ಪಣಜಿ: ’ಸಂಪೂರ್ಣವಾಗಿ ಇದು ಹೊಸ ಅನುಭವ. ನನ್ನ ಬದುಕಿನಲ್ಲಿ ನಿರೀಕ್ಷಿಸಲಾಗದ್ದು. ನಿಜಕ್ಕೂ ಚಿತ್ರದಲ್ಲಿನ ಅಭಿನಯದ ಅನುಭವ ಹೊಸ ಜಗತ್ತನ್ನು ಪರಿಚಯಿಸಿದೆ’.
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಕನ್ನಡದ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?‘ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಗುಂಜಾಲಮ್ಮರ ಮುಕ್ತವಾದ ಅಭಿಪ್ರಾಯ.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ಮನಸ್ಸಿನ ಭಾವನೆಯನ್ನು ಬಿಚ್ಚಿಟ್ಟ ಅವರು, ಇಲ್ಲಿಗೆ (ಗೋವಾ) ಬಂದದ್ದೂ ಹೊಸತು. ಮೊದ ಮೊದಲು ಬಹಳ ಭಯವಾಯಿತು. ಆದರೆ ಎಲ್ಲರ ಸಹಕಾರದಿಂದ (ದೀಪಕ್ ಮತ್ತಿತರರೆಲ್ಲರೂ) ನನ್ನ ಭಯ ಹೋಯಿತು. ನಾನು ನಟಿಸಿದ ಸಿನಿಮಾವನ್ನು ಕಂಡ ಹಲವರು ಬಂದು ಕೈ ಕುಲುಕಿ ಅಭಿನಂದಿಸಿದರು. ಕೆಲವರು ಫೋಟೋ ತೆಗೆಸಿಕೊಂಡರು. ಇವೆಲ್ಲವೂ ನನ್ನ ಬದುಕಿನಲ್ಲಿ ನಿರೀಕ್ಷಿಸದ ಸಂಗತಿ. ಚಿತ್ರದಲ್ಲಿನ ಅಭಿನಯ ಅದನ್ನು ಸಾಧ್ಯವಾಗಿಸಿದೆ’ ಎಂದರು.
ಇದನ್ನೂ ಓದಿ:ರಿಷಭ್ ಶೆಟ್ರ ಬೆಲ್ ಬಾಟಂ-2 ಗೆ ತಾನ್ಯಾ ಹೋಪ್ ನಾಯಕಿ!
ನಾನಿದ್ದದ್ದು ಜೋಪಡಿಗಳಲ್ಲಿ. ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದಾಗ ಹಲವರು ಬೇಡ, ನಿರಾಕರಿಸುವಂತೆ ಹೇಳಿದರು. ಕಾರಣ, ನಾವು ಸಾಕಷ್ಟು ಓದು-ಬರೆದವರಲ್ಲ. ಹಾಗಾಗುತ್ತೆ, ಹೀಗಾಗುತ್ತೆ ಎಂದೆಲ್ಲಾ ಭಯ ಪಡಿಸಿದ್ದರು. ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೂ ಭಯಮಿಶ್ರಿತ ನೆಲೆಯಲ್ಲಿ ಒಪ್ಪಿಕೊಂಡಿದ್ದೆ. ಈಗ ಬಹಳ ಖುಷಿಯಾಗಿದೆ. ನಿಮಗೆಲ್ಲರಿಗೂ ನಮಸ್ಕಾರಗಳು’ ಎಂದು ಕೈ ಮುಗಿದರು.
ಸಂಪೂರ್ಣ ಸತ್ಯಕಥೆಯಲ್ಲ
ನನ್ನ ನಿರ್ದೇಶನದ ಚಿತ್ರ ಪ್ರದರ್ಶನದ ಮೇಲೆ ಹಲವರು, ಇದು ಸಂಪೂರ್ಣ ಸತ್ಯಕಥೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಇದು ಸಂಪೂರ್ಣ ಸತ್ಯಕಥೆಯಲ್ಲ; ಆದರೆ ಕಥೆಯ ಎಳೆ ಸತ್ಯಕಥೆಯದ್ದು. ಅದನ್ನು ಆಧರಿಸಿ ಇಂದಿನ ಸಂದರ್ಭಕ್ಕೆ ಹೋಲುವಂತೆ ಒಂದಿಷ್ಟು ಕಥಾ ಹಂದರವನ್ನು ಹೆಣೆದಿದ್ದೇವೆ. ಹಾಗೆ ಸೇರಿಸುವಾಗ ಪ್ರತಿ ಹಂತದಲ್ಲೂ ಅಧ್ಯಯನ ಮಾಡಿ, ಕಥೆಗೆ ಪೂರಕವಾದುದ್ದನ್ನು ಮಾತ್ರ ಸೇರಿಸಲಾಗಿದೆ ಎಂದು ವಿವರಿಸಿದವರು ಪೃಥ್ವಿ ಕೊಣನೂರು.
