ಬೀದರ: ತಾಂಡಾ ನಿವಾಸಿಗಳ ವಲಸೆ ಪ್ರವೃತ್ತಿ ತಡೆದು ಅವರ ಆರ್ಥಿಕ ಸಬಲೀಕರಣಕ್ಕಾಗಿ ತಾಂಡಾ ಅಭಿವೃದ್ಧಿ ನಿಗಮದಿಂದ ವೃತ್ತಿ ಕೌಶಲ್ಯ ಮತ್ತು ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಗಮದ ಅಧ್ಯಕ್ಷ ಬಿ. ಬಾಲರಾಜ್ ಹೇಳಿದರು. ನಗರದ ರಂಗ ಮಂದಿರದಲ್ಲಿ ಶುಕ್ರವಾರ ಬಂಜಾರಾ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ಅರಣ್ಯ ಹಕ್ಕು ಕಾಯ್ದೆ ಅಕ್ರಮ- ಸಕ್ರಮ ಜಮೀನು ಸಾಗುವಳಿ ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾ ನಿವಾಸಿಗಳಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಬೀದರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬಂಜಾರಾ ಆರ್ಥಿಕ-ಸಾಂಸ್ಕೃತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಲಾಲಧರಿ ಬಳಿ 107 ಕೋಟಿ ರೂ. ವೆಚ್ಚದಲ್ಲಿ ಉದ್ದೇಶಿತ ಟ್ರೈಬಲ್ ಪಾರ್ಕ್ ಸ್ಥಾಪನೆಗೆ ಸರ್ಕಾರ 34.06 ಎಕರೆ ಜಮೀನು ಮಂಜೂರು ಮಾಡಿದೆ. ಇಲ್ಲಿ ಬಂಜಾರಾ ಕಸೂತಿ ತರಬೇತಿ ಮತ್ತು ಸಿದ್ಧ ಉಡುಪು ತಯಾರಿಕಾ ಕೇಂದ್ರ ಸ್ಥಾಪನೆಗೆ 6 ಕೋಟಿ ರೂ. ಮತ್ತು ಬಾಗಲಕೋಟೆಯ ಗದ್ದನಕೇರಿ ತಾಂಡಾದಲ್ಲಿ ಮತ್ತೂಂದು ಕೇಂದ್ರ ಸ್ಥಾಪನೆಗೆ 3 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದರು. ಗ್ರಾಮಗಳಿಂದ ದೂರದಲ್ಲಿರುವ ತಾಂಡಾಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ತಾಂಡಾ ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಂಸ್ಕೃತಿಕವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2009ರಲ್ಲಿ ಈ ನಿಗಮ ಅಸ್ತಿತ್ವಕ್ಕೆ ತರಲಾಗಿದೆ. ಕಾಂಗ್ರೆಸ್ ಸರ್ಕಾರದ ಐದು ಬಜೆಟ್ ಸೇರಿ ನಿಗಮಕ್ಕೆ 376 ಕೋಟಿ ರೂ. ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಸಂತ ಸೇವಾಲಾಲರ ಜನ್ಮಸ್ಥಳ ಭಾಯಾಘಡ್ (ಸೂರಗೊಂಡನಕೊಪ್ಪ) ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ. ಇಲ್ಲಿ 16 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಪ್ರಾರಂಭಿಸಲಾಗುವುದು. ಜತೆಗೆ ಕುಡಿತದ ಚಟ ಬಿಡುಸವ ಆರೋಗ್ಯ ಧಾಮ ಸ್ಥಾಪಿಸಲಾಗುವುದು ಎಂದ ಅವರು, ಅರಣ್ಯ ಹಕ್ಕು ಕಾಯ್ದೆ ಅಕ್ರಮ- ಸಕ್ರಮ ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕುರಿತು ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು. ಲಂಬಾಣಿ ಜನರು ಮುಗ್ಧರಾಗಿದ್ದು, ಶ್ರಮ ಜೀವಿಗಳಾಗಿದ್ದಾರೆ. ಅವರ ಶ್ರಮಕ್ಕೆ ತಕ್ಕ ಫಲ ಮತ್ತು ಹಕ್ಕು ಸಿಗಬೇಕು. ಈ ನಿಟ್ಟಿನಲ್ಲಿ ನಿಗಮ ಅಧಿಕಾರಿಗಳು ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಕೂಡ ತಾಂಡಾಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು. ನಿಗಮದ ನಿರ್ದೇಶಕ ನೀಲಕಂಠ ರಾಠೊಡ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮ ಜಿಲ್ಲೆಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದು, ಬೀದರನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಬಂಜಾರಾ ಭವನ ನಿರ್ಮಿಸಲಾಗುತ್ತಿದೆ. ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ತೊಂದರೆ ಕೊಡುತ್ತಿದೆ. ಅರಣ್ಯ ಹಕ್ಕು ಕಾಯ್ದೆ ಜಾರಿ ಬಳಿಕ ಉಳುವವನೇ ಭೂ ಒಡೆಯನಾಗುತ್ತಾನೆ. ಪ್ರತಿ ತಾಂಡಾಗಳಲ್ಲಿ ಯುವಕರು ವಿಕಾಸ ಸಮಿತಿ ರಚಿಸಿಕೊಂಡು ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ನಿರ್ದೇಶಕ ಚರಣಸಿಂಗ್ ರಾಠೊಡ್, ನಿಗಮದ ಅಭಿವೃದ್ಧಿ ಅಧಿಕಾರಿ ಗುರುನಾಥ, ಜಿಪಂ ಸದಸ್ಯರಾದ ಜಯಶ್ರೀ ರಾಠೊಡ, ತಾರಾಬಾಯಿ ರಾಠೊಡ, ತಾಪಂ ಸದಸ್ಯರಾದ ಮೀನಾಬಾಯಿ ಚವ್ಹಾಣ, ಯಶೋಧಾ ನೀಲಕಂಠ, ಪ್ರಮುಖರಾದ ಶಶಿರಾವ್ ರಾಠೊಡ, ಸೋನಾಬಾಯಿ, ಧನಾಸಿಂಗ್ ನಾಯಕ, ಲಲಿತಾಬಾಯಿ, ಪ್ರಕಾಶ ಜಾಧವ, ಬಸವರಾಜ ಪವಾರ, ಗೋವರ್ಧನ ರಾಠೊಡ, ದಯಾನಂದ ಜಾಧವ ಮತ್ತು ಗೋಪಾಲಸಿಂಗ್ ಇದ್ದರು.