Advertisement

ಪಿತ್ರೋಡಿ-ಜಾರುಕುದ್ರು ಸೇತುವೆ, ರಸ್ತೆಗೆ ಶಿಲಾನ್ಯಾಸ

03:18 PM May 24, 2017 | Team Udayavani |

ಕಾಪು: ಗಾಂಧಿ ಪಥ – ಗ್ರಾಮ ಪಥ ಯೋಜನೆ(ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆ)ಯಡಿ ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಿತ್ರೋಡಿ – ಜಾರುಕುದ್ರುವಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜಾರುಕುದ್ರು ಸೇತುವೆ ಮತ್ತು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ಕಾಪು ಶಾಸಕ ವಿನಯಕುಮಾರ್‌ ಸೊರಕೆ ಮಂಗಳವಾರ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರ ಬಹುಕಾಲದ ಬೇಡಿಕೆಯಾಗಿದ್ದ ಪಿತ್ರೋಡಿ ಜಾರುಕುದ್ರುವಿಗೆ ಸಂಪರ್ಕ ಸೇತುವೆ ರಚಿಸುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದು, ಅದನ್ನು ಇಂದು ಕಾರ್ಯಗತಗೊಳಿಸಿದ ಸಂತೃಪ್ತಿಯಿದೆ. ಶೀಘ್ರವೇ ಇಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.

ಪ್ರವಾಸೋದ್ಯಮ ಕೇಂದ್ರ
ಪಿತ್ರೋಡಿ – ಜಾರುಕುದ್ರುವಿನಲ್ಲಿ 10 ಕೋಟಿ ರೂ. ಯೋಜನಾ ವೆಚ್ಚದಲ್ಲಿ210 ಮೀ. ಉದ್ದದ ಸೇತುವೆ ಮತ್ತು 510 ಮೀ. ರಸ್ತೆ ನಿರ್ಮಾಣಗೊಳ್ಳಲಿದ್ದು, ಸೇತುವೆ ನಿರ್ಮಾಣಗೊಂಡ ಬಳಿಕ ಜಾರುಕುದ್ರು ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದರು.

ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಡಿ ರಾಜ್ಯದಲ್ಲೇ ಗರಿಷ್ಠ 47 ಕೋಟಿ ರೂ. ಅನುದಾನ ಕಾಪು ಕ್ಷೇತ್ರಕ್ಕೆ ಮಂಜೂರಾಗಿದ್ದು, ಎಲ್ಲ ಕಾಮಗಾರಿಗಳೂ ಪ್ರಾರಂಭಗೊಳ್ಳಲಿವೆ. ಕೇಂದ್ರ ರಸ್ತೆ ನಿಧಿಯಿಂದ 49 ಕೋಟಿ ರೂ. ಅನುದಾನ ಮಂಜೂರಾಗಿದ್ದು, ತನ್ನ ಶಾಸಕತ್ವದ ಅವಧಿಯಲ್ಲಿ ಕಾಪು ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಪರಿವರ್ತನೆಗೊಳ್ಳಲಿದೆ ಎಂದರು.

ಉದ್ಘಾಟನೆ, ಶಿಲಾನ್ಯಾಸ
ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಶಾಸಕ ವಿನಯ ಕುಮಾರ್‌ ಸೊರಕೆ ಅವರ ಅನುದಾನ ದಿಂದ ಮಂಜೂರಾದ ಸುಮಾರು 10 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ವಿನಯ ಕುಮಾರ್‌ ಸೊರಕೆ ನೆರವೇರಿಸಿದರು.

Advertisement

ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್‌, ಉಪಾಧ್ಯಕ್ಷ ರಿಯಾಝ್, ಸದಸ್ಯರಾದ ಗಿರೀಶ್‌ ಸುವರ್ಣ, ಗ್ಲಾಡಿಸ್‌ ಮೆಂಡೊನ್ಸಾ, ರಾಜೀವಿ, ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ, ಮಾಜಿ ಜಿ.ಪಂ. ಸದಸ್ಯ ವಾಮನ ಬಂಗೇರ, ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಕುಮಾರ್‌, ಪಿಎಂಜಿಎಸ್‌ವೈ ಯೋಜನಾ ವಿಭಾಗದ ಅಭಿಯಂತ ಸತೀಶ್‌ ಕುಮಾರ್‌, ಉದ್ಯಾವರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಮಾನಂದ ಪುರಾಣಿಕ್‌ ಉಪಸ್ಥಿತರಿದ್ದರು.ಬಹುಕಾಲದ ಬೇಡಿಕೆ ಈಡೇರಿಸಿದ ಸೊರಕೆಯವರನ್ನು ಹಿರಿಯರಾದ ಸಂಜೀವ ಪೂಜಾರಿ ಗೌರವಿಸಿದರು.ಉದ್ಯಾವರ ನಾಗೇಶ್‌ ಕುಮಾರ್‌ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಲಾರೆನ್ಸ್‌ ಡೇಸಾ ವಂದಿಸಿದರು. ಆಬಿದ್‌ ಆಲಿ ಕಾರ್ಯಕ್ರಮ ನಿರ್ವಹಿಸಿದರು.

ಉದಯವಾಣಿ ವರದಿ ಸಹಕಾರಿ
ಉದ್ಯಾವರ ಜಾರುಕುದ್ರು ನಿವಾಸಿಗಳ ಬವಣೆಯ ಬಗ್ಗೆ ಉದಯವಾಣಿ ಪತ್ರಿಕೆಯು ಈ ಹಿಂದೆ ವಿಶೇಷ ವರದಿಗಳನ್ನು ಪ್ರಕಟಿಸಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಈ ಬಗ್ಗೆ ತನ್ನ ಭಾಷಣದಲ್ಲೂ ಉಲ್ಲೇಖ ಮಾಡಿದ ಶಾಸಕ ವಿನಯಕುಮಾರ್‌ ಸೊರಕೆ ಜಾರುಕುದ್ರು ನಿವಾಸಿಗಳ ಸೇತುವೆ ಮತ್ತು ರಸ್ತೆ ನಿರ್ಮಾಣದ ಬೇಡಿಕೆ ಈಡೇರುವಲ್ಲಿ ಉದಯವಾಣಿಯ ಪಾತ್ರವೂ ಮಹತ್ವದ್ದಾಗಿದೆ; ಪತ್ರಿಕೆಯ ಜನಪರ ಕಾಳಜಿ ಶ್ಲಾಘನೀಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next