Advertisement

ಹೆಬ್ಟಾಳ್ಕರ್‌ ಎತ್ತಂಗಡಿಗೆ ಕೈ ಪಾಳಯದಲ್ಲಿ ಪ್ಲ್ಯಾನ್‌

11:33 AM Oct 15, 2017 | Team Udayavani |

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ರಾಜ್ಯ ಕಾಂಗ್ರೆಸ್‌ನಲ್ಲಿ ತೆರೆ ಮರೆಯ ಕಸರತ್ತು ನಡೆಯುತ್ತಿವೆ.

Advertisement

ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಬೆನ್ನಲ್ಲೇ ಲಕ್ಷ್ಮೀ ಹೆಬ್ಟಾಳ್ಕರ್  ಅವರನ್ನು ಬದಲಾಯಿಸಬೇಕೆಂಬ
ಕೂಗು ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಲಕ್ಷ್ಮೀ ಹೆಬ್ಟಾಳ್ಕರ್‌ 2018ರ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಚುನಾವಣೆ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಆಗುವುದಿಲ್ಲವೆಂಬ ಕಾರಣಕ್ಕೆ ಅವರನ್ನು ಬದಲಾಯಿಸುವ ಆಲೋಚನೆ ನಡೆದಿದೆ ಎನ್ನಲಾಗಿದೆ.

ಅವರ ಸ್ಥಾನಕ್ಕೆ ಕೆಪಿಸಿಸಿ ಕಾರ್ಯದರ್ಶಿ ಗಳಾಗಿರುವ ಡಾ. ನಾಗಲಕ್ಷ್ಮೀ ಹಾಗೂ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಡಾ. ಪುಷ್ಪ ಅಮರನಾಥ್‌ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.

ಲಕ್ಷ್ಮೀ ಹೆಬ್ಟಾಳ್ಕರ್‌ 2015ರ ಮೇ 13ರಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಎರಡೂವರೆ
ವರ್ಷದಲ್ಲಿ ಅವರು ಬೆಂಗಳೂರಿಗಿಂತ ಬೆಳಗಾವಿಯಲ್ಲಿಯೇ ಹೆಚ್ಚು ಸಮಯ ಕಳೆದಿದ್ದಾರೆ. ರಾಜ್ಯಾಧ್ಯಕ್ಷರಾಗಿ ರಾಜಧಾನಿಯಲ್ಲಿ
ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿಲ್ಲವೆಂಬ ಆರೋಪವೂ ಅವರ ಮೇಲಿದೆ.

Advertisement

ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿಯೂ ಅವರು ಪಕ್ಷದಲ್ಲಿ ನಾಯಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದಾರೆ
ಎನ್ನುವುದು ಅವರ ವಿರೋಧಿಗಳ ವಾದ.ಇತ್ತೀಚೆಗೆ ಮಹಾರಾಷ್ಟ್ರಕ್ಕೆ ಜೈ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದೂ ಪಕ್ಷಕ್ಕೆ ಇರಿಸು ಮುರಿಸು ಮಾಡಿದ್ದಾರೆ ಎನ್ನುವ ಕಾರಣಕ್ಕೆ ವಿರೋಧಿಸುವವರ ಧ್ವನಿಯೂ ಬಲವಾಗಿ ಕೇಳುತ್ತಿದೆ.

ಪ್ರಮುಖವಾಗಿ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರ ಸ್ಥಾನ ಬದಲಾದಾಗ ಈ ರೀತಿಯ ರಾಜ್ಯಾಧ್ಯಕ್ಷರ ಬದಲಾವಣೆಗಳು
ಸಾಧ್ಯ ಎನ್ನಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದ ಶೋಭಾ ಓಝಾ ಅವರ
ಬದಲಿಗೆ ಸುಷ್ಮಿತಾ ದೇವ್‌ ಮಹಿಳಾ ಘಟಕದ ಅಧ್ಯಕ್ಷರಾಗಿದ್ದು, ಲಕ್ಷ್ಮೀ ಹೆಬ್ಟಾಳ್ಕರ್‌ ಅವರಿಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಹೊಂದಾಣಿಕೆ ಕೊರತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲಕ್ಷ್ಮೀ ಹೆಬ್ಟಾಳ್ಕರ್‌ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರ ಬೆಂಬಲ ಇದೆ ಎನ್ನಲಾಗಿದೆ. ಹೀಗಾಗಿ ಅವರಬದಲಾವಣೆ ಅಷ್ಟು ಸುಲಭವಲ್ಲ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಆದರೆ, ಇವರಿಗೆ ಪರ್ಯಾಯವಾಗಿ ಕೇಳಿ ಬರುತ್ತಿರುವ ಇಬ್ಬರು ಮಹಿಳಾ ನಾಯಕಿಯರ ಬೆನ್ನಿಗೂ ಪ್ರಬಲ ನಾಯಕರ ಬೆಂಬಲವಿದೆ.

ಡಾ. ನಾಗಲಕ್ಷ್ಮೀ ಹೆಚ್ಚು ಓದಿಕೊಂಡಿದ್ದು ಮತ್ತು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಹೊಂದಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದ್ದು, ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರ ಆಶೀರ್ವಾದವಿದೆ ಎನ್ನಲಾಗಿದೆ. ಅದೇ ರೀತಿ ಡಾ. ಪುಷ್ಪಾ ಅಮರನಾಥ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಕೃಪೆ ಇದೆ ಎನ್ನಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next