ಪಿರಿಯಾಪಟ್ಟಣ : ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳ ಅಭಿವೃದ್ಧಿಗಾಗಿ ನಗರೋತ್ತಾನ ಯೋಜನೆಯಡಿ 17 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು.
ಪುರಸಭೆಯ ವ್ಯಾಪ್ತಿಯ ಮೆಲ್ಲಹಳ್ಳಿ, ಅಬ್ಬೂರು ಕೆ.ಎಂ.ಬಡಾವಣೆ, ಬಸವೇಶ್ವರ ವೃತ್ತದಲ್ಲಿ ಪೌಂಟೇನ್ ನಿರ್ಮಾಣ ಪುರಸಭೆ ಆವರಣದಲ್ಲಿ ಹಾಗೂ ಸಂತೆಮಾಳದಲ್ಲಿ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗಾಗಿ ನಗರೋತ್ತಾನ ಯೋಜನೆಯಡಿ 4 ಹಂತಗಳಲ್ಲಿ ರೂ.17ಕೋಟಿ ಹಣ ಮಂಜೂರಾಗಿದ್ದು, ಈ ವ್ಯಾಪ್ತಿಯಲ್ಲಿರುವ ವಾರ್ಡ್ ಗಳಿಗೆ ರಸ್ತೆ, ಚರಂಡಿ, ಬೀದಿದೀಪ, ಕುಡಿಯುವ ನೀರಿ ಸೌಲಭ್ಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಸರ್ವ ಸದಸ್ಯರ ಸಹಕಾರದಿಂದ 3.5 ವರ್ಷದಲ್ಲಿ 20 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಕೆಲಸಗಳನ್ನು ನಡೆಸಲಾಗಿದ್ದು ಮಂದೆಯೂ ಹೆಚ್ಚಿನ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು. ಬೇಸಿಗೆಯಲ್ಲಿ ಪುರಸಭಾ ವ್ಯಾಪದ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಾರದೆಂಬ ಉದ್ದೇಶದಿಂದ ಸರ್ವ ಸದಸ್ಯರ ತುರ್ತು ಸಭೆ ಕರೆದು ಹೊಸ ಕೊಳವೆ ಬಾವಿ, ಹ್ಯಾಂಡ್ಪಂಪ್, ಪೈಪ್ಲೈನ್ ಸೇರಿದಂತೆ ನಾನಾ ಯೋಜನೆಗಳನ್ನು ರೂಪಿಸಲಾಗಿದೆ. ಸಾರ್ವಜನಿಕರು ಈಗಿನಿಂದಲೇ ನೀರನ್ನು ಮಿತವಾಗಿ ಬಳಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಇದನ್ನೂ ಓದಿ : ಯಲಹಂಕ: 16ರ ಬಾಲಕಿಯ ಗ್ಯಾಂಗ್ ರೇಪ್, ಬ್ಲ್ಯಾಕ್‌ಮೇಲ್; 7 ಜನರ ಬಂಧನ
ದೂರುಗಳ ಸರಮಾಲೆ:
ಶಾಸಕ ಕೆ.ಮಹದೇವ್ ಪುರಸಭಾ ವ್ಯಾಪ್ತಿಯ ಕೆ.ಎಂ.ಬಡಾವಣೆಗೆ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯರು ಕುಡಿಯುವ ನೀರು, ರಸ್ತೆ, ವಿದ್ಯುತ್ ಕಂಬಗಳ ಅವೈಜ್ಞಾನಿಕ ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಸಭೆ ಮುಖ್ಯಾಧಿಕಾರಿ ಎ.ಟಿ.ಪ್ರಸನ್ನ, ಹಂಗಾಮಿ ಅಧ್ಯಕ್ಷೆ ನಾಗರತ್ನ, ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ್, ಸದಸ್ಯರಾದ ಶ್ಯಾಂ, ಮಂಜುನಾಥ್, ಪುಷ್ಪಲತಾ, ಭಾರತಿ, ರವಿ, ಸುವರ್ಣಮ್ಮ, ಎಇಇ ವನಿತಾ, ಆರೋಗ್ಯ ನಿರೀಕ್ಷಕರಾದ ಪ್ರದೀಪ್ ಕುಮಾರ್, ಆದರ್ಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಉಮೇಶ್, ರವಿ, ಪಿ.ಪಿ.ಮಹದೇವ್, ಮಹಮದ್ ಗೌಸ್, ವಿಜಯಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.