Advertisement

ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ

09:31 PM Jun 24, 2019 | Lakshmi GovindaRaj |

ಹೊಳೆನರಸೀಪುರ: ಇನ್ನು ಮುಂದೆ ಪ್ರತಿ ಸೋಮವಾರ ತಾಲೂಕು ಕಚೇರಿಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದಡೆ ಸೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಸವಲತ್ತು ವಿತರಣೆ ಮಾಡಿ ಮಾತನಾಡಿದರು.

Advertisement

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಜನತೆ ತಮಗೆ ದೊರಕರಬೇಕಾದ ಸವಲತ್ತುಗಳಿಗೆ ಇಲಾಖೆಯಿಂದ ಇಲಾಖೆಗೆ ಎಡೆತಾಡುವುದನ್ನು ತಪ್ಪಿಸುವ ಸಲುವಾಗಿ ಇನ್ನು ಮುಂದೆ ಪ್ರತಿ ಸೋಮವಾರ ಎಲ್ಲ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಒಂದಡೆ ಸೇರಿ ಸಾರ್ವಜನಿಕರಿಗೆ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳು ಸುಲಲಿತವಾಗಿ ದೊರೆಯುವಂತೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಎಂದರು.

ಕುಡಿಯುವ ನೀರು ಸರಬರಾಜು ಯೋಜನೆ: ಪುರಸಭೆ ಪಟ್ಟಣದ ನಿವಾಸಿಗಳಿಗೆ ದಿನದ 24 ಗಂಟೆ ನಿರಂತರವಾಗಿ ನೀರು ನೀಡುವ ಉದ್ದೇಶದಿಂದ ಪಟ್ಟಣದ ಹೊರಭಾಗದಲ್ಲಿ 62 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಸದ್ಯದಲ್ಲೆ ಅನುಷ್ಠಾನಗೊಳ್ಳಲಿದೆ. ಇದರಿಂದ ಪಟ್ಟಣದ ನಾಗರಿಕರು ದಿನದ 24 ಗಂಟೆಗಳು ಸಹ ಕುಡಿಯುವ ನೀರು ಪಡೆಯವಂತ ಯೋಜನೆ ಇದಾಗಿದೆ ಎಂದರು.

ಬಸ್‌ ನಿಲ್ದಾಣ ಪುನರ್‌ ನವೀಕರಣ: ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣದ ನವೀಕರಣಕ್ಕೆ 6 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಅದರ ಕಾಮಗಾರಿ ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದೆಂದರು.

ಫ‌ಲಾನುಭವಿಗಳ ವಿವರ: ಪುರಸಭೆ ವತಿಯಿಂದ 16 ಫಲಾನುಭವಿಗಳಿಗೆ ವಾಹನ ಚಾಲನಾ ಪರವಾನಗಿ, ತಾಲೂಕು ಪಂಚಾಯಿತ ವತಿಯಿಂದ 22 ಸ್ವಸಹಾಯ ಸಂಘಗಳಿಗೆ ಚೆಕ್‌, ಪಶುಸಂಗೋಪನಾ ಇಲಾಖೆಯಿಂದ 49 ಮಿನಿ ಕಿಟ್‌, ಮುಖ್ಯ ಮಂತ್ರಿ ಪರಿಹಾರ ನಿಧಿಯಡಿ 4 ಮಂದಿಗೆ ಚೆಕ್‌, 94ಸಿಗೆ ಸಂಬಂಧಿಸಿದ 50 ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ 153 ವೃದ್ಧಾಪ್ಯ ವೇತನ ಮಂಜೂರಾತಿ ಪತ್ರಗಳನ್ನು ನೀಡಿದರು.

