ಉಪ್ಪಿನಂಗಡಿ: ಪುತ್ತೂರು- ಕೋಡಿಂಬಾಡಿ ಹೆದ್ದಾರಿಯ ಕೋಡಿಂಬಾಡಿ ಬಳಿ ಹೆದ್ದಾರಿ ಅಗಲೀಕರಣ ಹಾಗೂ ಡಾಮರೀಕರಣ ಕಾಮಗಾರಿ ಇನ್ನೂ ಅಪೂರ್ಣ ಹಂತದಲ್ಲಿದ್ದು, ಪಲ್ಲತ್ತಾರು ಎಂಬಲ್ಲಿ ಈಗಾಗಲೇ ರಸ್ತೆ ಕುಸಿದಿದ್ದು, ಪುತ್ತೂರು ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಕೋಡಿಂಬಾಡಿಯಲ್ಲಿ 900 ಮೀಟರ್ ಪುತ್ತೂರು – ಉಪ್ಪಿನಂಗಡಿ ಹೆದ್ದಾರಿಯ ಅಗಲೀಕ ರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ 1.77 ಲಕ್ಷ ರೂ. ಟೆಂಡರ್ ಪ್ರಕ್ರಿಯೆ ನಡೆದಿತ್ತು. ಡಾಮರು, ರಸ್ತೆ ವಿಸ್ತರಣೆ ಸೇರಿದಂತೆ ಭಾಗಶಃ ಕಾಮಗಾರಿ ಈಗಾಗಲೇ ಮುಗಿಸಲಾಗಿದೆ. ಇನ್ನು ಕೆಲವು ಕಾಮಗಾರಿಗಳು ನಡೆಯಬೇಕಿದೆ. ಆದರೆ ಡಾಮರು ಕಾಮಗಾರಿ ನಡೆದು ಒಂದೆರಡು ತಿಂಗಳಿನಲ್ಲಿಯೇ ಈ ರಸ್ತೆ ಕುಸಿಯಲು ಆರಂಭವಾಗಿದೆ. ಕೆಲ ದಿನಗಳ ಹಿಂದೆ ಬಾರಿಕೆ ಎಂಬಲ್ಲಿ ಕೂಡ ರಸ್ತೆ ಕುಸಿದಿತ್ತು. ಪಲ್ಲತ್ತಾರುವಿನ ರಸ್ತೆ ಕುಸಿದ ಪರಿಣಾಮ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗೆ ಹಾನಿಯಾಗಿದ್ದು, ನೀರು ಸರಬರಾಜು ಸ್ಥಗಿತಗೊಂಡಿದೆ.
ನೀರು ಸರಬರಾಜಿನಲ್ಲಿ ವ್ಯತ್ಯಯ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುತ್ತೂರು ನಗರ ಸಭೆಯ ಕುಡಿಯುವ ನೀರು ಸರಬರಾಜಿನ ಉಸ್ತುವಾರಿ ವಸಂತ್, ಪಲ್ಲತ್ತಾರಿ ನಲ್ಲಿ ರಸ್ತೆ ಕುಸಿತದಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನಿಗೆ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದು, ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಕೂಡಾ ಪೈಪ್ ಲೈನ್‌ನ ದುರಸ್ತಿ ಕಾರ್ಯ ನಡೆಯಲಿದ್ದು, ಆವರೆಗೆ ಪುತ್ತೂರು ನಗರಸಭಾ ವ್ಯಾಪ್ತಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದರು.
