Advertisement

Illegal immigration: ಪಾಕಿಸ್ಥಾನಿಗರ ವಿಚಾರಣೆ ನಡೆಯುತ್ತಿದೆ: ಗೃಹ ಸಚಿವ ಪರಮೇಶ್ವರ್‌

01:26 AM Oct 01, 2024 | Team Udayavani |

ಬೆಂಗಳೂರು: ಜಿಗಣಿಯಲ್ಲಿ ಪಾಕಿಸ್ತಾನದಿಂದ ಬಾಂಗ್ಲಾಕ್ಕೆ ಬಂದು ಅಲ್ಲಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿದ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಬರಲಿಲ್ಲ. ಬಂಧಿತರು ಪಾಸ್‌ಪೋರ್ಟ್‌ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಹೆಸರು ಬದಲಾಯಿಸಿಕೊಂಡಿದ್ದಾರೆ. ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.

ಬಹಳ ಜನ ಬಾಂಗ್ಲಾದೇಶದವರು ಬಂಧಿಸಿದ್ದಾರೆ. ನಿತ್ಯ ಹಿಡಿದು ವರದಿ ನೀಡುತ್ತಿದ್ದೇವೆ. ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್‌ ಹೆಚ್ಚಿಸಬೇಕು. ಕೇಂದ್ರ ಸರಕಾರದ ಗಮನಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾದೇಶದ ಹೈಕಮಿಷನ್‌ಗೂ ತಿಳಿಸುತ್ತಿದ್ದೇವೆ ಎಂದರು.

ಆನೇಕಲ್‌ನಲ್ಲಿ ಪಾಕಿಸ್ಥಾನದ ನಾಲ್ವರ ಬಂಧನ
ಆನೇಕಲ್‌ ತಾಲೂಕಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನ ಮೂಲದ ನಾಲ್ವರನ್ನು ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಸ್ಫೋಟಕ ಸಂಗತಿ ಎಂದರೆ ಹಿಂದೂಗಳ ಹೆಸರಿನಲ್ಲಿ ಈ ಕುಟುಂಬ ವಾಸ ಮಾಡುತ್ತಿದ್ದು, ಮನೆಯೊಳಗೆ ಮುಸ್ಲಿಂ ಧರ್ಮಾಚರಣೆ ಮಾಡಿಕೊಂಡಿತ್ತು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ.

ಬೆಂಗಳೂರಿನ ಹೊರವಲಯ ಜಿಗಣಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನದ ಒಂದೇ ಕುಟುಂಬದ ನಾಲ್ವರು ಭಾರತೀಯ ಪಾಸ್‌ಪೋರ್ಟ್‌, ಆಧಾರ್‌, ಪಾನ್‌, ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದರು. ರಶೀದ್‌ 10 ವರ್ಷಗಳ ಹಿಂದೆ ಪಾಕಿಸ್ಥಾನದಿಂದ ಬಾಂಗ್ಲಾದೇಶಕ್ಕೆ ಬಂದು, ಅಲ್ಲಿಂದ ಪಶ್ಚಿಮ ಬಂಗಾಳ ಗಡಿಭಾಗದಲ್ಲಿ ನುಸುಳಿ ದಿಲ್ಲಿಗೆ ಆಗಮಿಸಿದ್ದ. ಅಲ್ಲಿ ಆಧಾರ್‌, ಪಾನ್‌, ಡಿಎಲ್‌, ಪಾಸ್‌ಪೋರ್ಟ್‌ ಮಾಡಿಸಿಕೊಂಡು 2018ರಲ್ಲಿ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಬೆಂಗಳೂರು ಪೊಲೀಸರು ಅಕ್ರಮವಾಗಿ ಆಗಮಿಸಿದ ಕುಟುಂಬಗಳ ಹಿಂದೆ ಬಿದ್ದಿದ್ದು, ತನಿಖೆ ನಡೆಸುತ್ತಿದ್ದರು.

