ಹರಿಹರ: ಇಲ್ಲಿನ ತುಂಗಭದ್ರಾ ಹಳೆ ಸೇತುವೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ನೀರು ಸರಬರಾಜು ಪೈಪ್‌ಲೈನ್‌ಗಳು ಶತಮಾನ ಕಂಡ ಸೇತುವೆಗೆ ಉರುಳಾಗಿ ಪರಿಣಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
25 ವರ್ಷಗಳ ಹಿಂದೆ ಸೇತುವೆಯ ಒಂದು ಬದಿಗೆ ಎರಡನೇ ಹಂತದ ಕುಡಿಯುವ ನೀರು ಯೋಜನೆ ಪೈಪ್‌ಲೈನ್ ಅಳವಡಿಸಲಾಯಿತು. ಈಗ ಇನ್ನೊಂದು ಬದಿಗೆ 24 ಗಂಟೆ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆ ಪೈಪ್‌ಲೈನ್ ಹಾಕಲಾಗಿದೆ. ಮಳೆ ನೀರು ಹರಿದು ಹೋಗಲು ರೂಪಿಸಿದ್ದ ಸೇತುವೆಯ ಎರಡೂಬದಿಯಲ್ಲಿ ರೂಪಿಸಿದ್ದ ಕಿಂಡಿಗಳ ಮೇಲೆ ಪೈಪ್ ಲೈನ್ ಬಂದಿರುವುದರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿಲ್ಲ. ಸೇತುವೆ ಮೇಲೆ ಬೀಳುವ ಕಸ-ಕಡ್ಡಿ ಕಿಂಡಿಗಳಲ್ಲಿ ಅಡ್ಡ ನಿಂತು ಕಟ್ಟಿಕೊಂಡಿವೆ. ಅಲ್ಲದೆ ಹಳೆ ಪೈಪ್‌ಲೈನ್ ಕೆಳಗೆ ಬೆಳೆದಿರುವಂತೆ ಹೊಸ ಪೈಪ್‌ಲೈನ್ ಕೆಳಗೂ ಗಿಡ-ಗಂಟಿಗಳು ಬೆಳೆಯುತ್ತಿವೆ. ಇದರ ಪರಿಣಾಮವಾಗಿ ಮಳೆ ನೀರು ಕೆಳಗೆ ಸಾಗದೆ ಸೇತುವೆ ಮೇಲೆ ನಿಲ್ಲುವಂತಾಗಿದೆ.
ಶಿಥಿಲಾವಸ್ಥೆಯತ್ತ ಸೇತುವೆ: ಮಳೆ ನೀರು ಹರಿದು ಮುಂದೆ ಹೋಗದೆ ಅಲ್ಲಿಯೇ ನಿಲ್ಲುವುದರಿಂದ ಸೇತುವೆಯ ಭದ್ರತೆಗೆ ತೀವ್ರ ಧಕ್ಕೆ ಉಂಟಾಗುತ್ತದೆ. ಸೇತುವೆ ಹಳೆಯದಾಗಿರುವುರಿಂದ ಅದರ ಮೇಲೆ ಯಮ ಭಾರದ ಪೈಪ್ ಅಳವಡಿಸಿರುವುದುಅವೈಜ್ಞಾನಿಕವಾಗಿದೆ. ಅದರಲ್ಲೂ ಕಿಂಡಿಗಳುಸಹ ಬಂದ್ ಆಗಿ ಮಳೆ ನೀರು ನಿಂತರೆ ಭಾರಹೆಚ್ಚಾಗುವುದಲ್ಲದೆ ಇನ್ನೂ ಹತ್ತಾರು ವರ್ಷ ಬಾಳಿಕೆ ಬರುವ ಸೇತುವೆ ಬಹು ಬೇಗ ಶಿಥಿಲಾವಸ್ತೆ ತಲುಪುವ ಅಪಾಯ ಎದುರಾಗಿದೆ.
ಹಳೆ ಪೈಪ್‌ಲೈನ್ ಕೆಳಗಿನ ಸ್ವಚ್ಛತೆ ಜವಾಬ್ದಾರಿ ನಗರಸಭೆಯದು. ಜಲಸಿರಿ ಪೈಪ್‌ಲೈನ್ ಕೆಳಗಿನ ಸ್ವಚ್ಛತಾ ಕಾರ್ಯ ಕೆಯುಐಡಿಎಫ್‌ಸಿಗೆ ಸಂಬಂಧಿಸಿದ್ದಾಗಿದೆ. ಆದರೆ ಸ್ವಚ್ಛತೆ ವಿಷಯ ತಮಗೆ ಸಂಬಂಧಿಸಿದ್ದೇ ಅಲ್ಲ ಎಂದು ನಿರ್ಲಕ್ಷ್ಯ ತಾಳಿರುವುದು ಸೇತುವೆಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಅನಾಹುತಕ್ಕೆ ಆಹ್ವಾನ: ಭಾರ ತಾಳಲಾರದೆ, ನಿರ್ವಹಣೆ ಇಲ್ಲದೆ ಸೇತುವೆ ಬಿದ್ದರೆ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈಗಲೂ ಈ ಸೇತುವೆ ಮೇಲೆ ಲಘು ವಾಹನ, ಜನ ಸಂಚಾರವಿದೆ. ಜನರ ಪ್ರಾಣಕ್ಕೆ ತೊಂದರೆಯಾಗುವ ಜೊತೆಗೆ ನಗರದ ಜನತೆ ಕುಡಿಯುವ ನೀರಿಲ್ಲದೆ ಬಸವಳಿಯಬೇಕಾಗುತ್ತದೆ. ಸೇತುವೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಇಲಾಖೆ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ನಾವು ನಗರಸಭೆಹಾಗೂ ಕೆಯುಐಡಿಎಫ್‌ಸಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಜಲಸಿರಿಯವರು, ನಗರಸಭೆ ಯವರೂ ನಿರ್ವಹಣೆಗೆ ಮುಂದಾಗುತ್ತಿಲ್ಲ. ಒಟ್ಟಾರೆ ಸೇತುವೆಯ ಆಕ್ರಂದನವನ್ನು ಕೇಳುವವರೇ ಇಲ್ಲದಂತಾಗಿದೆ.
ಸೇತುವೆ ಅಕ್ಕ ಪಕ್ಕ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾರ್ಯದೊತ್ತಡ ದಿಂದ ಇನ್ನೂ ಕೆಲಸ ಮಾಡಿಲ್ಲ. ಹಾಗಾಗಿ ಮತ್ತೂಮ್ಮೆ ಅವರಿಗೆ ಸೂಚನೆ ನೀಡುತ್ತೇವೆ.
-ದೇವರಾಜ್, ಎಇ, ಕೆಯುಐಡಿಎಫ್‌ಸಿ
-ಬಿ.ಎಂ. ಸಿದ್ಧಲಿಂಗಸ್ವಾಮಿ