ದ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಎಸ್.ಬಿ. ವೆಂಕಟೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಇದ್ದರು.