Advertisement

ಆನೇಕಲ್‌ ತಾಲೂಕಿನ ಜಿಗಣಿ ಸಮೀಪದ ಖಾಸಗಿ ಲೇಔಟ್‌ನಲ್ಲಿನ ವಿಲ್ಲಾವೊಂದರಲ್ಲಿ ಕಳೆದ 6 ವರ್ಷದಿಂದ ಪಾಕಿಸ್ಥಾನ ಮೂಲದ ಕುಟುಂಬವೊಂದು ಹಿಂದೂಗಳ ಹೆಸರಿನಲ್ಲಿ ಗುರುತಿನ ದಾಖಲೆ ಇಟ್ಟುಕೊಂಡು ವಾಸವಾಗಿತ್ತು. ಯಾರಿಗೂ ಅನು ಮಾನ ಬಾರ ದಂತೆ ಈ ಕುಟುಂಬ ನೆಲೆ ಸಿ ತ್ತು.

ದಾಖಲೆಯಲ್ಲಿ ಹಿಂದೂ; ಮನೆಯಲ್ಲಿ ಮುಸ್ಲಿಂ ಬರಹ!
ರವಿವಾರ ಸಂಜೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ ಜಿಗಣಿ ಪೊಲೀಸರ ತಂಡ ಈ ಮನೆ ಮೇಲೆ ದಾಳಿ ನಡೆಸಿತ್ತು. ದಾಖಲೆಗಳಲ್ಲಿ ಹಿಂದೂ ಹೆಸರು ಇದ್ದರೂ, ಮನೆಯ ಒಳಭಾಗದಲ್ಲಿ ಮುಸ್ಲಿಂ ಸಂಬಂಧಿತ ಫೋಟೋ, ಪುಸ್ತಕ, ಬರಹ ಪತ್ತೆಯಾಗಿವೆ. ವಿಚಾರಣೆ ವೇಳೆ ಈ ಮನೆಯಲ್ಲಿದ್ದವರೆಲ್ಲ ಪಾಕಿಸ್ಥಾನ ಮೂಲದವರು ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಜಿಗಣಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ.

ರಶೀದ್‌ ಇಲ್ಲಿ ಆಗಿದ್ದ ಶಂಕರ್‌ ಶರ್ಮಾ!
ಈ ಪ್ರಕರಣದ ಪ್ರಮುಖ ಆರೋಪಿ ರಶೀದ್‌ ಅಲಿ ಸಿದ್ದಿಕಿ ಆಗಿದ್ದು, ಈತ ಶಂಕರ್‌ ಶರ್ಮಾ ಎನ್ನುವ ಹೆಸರಿನಲ್ಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಈತನ ಪತ್ನಿ ಆಯೇಷಾ, ಆಶಾ ಶರ್ಮಾ ಹೆಸರಿನಲ್ಲಿ, ಅತ್ತೆ ರುಬಿನಾ ರಾಣಿ ಶರ್ಮಾ ಹೆಸರಿನಲ್ಲಿ, ಮಾವ ಮೊಹಮ್ಮದ್‌ ಯೂನಸ್‌, ರಾಮ್‌ ಬಾಬು ಶರ್ಮಾ ಹೆಸರಿನಲ್ಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದರು. ಮೆಹದಿ ಫೌಂಡೇಶನ್‌ ಕಡೆಯಿಂದ ಈ ಕುಟುಂಬಕ್ಕೆ ಹಣಕಾಸಿನ ನೆರವೂ ಸಿಗುತ್ತಿರುವುದು ಬೆಳಕಿಗೆ ಬಂದಿದೆ.

ಸಿಕ್ಕಿ ಬಿದ್ದಿದ್ದು ಹೇಗೆಂದರೆ?
ಇವರ ಸಂಬಂಧಿಕರಿಬ್ಬರು ಇತ್ತೀಚೆಗಷ್ಟೇ ಚೆನ್ನೈನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಹುಡುಕಾಟ ನಡೆಸಿ ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಇವರಿಗೆ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ದೇಶದೊಳಗೆ ಅಕ್ರಮವಾಗಿ ನುಸುಳಿ ವಾಸ ಸೇರಿ ಪಾಸ್‌ಪೋರ್ಟ್‌ ಆ್ಯಕ್ಟ್‌ನಡಿ ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಾಲ್ವರ ಬಂಧನದ ಬೆನ್ನಲ್ಲೇ ವಿದೇಶಿಗರ ನೋಂದಣಿ ಕಚೇರಿ, ಗುಪ್ತಚರ, ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next