ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ ಎರಡನೇ ದಿನದಾಟದಲ್ಲಿ ಭಾರತದ ಕ್ರೀಡಾಪಟುಗಳು ಪದಕ ನಿರೀಕ್ಷೆ ಹೆಚ್ಚಿಸಿದ್ದಾರೆ. ವನಿತಾ 10 ಮೀ ಏರ್ ರೈಫಲ್ ವಿಭಾಗದಲ್ಲಿ ರಮಿತಾ ಜಿಂದಾಲ್ ಫೈನಲ್ ಪ್ರವೇಶಿಸಿದ್ದಾರೆ.
ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಆಗಿದ್ದಾರೆ. ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್ ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್.
ರಮಿತಾ 631.5 ಸ್ಕೋರ್ ಮಾಡಿದ್ದರಿಂದ ಅಂತಿಮ ಸರಣಿಯವರೆಗೂ ಅವರು ಕಟ್ ಮಾಡುವುದಿಲ್ಲ ಎಂದು ಭಾವಿಸಿದ್ದರು. ರಮಿತಾ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದು ಪದಕ ಸುತ್ತಿಗೆ ಲಗ್ಗೆ ಇಟ್ಟರು. ಕೊರಿಯಾದ ಹ್ಯೋಜಿನ್ ಬಾನ್ 634.5 ಅಂಕಗಳೊಂದಿಗೆ ಸುತ್ತಿನಲ್ಲಿ ಗೆದ್ದು ಒಲಿಂಪಿಕ್ ಅರ್ಹತಾ ದಾಖಲೆಯನ್ನೂ ನಿರ್ಮಿಸಿದರು.
ಮೊದಲ ಪಂದ್ಯ ಗೆದ್ದ ಸಿಂಧು
ಟೋಕಿಯೋ ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಮೊದಲ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದರು. ಮಹಿಳಾ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಎದುರಾದ ಮಾಲ್ಡೀವ್ಸ್ ನ ಫಾತಿಮಾತ್ ನಬಾಹ ಅವರನ್ನು 21-9, 21-6 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು.
ಈ ಪಂದ್ಯವು ಸಿಂಧು ಅವರಿಗೆ ಅಭ್ಯಾಸ ಪಂದ್ಯದಂತಿತ್ತು. ಅರ್ಧ ಗಂಟೆಯೊಳಗೆ ಪಂದ್ಯ ಮುಗಿಯಿತು.
ಕ್ವಾರ್ಟರ್ ಫೈನಲ್ ಗೆ ಬಾಲರಾಜ್ ಪನ್ವಾರ್
ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ರೋವರ್ ಬಾಲರಾಜ್ ಪನ್ವಾರ್ ಅವರು ಪುರುಷರ ಸಿಂಗಲ್ಸ್ ಸ್ಕಲ್ಸ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ರವಿವಾರ ನಡೆದ ರಿಪಚೇಜ್ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಾಲರಾಜ್ ಎರಡನೇ ಸ್ಥಾನಿಯಾಗಿ ಮೂಡಿಬಂದರು. 7.12.41 ಸೆಕೆಂಡ್ ನಲ್ಲಿ ಬಾಲರಾಜ್ ಗುರಿ ತಲುಪಿದರು. ಮೊದಲ ಸ್ಥಾನಿಯಾದ ಮೊನಾಕೊದ ಕ್ವಿಂಟನ್ 7.10.00 ಸೆಕೆಂಡ್ ನಲ್ಲಿ ಗುರಿ ತಲುಪಿದರು.
ಶನಿವಾರದಂದು ಅವರ ಹೀಟ್‌ನಲ್ಲಿ ಆರಂಭದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು, ಅಲ್ಲಿ ಅಗ್ರ ಮೂರು ರೋವರ್ ಗಳು ಮಾತ್ರ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿದ್ದರು, ಉಳಿದವರು ಮತ್ತೊಂದು ಅವಕಾಶಕ್ಕಾಗಿ ರಿಪಚೇಜ್‌ನಲ್ಲಿ ಸ್ಪರ್ಧಿಸಬೇಕಿತ್ತು. ಬಾಲರಾಜ್ ಭಾನುವಾರ ತಮ್ಮ ಪ್ರದರ್ಶನದೊಂದಿಗೆ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ ನಾಲ್ಕನೇ ಭಾರತೀಯ ರೋವರ್ ಆದರು.
ಮೊದಲ ಪಂದ್ಯ ಗೆದ್ದ ಶ್ರೀಜಾ ಅಕುಲಾ
ಭಾರತದ ಯುವ ಟೇಬಲ್ ಟೆನ್ನಿಸ್ ಆಟಗಾರ್ತಿ ಶ್ರೀಜಾ ಅಕುಲಾ ಅವರು ಮೊದಲ ಪಂದ್ಯದಲ್ಲಿ ಸುಲಭವಾಗಿ ಗೆದ್ದರು. ಸ್ವಿಜರ್ ಲ್ಯಾಂಡ್ ನ ಕ್ರಿಸ್ಟಿನಾ ಕಲ್ ಬರ್ಗ್ ವಿರುದ್ದ 11-4, 11-9, 11-7,11-8 ನೇರ ಸೆಟ್ ಗಳ ಅಂತರದಿಂದ ಗೆದ್ದು ಮುಂದಿನ ಸುತ್ತು ತಲುಪಿದರು.