ಈ ಮೊದಲು ಐದೂವರೆ ಮೀಟರ್‌ನಷ್ಟಿದ್ದ ರಸ್ತೆಯನ್ನು ಇದೀಗ ಏಳೂವರೆ ಮೀಟರ್ ಅಗಲಗೊಳಿಸಲಾಗಿದ್ದು, ಕೆಲವು ಕಡೆ ರಸ್ತೆಯ ಬದಿ ಗದ್ದೆ, ತೋಟಗಳಿದ್ದುದರಿಂದ ಇಲ್ಲಿ ಅಗಲಗೊಳಿಸುವ ಸಂದರ್ಭ ಮಣ್ಣು ಹಾಕಿ ರಸ್ತೆಯನ್ನು ಎತ್ತರಿಸಲಾಗಿದೆ. ಪಲ್ಲತ್ತಾರುವಿನಲ್ಲಿ ರಸ್ತೆಯ ಬದಿ ಗದ್ದೆ ಇದ್ದಿದ್ದರಿಂದ ಸುಮಾರು 15 ಫೀಟ್‌ನಷ್ಟು ಮಣ್ಣು ಹಾಕಿ ಎತ್ತರಿಸಿ, ಅದಕ್ಕೆ ಡಾಮರು ಕಾಮಗಾರಿ ನಡೆಸಲಾಗಿತ್ತು. ಆದರೆ ಹಾಕಿದ ಮಣ್ಣನ್ನು ಹೈಡ್ರೋಲಿಕ್ ರೋಲಿಂಗ್ ಬಳಸಿ ಸರಿಯಾಗಿ ಕುಳ್ಳಿರಿಸದಿದ್ದ ಕಾರಣ ಮಳೆಗಾಲದಲ್ಲಿ ರಸ್ತೆ ಕುಸಿತಕ್ಕೆ ಕಾರಣವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಪುತ್ತೂರು ನಗರಸಭಾ ವ್ಯಾಪ್ತಿಗೆ 34ನೇ ನೆಕ್ಕಿಲಾಡಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ.
ಈ ಮೊದಲು ರಸ್ತೆಯ ಬದಿಯಲ್ಲಿ ನೀರು ಸರಬರಾಜಿನ ಮುಖ್ಯ ಪೈಪ್‌ಗ್ಳು ಹಾದು ಹೋಗುತ್ತಿದ್ದವು. ಆದರೆ, ಇದೀಗ ರಸ್ತೆಯನ್ನು ಅಗಲಗೊಳಿಸಿದ್ದರಿಂದ ರಸ್ತೆಯಲ್ಲೇ ಪೈಪ್ ಹಾದು ಹೋಗುತ್ತಿದ್ದು, ಕೆಲವು ಕಡೆ ಇದರ ಮೇಲೆಯೇ ಡಾಮರು ಕಾಮಗಾರಿ ಕೂಡಾ ನಡೆಸಲಾಗಿದೆ. ಈ ಪೈಪ್‌ಲೈನ್ 1984ರಲ್ಲಿ ಹಾಕಿರುವ ಪೈಪ್‌ಲೈನ್ ಆದ್ದರಿಂದ ಇದೀಗ ಈ ಕಬ್ಬಿಣದ ಪೈಪ್‌ಗ್ಳು ಕ್ಷಮತೆ ಕಳೆದುಕೊಂಡಿದ್ದು, ವಾಹನ ಸಂಚಾರದ ಸಂದರ್ಭ ಒತ್ತಡ ಬಿದ್ದಾಗ ಹಾನಿಗೀಡಾಗುತ್ತಿವೆ. ಪಲ್ಲತ್ತಾರುವಿನಲ್ಲಿ ಕೂಡಾ ಇದೇ ರೀತಿ ಪೈಪ್ ಲೈನ್‌ಗೆ ಹಾನಿಯಾಗಿದೆ. ಈ ಕಾಮಗಾರಿಯು ಇನ್ನೂ ಅಪೂರ್ಣ ಹಂತದಲ್ಲಿದ್ದು, ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಕೋಡಿಂಬಾಡಿ ಪೇಟೆಯಲ್ಲೇ ಇನ್ನೂ ಚರಂಡಿ ಕಾಮಗಾರಿಯಾಗಲೀ, ಫುಟ್‌ಪಾತ್ ನಿರ್ಮಾಣ ಕಾಮಗಾರಿಯೂ ಆಗಿಲ್ಲ. ಚರಂಡಿ ಕಾಮಗಾರಿ ಆಗದಿರುವುದರಿಂದ ಈಗ ಮಾರ್ಗದ ಮೇಲೆಯೇ ನೀರು ಹರಿದು ಹೋಗುವಂತಾಗಿದೆ.