Advertisement

ಹೈನುಗಾರಿಕೆಗೆ ಸಾಲ ನೀಡಲು ಯೋಜನೆ ಜಾರಿ

06:26 PM Jun 09, 2022 | Team Udayavani |

ರಾಮನಗರ: ಹೈನುಗಾರಿಕೆ ನಡೆಸಿ ಜೀವನ ನಡೆಸಬೇಕೆಂಬ ಇಚ್ಛಾಶಕ್ತಿ ಹೊಂದಿರುವ ಕುಟುಂಬಗಳಿಗೆ ಕೆಎಂಎಫ್‌ ಜೊತೆಗೂಡಿ ಬ್ಯಾಂಕ್‌ಗಳು ಸಾಲ ನೀಡುವ ಯೋಜನೆ ರೂಪಿಸಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯೂನಿಯನ್‌ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಲೀಡ್‌ ಬ್ಯಾಂಕ್‌ ಆಯೋಜಿಸಿದ್ದ ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮನಗರ ಜಿಲ್ಲೆಯು ರೇಷ್ಮೆ ಮತ್ತು ಹೈನುಗಾರಿಕೆಗೆ ಖ್ಯಾತಿ ಪಡೆದಿದೆ. ಈ ಕ್ಷೇತ್ರದಲ್ಲಿಯೆ ಹೆಚ್ಚಿನ ರೈತರು ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಇತ್ತೀಚಿಗೆ ಕೆಎಂಎಫ್‌ ಸಹಯೋಗದಲ್ಲಿ ಹೈನುಗಾರಿಕೆಗೆ ಸಾಲ ನೀಡುವ ಹೊಸ ಯೋಜನೆ ಅನುಷ್ಠಾನದಲ್ಲಿದೆ.

ಕುಟುಂಬವೊಂದಕ್ಕೆ ಎರಡು ಹಸುಗಳ ಖರೀದಿಗೆ ಸಾಲ ನೀಡಲಾಗುತ್ತದೆ. ಸಾಲ ಪಡೆದು ಹಸು ಖರೀದಿ ಮಾಡಿ ಹೈನುಗಾರಿಕೆ ನಡೆಸುವ ರೈತರು ಹಾಲನ್ನು ಕೆಎಂಎಫ್‌ಗೆ ನೀಡಬೇಕಾಗುತ್ತದೆ. ಮಾಸಾಂತ್ಯದಲ್ಲಿ ರೈತರಿಗೆ ನೀಡಬೇಕಾದ ಹಣದಲ್ಲಿ ಹಸುಗಳಿಗಾಗಿ ಪಡೆದ ಸಾಲದ ಕಂತನ್ನು ಕೆಎಂಎಫ್‌ ನವರು ಬ್ಯಾಂಕ್‌ನವರಿಗೆ ಪಾವತಿಸಿ, ಉಳಿದ ಹಣವನ್ನು ರೈತರಿಗೆ ನೀಡುತ್ತಾರೆ. ಜಿಲ್ಲೆಯ ಜನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್‌ ಬೆಳವಣಿಗೆಗೆ ಸಹಕರಿಸಿ: ಸಾಲ ಪಡೆದವರು ಬ್ಯಾಂಕ್‌ಗಳಿಗೆ ನಿಯಮಿತವಾಗಿ ಸಾಲ ಮರುಪಾವತಿ ಮಾಡದಿದ್ದರೆ, ಸುಸ್ಥಿದಾರರಾದ ಸಾಲಗಾರರಿಗೆ ಬ್ಯಾಂಕ್‌ಗಳು ಮರಳಿ ಸಾಲ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಇವರು ಹೆಚ್ಚು ಬಡ್ಡಿ ಪಡೆಯುವ ಖಾಸಗಿಯವರ ಹತ್ತಿರ ಸಾಲ ಪಡೆದು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಬ್ಯಾಂಕ್‌ಗಳಲ್ಲಿ ಸಾಕಷ್ಟು ಹಣ ಇದೆ. ಜನ ಸಾಮಾನ್ಯರು, ರೈತರು ಮತ್ತು ವಾಣಿಜ್ಯೋದ್ಯಮಿಗಳು ಉದ್ಯಮ ವಿಸ್ತರಣೆಗೆ ಬೇಕಾದ ಸಾಲವನ್ನು ಬ್ಯಾಂಕ್‌ಗಳಿಂದ ಪಡೆಯಬಹುದಾಗಿದೆ. ರೈತರು ಕೃಷಿ ಚಟುವಟಿಕೆಗಳಿಗೆ, ಮನೆ ಕಟ್ಟಲು, ವಾಹನ ಖರೀದಿಸುವುದು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಆದರೆ, ಪಡೆದ ಸಾಲವನ್ನು ನಿಯಮಿತವಾಗಿ ಬ್ಯಾಂಕ್‌ಗೆ ಮರುಪಾವತಿಸಿ ತಾವು ಬೆಳೆಯುವುದರ ಜೊತೆಗೆ ಬ್ಯಾಂಕ್‌ಗಳ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.

Advertisement

ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಎಸ್‌ ಎಲ್‌ಬಿಸಿಯ ಸಹಾಯಕ ಮ್ಯಾನೇಜರ್‌ ಎಂ.ಪಿ.ಪ್ರವೀಣ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಸುವರ್ಣ ಸಂಭ್ರಮದಲ್ಲಿ ಆಜಾದಿಕಾ ಅಮೃತ್‌ ಮಹೋತ್ಸವ ಕಾರ್ಯಕ್ರಮ ವನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಸರ್ಕಾರಿ  ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ಇಲಾಖೆಗಳಿಗೂ ಸೂಚಿಸಿದ್ದು, ಇದರನ್ವಯ ಬ್ಯಾಂಕ್‌ಗಳ ಮೂಲಕ ಸಾರ್ವಜನಿಕರಿಗೆ ಸಿಗುವ
ಸೌಲಭ್ಯಗಳನ್ನು ತಿಳಿಸುವ ಹಾಗೂ ಬ್ಯಾಂಕ್‌ಗಳ ಮೂಲಕ ಸೌಲಭ್ಯ ಪಡೆದು ಆರ್ಥಿಕವಾಗಿ ಮುಂದುವರಿದಿರುವ ಫಲಾನುಭವಿಗಳನ್ನು ಸಭೆಗೆ ಕರೆತಂದು ಅವರ ಮೂಲಕ ಇತರರಿಗೆ ತಿಳಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಉಮೇಶ್‌, ಡಿಐಸಿ ಡೆಪ್ಯೂಟಿ ಡೈರಕ್ಟೆರ್‌ ದೊರೈರಾಜ್‌, ಪ್ರಶಾಂತ್‌ ಪ್ರಭು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next