ಈ ಚಿತ್ರದಲ್ಲಿ ಹಲವಾರು ಮಂದಿ ನಟಿಸಿರುವುದು ಇದೇ ಮೊದಲು ಎಂದು ಹೇಳಿದ ಅವರು, ನಿಮ್ಮ ರಾಜ್ಯದಲ್ಲಿ ಹೇಗೆ ಪ್ರತಿಕ್ರಿಯೆ ಇದೆ ಎಂಬ ಪ್ರಶ್ನೆಗೆ, ‘ಇದಿನ್ನೂ ಬಹಳ ಮಂದಿ ನೋಡಿಲ್ಲ. ಬುಸಾನ್ ಉತ್ಸವದಲ್ಲಿ ಇದು ಪ್ರೀಮಿಯರ್ ಆಗಿತ್ತು. ಆ ಬಳಿಕ ಕೆಲವು ಚಿತ್ರೋತ್ಸವಗಳಲ್ಲಿ ಭಾಗವಹಿಸಿದೆ. ಇನ್ನಷ್ಟು ಮಂದಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು ಪೃಥ್ವಿ.
ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ
ಚಿತ್ರೋತ್ಸವದಲ್ಲಿ ಎಲ್ಲರೂ ಚೆನ್ನಾಗಿದೆ ಎಂದೇ ಖುಷಿಯಾಗಿ ಮಾತನಾಡುತ್ತಾರೆ. ಹಾಗಾಗಿ ನಾನು ಚಿತ್ರೋತ್ಸವದಲ್ಲಿನ ಅಭಿಪ್ರಾಯವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಿನಿಮಾ ಮಂದಿರದಲ್ಲಿ ಬಿಡುಗಡೆಯಾಗಿ, ಜನರು ಹೆಚ್ಚು ಬಂದು ನೋಡುವುದು ಮುಖ್ಯ. ಅಲ್ಲಿ ಸಿಗುವ ಅಭಿಪ್ರಾಯ ಮುಖ್ಯ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ಗೋವಾ ಚಿತ್ರೋತ್ಸವ: ಭಾರತೀಯ ಪನೋರಮಾಕ್ಕೆ ಚಾಲನೆ; ‘ಪಿಂಕಿ ಎಲ್ಲಿ’ ಪ್ರದರ್ಶನ
ಈ ಚಿತ್ರದಲ್ಲಿ ವೃತ್ತಿಪರ ನಟರು ಹಾಗೂ ನಟರಲ್ಲದವರನ್ನು ಬಳಸಿಕೊಂಡಿದ್ದೀರಿ. ಯಾಕೆ ನಟರಲ್ಲದವರನ್ನೇ ಸಂಪೂರ್ಣವಾಗಿ ಬಳಸಲಿಲ್ಲ? ಆ ಪ್ರಯೋಗ ಕಷ್ಟವೆಂದೇ ಎಂಬ ಪ್ರಶ್ನೆಗೆ, ಹಾಗೇನೂ ಅಲ್ಲ. ಚಿತ್ರದ ಬಜೆಟ್ ಸಹ ಕೆಲವು ಅಂಶಗಳನ್ನು ನಿರ್ಧರಿಸುತ್ತದೆ. ದೀಪಕ್, ರಾಮಚಂದ್ರ ಹಾಗೂ ಅಕ್ಷತಾ ಪಾಂಡವಪುರ ಹೊರತುಪಡಿಸಿ ಬಹುತೇಕರು ಹೊಸಬರು. ವೃತ್ತಿಪರ ನಟರು ಅದಕ್ಕೆಂದೇ ತಮ್ಮನ್ನು ನಿಯೋಜಿಸಿಕೊಂಡಿರುತ್ತಾರೆ. ಉಳಿದವರು (ನಟರಲ್ಲದವರು, ಹವ್ಯಾಸಿ ನಟರು) ಬೇರೆ ವೃತ್ತಿಯಲ್ಲಿರುತ್ತಾರೆ. ಅದರಿಂದ ಒಂದಿಷ್ಟು ದಿನ ಬಿಡುವು ಮಾಡಿಕೊಂಡು ನಟನೆಗೆ ಬರುವವರು ಅಪರೂಪ. ಈ ಚಿತ್ರಕ್ಕೂ ಆ ದಿಸೆಯಲ್ಲೂ ಹುಡುಕಿದ್ದೆವು, ಆಡಿಷನ್ ಮಾಡಿದ್ದೆವು. ನಮಗೆ ಸೂಕ್ತ ಎನಿಸಿದವರು ಕಡಿಮೆ’ ಎಂದು ತಮ್ಮ ಅನುಭವ ಹಂಚಿಕೊಂಡರು ಪೃಥ್ವಿ.