Advertisement

ಅಭಿವೃದ್ಧಿ ಕಾರ್ಯಕ್ಕೆ ಪ್ರಶಂಸೆ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ತಾವು ಅನೇಕ ಕಡೆ ಕರ್ತವ್ಯ ನಿರ್ವಹಿಸಿ ಬಂದಿದ್ದೇನೆ.ಆದರೆ ಸಚಿವ ರೇವಣ್ಣ ಅವರು ತಾಲೂಕಿನ ಅಭಿವೃದ್ಧಿಗಾಗಿ ದಿನದ 24 ಗಂಟೆ ಯೋಚನೆ ಮಾಡಿ ಅಭಿವೃದ್ಧಿಯ ಪಥದತ್ತಾ ಸಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು. ತಾವು ತಹಶೀಲ್ದಾರ್‌ ಅಗಿ ಕರ್ತವ್ಯಕ್ಕೆ ಬಂದ ಮೇಲೆ ತಾವು ಸಹ ಗ್ರಾಮೀಣ ಪ್ರದೇಶದ ವಸತಿ ಶಾಲೆಗಳಲ್ಲಿ ನೀಡುವ ಬಿಸಿಯೂಟದ ಗುಣಮಟ್ಟವನ್ನು ಪರೀಕ್ಷಿಸಿದ್ದೇನೆ. ಮಕ್ಕಳಿಗೆ ಗುಣಮಟ್ಟದ ಊಟ ನೀಡಲು ಸಚಿವ ರೇವಣ್ಣ ಅವರೇ ಕಾರಣ ಎಂದರು.

ಆಧಾರ್‌ ನೋಂದಣಿಗೆ ತ್ವರಿತಗತಿಗೆ ಕ್ರಮ: ಕಳೆದ ಕೆಲವು ತಿಂಗಳುಗಳಿಂದ ನೆನಗುದಿಗೆ ಬಿದ್ದಿದ್ದ ಆಧಾರ್‌ ನೋಂದಣಿ ಸಮಸ್ಯೆಗೆ ಇದೀಗ ಪರಿಹಾರ ದೊರೆತು ಹಳ್ಳಿ ಮೈಸೂರು ಮತ್ತು ಹಳೇಕೋಟೆ ನಾಡಕಚೇರಿಯಲ್ಲಿ ದಿನವಹಿ ತಲಾ 30 ಮಂದಿ ನೋಂದಣಿ ನಡೆಯುತ್ತಿದೆ. ಉಳಿದಂತೆ ಪಟ್ಟಣದಲ್ಲಿನ ಆಧಾರ್‌ ನೋಂದಣಿ ಕೇಂದ್ರದಲ್ಲಿನ ಸಿಬ್ಬಂದಿಗಳನ್ನು ಬದಲಿಸಿ ನೂತನ ಸಿಬ್ಬಂದಿಯನ್ನು ನೇಮಕ ಮಾಡಿ ಇಲ್ಲಿಯೂ ಸಹ ನೋಂದಣಿಯನ್ನು ತ್ವರಗಿಗೊಳಿಸಲು ಇನ್ನೇರಡು ದಿನಗಳಲ್ಲಿ ಚಾಲನೆ ನೀಡಲಾಗುವುದೆಂದರು.

ವೃದ್ಧಾಪ್ಯ ವೇತನ ಸಮಸ್ಯೆ 15 ದಿನಗಳಲ್ಲಿ ಪರಿಹಾರ: ಕಳೆದ ಡಿಸೆಂಬರ್‌ ನಿಂದ ಇಲ್ಲಿಯವರೆಗೆ ವೃದ್ಧಾಪ್ಯ ವೇತನದ ಹಣ ವಿತರಣೆಯಾಗದಿರಲು ಚುನಾವಣೆ ಮತ್ತಿತರೆ ಕಾರಣಗಳು ಇದೆ, ಆದರೆ ಇನ್ನು 15 ದಿನಗಳಲ್ಲಿ ವೃದ್ಧಾಪ್ಯ ವೇತನದ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ. ಅಲ್ಲಿಯವವರೆಗೆ ಯಾರೊಬ್ಬರೂ ತಾಲೂಕು ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದು ತಂತಮ್ಮ ಇಲಾಖೆಯ ಪಲಾನುಭವಿಗಳಿಗೆ ಪತ್ರ ವಿತರಣೆಯಲ್ಲಿ ಸಹಕರಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಇಒ ಕೆ.ಯೋಗೇಶ್‌, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು ಮತ್ತಿತರರು ಇದ್ದರು. ಬಿಇಒ ಲೋಕೇಶ್‌ ಸ್ವಾಗತಿಸಿದರು. ಶಿಕ್ಷಕ ಶಿವಕುಮಾರಾಚಾರಿ ಅವರಿಂದ ಪ್ರಾರ್ಥನೆ ನಡೆಯಿತು.

