ಹೊಸದಿಲ್ಲಿ: ಇನ್ನು ರೈಲುಗಳಲ್ಲಿ ಪ್ರಯಾಣಿಸುವವರು ತಾವು ಐಆರ್‌ಸಿಟಿಸಿಯಲ್ಲಿ ಆರ್ಡರ್ ಮಾಡುವ ಖಾದ್ಯಗಳ ತಯಾರಿಯನ್ನು ಕುಳಿತಲ್ಲಿಂದಲೇ ವೀಕ್ಷಿಸಬಹುದು! ಇಂಥದ್ದೊಂದು ಅತ್ಯಾಧುನಿಕ ವ್ಯವಸ್ಥೆಯನ್ನು ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಸೋಮವಾರ ಲೋಕಾರ್ಪಣೆಗೊಳಿಸಿದರು. ಇದೊಂದು ಜಾಲತಾಣ ವ್ಯವಸ್ಥೆಯಾಗಿದ್ದು, ರೈಲ್ ದೃಷ್ಟಿ’ ಎಂಬ ಜಾಲ ತಾಣದ ಡ್ಯಾಶ್‌ಬೋರ್ಡ್‌ನಲ್ಲಿ ಇಂಥ ಮಾಹಿತಿಯನ್ನು ಪಡೆಯುವ ಅವಕಾಶವಿದೆ. ವಿವಿಧ ರೈಲುಗಳ ಸಂಚಾರ, ಆಗಮನ, ನಿರ್ಗ ಮನ, ಆದಾಯ, ರೈಲು ನಿಲ್ದಾಣ ಗಳ ಮಾಹಿತಿ ಹಾಗೂ ಟಿಕೆಟ್‌ಗಳ ಲಭ್ಯತೆಯ ಮಾಹಿತಿ ಇದರಲ್ಲಿ ಸಿಗಲಿದೆ. ಜತೆಗೆ, ಜಾಲತಾಣದಲ್ಲಿ ಟಿಕೆಟ್‌ಗಳ ಮಾರಾಟ, ದಿನ, ತಿಂಗಳು, ವರ್ಷದ ಅವಧಿಯಲ್ಲಿ ರೈಲ್ವೇ ಇಲಾಖೆ ಗಳಿಸಿದ ಆದಾಯ ಗಳ ಮಾಹಿತಿ ಪಡೆಯಬಹುದು. ರೈಲ್ವೇ ಇಲಾಖೆಯಲ್ಲಿ ಸದ್ಯಕ್ಕೆ ನಡೆಯುತ್ತಿರುವ 41 ಯೋಜನೆಗಳ ಪ್ರಗತಿಯನ್ನು ನೋಡಬಹುದಾಗಿದೆ. ಇದೆಲ್ಲದರ ಜತೆಗೆ, ಸಾರ್ವಜನಿಕರು ರೈಲ್ವೇ ಬಗೆಗಿನ ತಮ್ಮ ದೂರುಗಳನ್ನು ಈ ಜಾಲತಾಣದಲ್ಲಿ ಹಾಕಬಹುದಾಗಿದೆ.