ವಾಷಿಂಗ್ಟನ್: ಅದು ನಗರದ ಪಾಲಿಕೆಯೊಂದರ ಸಭೆ… ಅಲ್ಲಿ ಚರ್ಚೆಯಾಗುತ್ತಿದುದು ನಗರದಲ್ಲಿನ ಸಮಸ್ಯೆಗಳು… ಆದರೆ, ಅಲ್ಲಾಗಿದ್ದೇ ಬೇರೆ, ಭಾರತ ಮೂಲದ ಜೋಡಿ ಯೊಂದರ ಪ್ರೇಮ ನಿವೇದನೆ, ಮತ್ತದಕ್ಕೆ ಒಪ್ಪಿಗೆ…ಹೌದು, ಅಮೆರಿಕದ ಚಾರ್ಲೋಟ್ ನಗರದ ಕೌನ್ಸಿಲ್ ಸಭೆಯಲ್ಲಿ ಸದಾ ನೆನಪಿನಲ್ಲಿ ಉಳಿಯುವ ಘಟನೆ ನಡೆದಿದೆ. ಈ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ವಿಶೇಷ ಆಹ್ವಾನಿತರಾಗಿ ಬಂದಿದ್ದ ವೈಭವ್ ಬಜಾಜ್, ಮಾತು ಮುಗಿಸುವ ವೇಳೆ ಪಾಲಿಕೆ ಸದಸ್ಯೆ ಡಿಂಪಲ್ ಅಜ್ಮೇರಾ ಅವರನ್ನು ಮದುವೆಯಾಗುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲ, ಸಭೆಯ ವೇದಿಕೆಯಲ್ಲಿದ್ದ ಡಿಂಪಲ್ ಬಳಿಗೆ ಬಂದು ಮಂಡಿ ಯೂರಿ ಪ್ರಪೋಸ್ ಕೂಡ ಮಾಡಿದ್ದಾರೆ. ಈ ಕೂಡಲೇ ವೈಭವ್ ಅವರ ಪ್ರಪೋಸ್ ಅನ್ನು ಅಜ್ಮೇರಾ ಅವರು ಸ್ವೀಕರಿಸಿದ್ದು, ಮದುವೆಗೆ ಒಪ್ಪಿಗೆಯನ್ನೂ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ನಲ್ಲಿ ಇಂಥ ಪ್ರಸ್ತಾಪಗಳಿಗೆ ಯಾರಾದರೂ ವಿರೋಧಿಸುವುದುಂಟೇ? ನಾನಂತೂ ಇದನ್ನು ಒಪ್ಪಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.