Advertisement

ಕನ್ನಡ ತಮಿಳು ಶಾಲೆಗಳನ್ನು ಮುಚ್ಚಲು ಹುನ್ನಾರ

12:33 PM Feb 24, 2021 | Team Udayavani |

ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಡ್ಡರದೊಡ್ಡಿಯಲ್ಲಿರುವ ಸೇಂಟ್‌ ಮೇರಿಸ್‌ ತಮಿಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಹಾಗೂ ಸೇಂಟ್‌ ಚಾರ್ಲ್ಸ್‌ ಗ್ರಾಮಾಂತರ ಪ್ರೌಢಶಾಲೆಯಲ್ಲಿ 8ನೇ ತರಗತಿ ಮುಚ್ಚದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಕರ್ನಾಟಕ ತಮಿಳು ಶಾಲೆ ಮತ್ತು ಮಹಾವಿದ್ಯಾಲಯ ಶಿಕ್ಷಕರ ಸಂಘ ಅಧ್ಯಕ್ಷ ಎ.ಧನಂಜಯನ್‌ ಒತ್ತಾಯಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನೂರು ತಾಲೂಕಿನ ವಡ್ಡರದೊಡ್ಡಿಯಲ್ಲಿ ಮೈಸೂರು ದಿ ಡೈಯೋಸಿಸಸ್‌ ಎಜುಕೇಶನ್‌ ಸೊಸೈಟಿ ಕಳೆದ 25 ವರ್ಷಗಳಿಂದ ಸೇಂಟ್‌ ಮೇರಿಸ್‌ ತಮಿಳುಹಿರಿಯ ಪ್ರಾಥಮಿಕ ಶಾಲೆ ನಡೆಸುತ್ತಿದ್ದು, ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಾದ ನಮ್ಮ ಮಕ್ಕಳಿಗೆ ಮಾತೃ ಭಾಷೆಯಾದ ತಮಿಳು ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದು, ಇದರಿಂದ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಪಡೆದು ತಮ್ಮ ಜೀವ  ನೋಪಾಯ ಕಂಡುಕೊಂಡಿದ್ದಾರೆ. ಆದರೆ, ಈ ಶಾಲೆಯ ಆಡಳಿತ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿನಿಂದ 6 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದೇ ವಿದ್ಯಾರ್ಥಿಗಳಿಗೆ ಒತ್ತಾಯ  ಪೂರ್ವಕವಾಗಿ ವರ್ಗಾವಣೆ ಪತ್ರವನ್ನು ನೀಡಿ ಶಾಲೆ ಯನ್ನು ಮುಚ್ಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

6ನೇ ತರಗತಿಗೆ ಸೇರ್ಪಡೆಯಾಗಲು ಬರುವ ವಿದ್ಯಾರ್ಥಿ ಗಳಿಗೆ ಇದುವರೆಗೆ 3 ಸಾವಿರ ರೂ.ಗಳನ್ನು ವಾರ್ಷಿಕವಾಗಿ ಶುಲ್ಕವಾಗಿ ಪಡೆಯುತ್ತಿತ್ತು. ಈಗ ಏಕಾಏಕಿ 9,037 ರೂ.ಗೆ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದರು.

ದಂಧೆ: ಅದೇ ರೀತಿಯಲ್ಲಿ 8ನೇ ತರಗತಿಗೆ ಸೇರ್ಪಡೆಯಾಗಲು ಮುಂದೆ ಬರುವ ವಿದ್ಯಾರ್ಥಿಗಳಿಗೆ ಇದುವರೆಗೆ ವಾರ್ಷಿಕ ಶುಲ್ಕವಾಗಿ 6 ಸಾವಿರ ರೂ. ಪಡೆಯಲಾಗುತ್ತಿತ್ತು. ಈಗ ಒಮ್ಮೆಗೇ 44,250 ರೂ.ಗೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿಲ್ಲ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಆಡಳಿತ ಮಂಡಳಿಯ ಹಣ ಮಾಡುವ ದಂಧೆಯಾಗಿದೆ. ತಮಿಳು ಭಾಷೆಯನ್ನು ಮಾತೃಭಾಷೆಯನ್ನಾಗಿಸಿ ಕೊಂಡಿರುವ ವಡ್ಡರದೊಡ್ಡಿ ಗ್ರಾಮದ ವಿದ್ಯಾರ್ಥಿ ಗಳಿಗೆ ಕನ್ನಡ ಮಾಧ್ಯಮದಲ್ಲಿ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ದೂರಿದರು.

ಮಾತೃಭಾಷೆ ಶಿಕ್ಷಣ: ಈ ಶಾಲೆಗಳು ಮುಚ್ಚಿ ಹೋದರೆ ವಡ್ಡರದೊಡ್ಡಿ ಗ್ರಾಮದ ನೂರಾರು ವಿದ್ಯಾರ್ಥಿಗಳು 6 ಕಿ.ಮೀ. ದೂರದಲ್ಲಿರುವ ಮಾರ್ಟಳ್ಳಿ ಗ್ರಾಮದಲ್ಲಿರುವಆಂಗ್ಲ ಮಾಧ್ಯಮ ಶಾಲೆಗೆ ಹೋಗಬೇಕಾಗುತ್ತದೆ. ಇದರಿಂದ ತಮಿಳು ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತ ರಾಗಬೇಕಾಗುತ್ತದೆ. ಆದ್ದರಿಂದ ಗ್ರಾಮದಲ್ಲಿ ಈ ಹಿಂದೆ ಪಡೆಯುತ್ತಿದ್ದಂತೆ ಶುಲ್ಕ ತೆಗೆದುಕೊಳ್ಳಬೇಕು. ಜೊತೆಗೆ ಶಾಲೆಯನ್ನು ಗ್ರಾಮದಲ್ಲಿಯೇ ಮುಂದುವರಿಯಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಈಗಾಗಲೇ ಡಿಡಿಪಿಐ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

ಪ್ರತಿಭಟನೆ ಎಚ್ಚರಿಕೆ: ಯಾವುದೇ ಕಾರಣಕ್ಕೂ ಈ ಶಾಲೆಗಳನ್ನು ಮುಚ್ಚಿಹೋಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟಬೇಕೆಂದು ಧನಂ ಜಯನ್‌ ಒತ್ತಾಯಿಸಿದರು. ಒಂದು ವೇಳೆ ಶಾಲೆಮುಚ್ಚಿದರೆ ಮಕ್ಕಳೊಂದಿಗೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಚ್ಚರಿಸಿದರು.

ಕಾವೇರಿ ನೀರಿನ ಸಂಪರ್ಕ ಕಲ್ಪಿಸಿ: ಕರ್ನಾಟಕ ತಮಿಳು ಕಳಗಂ ಪ್ರಧಾನ ಕಾರ್ಯದರ್ಶಿ ಅರ್ಪುದ ರಾಜ್‌ ಮಾತನಾಡಿ, ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳಿಗೆ ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಯಿಂದ ವ್ಯವಸಾಯ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡುವ ಮೂಲಕಈ ಭಾಗದಲ್ಲಿ ಅಂತರ್ಜಲ ವೃದ್ಧಿ, ಕೃಷಿಕರು, ಜನತೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯ ಪಾಲ್‌ರಾಜ್‌, ದೇವಸಗಾಯಂ, ವಡ್ಡರದೊಡ್ಡಿಯ ಪಾಲ್‌ರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next