ಜಿಲ್ಲಾ ಮಟ್ಟದಲ್ಲಿ ಗ್ರಾಮ ವಾಸ್ತವ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದಂತೆ ಜಿಲ್ಲೆಯಲ್ಲಿಯೂ ವಾಸ್ತವ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ಸಿದ್ಧಪಡಿಸುತ್ತಿದ್ದು ಅದನ್ನು ಜಿಲ್ಲೆಯ ಎಲ್ಲ ಶಾಸಕರು ಒಂದಡೆ ಸೇರಿ ಗ್ರಾಮವಾಸ್ತವ್ಯದ ಯೋಜನೆ ಸಿದ್ಧಗೊಳಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಸದ್ಯದಲ್ಲೇ ಶಾಸಕರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಪ್ರತಿ ಸೋಮವಾರ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಕ್ಷೇತ್ರದ ತಾಲೂಕು ಕಚೇರಿಯಲ್ಲಿ ಖುದ್ದಾಗಿ ಹಾಜರಿದ್ದು ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದೆಂದು ತಿಳಿಸಿ ಗ್ರಾಮ ವಾಸ್ತವದ ಬಗ್ಗೆ ಮಾತನಾಡಿ, ಬೇಲೂರು ತಾಲೂಕಿನಿಂದ ಆರಂಭಿಸುವುದು ಸೂಕ್ತವೆಂದು ಸಚಿವ ರೇವಣ್ಣ ಅಭಿಪ್ರಾಯಪಟ್ಟರು.

ಫ‌ಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ: ತಾಲೂಕಿನಲ್ಲಿ ವೃದ್ಧಾಪ್ಯವೇತನ ಇನ್ನಿತರೆ ವೇತನದಿಂದ ಸಾಕಷ್ಟು ಮಂದಿ ವಂಚಿತರಾಗಿದ್ದಾರೆ. ಆದ್ದರಿಂದ ತಾಲೂಕು ಕಚೇರಿ ಸಿಬ್ಬಂದಿಗೆ ಒಂದು ತಿಂಗಳು ಅವಕಾಶ ನೀಡಿ ಅಷ್ಟರೊಳಗೆ ಗ್ರಾಮೀಣ ಪ್ರದೇಶಗಳಲ್ಲಿನ ವೃದ್ಧರು ತಮಗೆ ವೃದ್ಧಾಪ್ಯ ವೇತನೆ ತನಗೆ ದೊರೆತಿಲ್ಲ ಎಂಬ ದೂರು ಬಾರದಂತೆ ಎಲ್ಲರಿಗೂ ಸವಲತ್ತು ದೊರಕಿಸಿಕೊಡುವಲ್ಲಿ ಸಿಬ್ಬಂದಿ ತ್ವರಿತಗತಿಯಿಂದ ಫಲಾನುಭವಿಗಳನ್ನು ಗುರುತಿಸಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅನುಷ್ಠಾನಕ್ಕೆ ತರಲು ತಹಶೀಲ್ದಾರ್‌ ಮುಂದಾಗಬೇಕೆಂದು ಸಚಿವ ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next