ನಿಮ್ಮ ರೈಲ್ವೆ ಚಿಲ್ಡ್ರನ್ ಚಿತ್ರದಲ್ಲೂ ಅಂತ್ಯದಲ್ಲಿ ಮಕ್ಕಳ ಬಗೆಗಿನ ಸಂದೇಶವನ್ನು ಕೊಡಲು ಪ್ರಯತ್ನಿಸುತ್ತೀರಿ, ಈ ಚಿತ್ರದಲ್ಲೂ ಮಕ್ಕಳ ಹಕ್ಕುಗಳ ಕುರಿತು ಪ್ರಸ್ತಾಪಿಸಿದ್ದೀರಿ, ಇದು ಕಥೆಗೆ ಪೂರಕವೆಂದು ನಿಮಗೆ ಅನಿಸುತ್ತದೆಯೇ? ಎಂಬ ಮತ್ತೊಂದು ಪ್ರಶ್ನೆಗೆ, ರೈಲ್ವೆ ಚಿಲ್ಡ್ರನ್ ನಲ್ಲಿ ಕಥೆಯ ಎಳೆ ಸಿಕ್ಕಿದ್ದೇ ಸಾಥಿ ಎಂಬ ಸೇವಾಸಂಸ್ಥೆಯಿಂದ. ಅದನ್ನು ಪ್ರಸ್ತಾಪಿಸುವುದು ಸೂಕ್ತವೆನಿಸಿತ್ತು. ಈ ಚಿತ್ರದಲ್ಲೂ ಎಳೆ ಬೆಳೆದ ಹಾಗೆ ಒಂದು ಸೂಕ್ತ ಅಂತ್ಯ ಬೇಕು ಎನಿಸಿತ್ತು. ಬೇರೆ ಬೇರೆ ಆಯ್ಕೆಗಳನ್ನು ನೋಡಿದಾಗ ಇದೇ ಸೂಕ್ತ ಎನಿಸಿತು. ಆದಕಾರಣ ಇದನ್ನು ಹೊಂದಿಸಿದ್ದೇವೆ ಎಂಬುದು ಅವರ ಉತ್ತರ.
ಈ ಚಿತ್ರ ತೃಪ್ತಿ ತಂದಿದೆಯೇ ಎಂದು ಕೇಳಿದ್ದಕ್ಕೆ, ಇಲ್ಲ. ಆಸ್ಕರ್ ಸಿಕ್ಕರೂ ತೃಪ್ತಿ ಎನ್ನುವುದು ಸಿಕ್ಕದು. ಎಲ್ಲರ ಚಿತ್ರಗಳಲ್ಲೂ ತಪ್ಪುಗಳು ಎಂಬುದು ಇದ್ದೇ ಇರುತ್ತದೆ, ಕೊರತೆ ಎಂಬುದು ಇದ್ದೇ ಇರುತ್ತದೆ. ನಾನು ಯಾವುದೇ ಕೊರತೆಯಿಲ್ಲದ ಪರಿಪೂರ್ಣ ಚಿತ್ರ ಮಾಡಿದ್ದೇನೆ ಎಂದು ಯಾರಾದರೂ ಹೇಳಿದರೆ ಅದು ದೊಡ್ಡ ಸುಳ್ಳು. ನನ್ನ ಮೊದಲ ಚಿತ್ರದಲ್ಲೂ ತಪ್ಪುಗಳಾಗಿದ್ದವು, ಇದರಲ್ಲೂ ತಪ್ಪುಗಳಿವೆ, ತಪ್ಪುಗಳಾಗುತ್ತವೆ. ಅದರಿಂದಲೇ ಕಲಿಯುತ್ತಾ ಹೋಗುತ್ತೇವೆ ಎಂದದ್ದು ಪೃಥ್ವಿ.
ಚಿತ್ರದಲ್ಲಿ ನಟಿಸಿದ್ದ ಮತ್ತೊಬ್ಬ ನಟ ದೀಪಕ್ ಸುಬ್ರಹ್ಮಣ್ಯ, ‘ನಟರಲ್ಲದವರ ಜತೆಗೆ ಅಭಿನಯಿಸುವ ಅನುಭವವೇ ವಿಶಿಷ್ಟವಾದದ್ದು. ಗುಂಜಾಲಮ್ಮ ಆ ದಿಸೆಯಲ್ಲಿ ಅತ್ಯಂತ ಸಹಜವಾಗಿ ನಟಿಸಿದ್ದಾರೆ’ ಎಂದು ಹೇಳಿದರು. ನಟರಾದ ಮಂಜುನಾಥ್ ಸಹ ಜತೆಗಿದ್ದರು.