Advertisement

ರಾಜ್ಯದ ಎಲ್ಲಾ ಜಿಲ್ಲೆ ಮಕ್ಕಳಿಗೂ ಮೊಟ್ಟೆ, ಬಾಳೇಹಣ್ಣು

08:12 AM Jul 17, 2022 | Team Udayavani |

ಬೆಂಗಳೂರು: ಪ್ರಸ್ತುತ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ಎಲ್ಲ ಶಾಲೆಗಳಿಗೂ ವಿಸ್ತರಿಸಲು ಶಿಕ್ಷಣ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿದೆ.

Advertisement

ರಾಜ್ಯದ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ವರ್ಷದಲ್ಲಿ 100 ದಿನ ಬಿಸಿಯೂಟದ ಜತೆ ಬೇಯಿಸಿದ ಮೊಟ್ಟೆ ವಿತರಿಸಲು, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಲು ಅನುಮತಿ ಕೋರಿ ಶಿಕ್ಷಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ 350 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಗೆ ಒಪ್ಪಿಗೆ ಕೋರಲಾಗಿತ್ತು. ಆದರೆ, ಆರ್ಥಿಕ ಇಲಾಖೆಯು ಎಲ್ಲ ಶಾಲೆಗಳಲ್ಲೂ ಮೊಟ್ಟೆ ವಿತರಿಸಲು ಒಪ್ಪಿದ್ದು, 100 ದಿನಗಳ ಬದಲು 46 ದಿನಗಳಿಗೆ ಮಾತ್ರ ಅನುಮತಿ ನೀಡಿದೆ. ಇದರಿಂದ ವಾರ್ಷಿಕ 125 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

2021-22ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷನ್‌ ಶಕ್ತಿ ನಿರ್ಮಾಣ್‌ ಯೋಜನೆಯಡಿ ರಾಜ್ಯದಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿರುವ ಕಲ್ಯಾಣ ಕರ್ನಾಟಕ ಭಾಗದ ಬೀದರ್‌, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮೊಟ್ಟೆ ವಿತರಿಸಲಾಗಿತ್ತು. ಬಳಿಕ ಅದನ್ನು 2022-23ನೇ ಸಾಲಿನಲ್ಲೂ ಅದೇ ಜಿಲ್ಲೆಗಳಲ್ಲಿ ಯೋಜನೆ ಮುಂದುವರೆಸಲಾಗಿತ್ತು. ಇದೀಗ ರಾಜ್ಯಾದ್ಯಂತ ಮೊಟ್ಟೆ ಯೋಜನೆ ವಿಸ್ತರಿಸಲು ಸರ್ಕಾರ ಒಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next