ನಮಗೆಲ್ಲ ತಿಳಿದಿರುವ ಹಾಗೆ ಮಹಿಳೆಯರು ಸೌಂದರ್ಯ ಪ್ರಿಯರು ಅವರು ಒಂದಲ್ಲ ಒಂದು ರೀತಿಯ ಅಲಂಕಾರವನ್ನು ಮಾಡಿಕೊಳ್ಳುವುದರ ಮೂಲಕ ತನ್ನಲ್ಲಿನ ಸೌಂದರ್ಯಕ್ಕೆ ಇನ್ನೂ ಹೆಚ್ಚಿನ ಸೊಬಗನ್ನು ನೀಡುತ್ತಲೇ ಇರುತ್ತಾರೆ. ಅದರಂತಯೇ ಅವರು ಅಲಂಕಾರಕ್ಕಾಗಿ ಬಳಸುವ ಪ್ರತಿಯೊಂದು ಆಭರಣ, ವಸ್ತುಗಳು ತನ್ನದೇ ಆದ ಮಹತ್ವ ಮತ್ತು ಹಿನ್ನಲೆಯನ್ನು ಹೊಂದಿರುವುದನ್ನು ಗಮನಿಸಬಹುದಾಗಿದೆ. ಅದು ಬಳೆ, ಸರ, ಕಿವಿ ಓಲೆ, ಕಾಲ್ಗೆಜ್ಜೆ, ಸೊಂಟದ ಪಟ್ಟಿ, ಮುಗುತ್ತಿ ಹೀಗೆ ಇತ್ಯಾದಿ ಆಭರಣಗಳಿರಬಹುದು.
ಈ ಆಭರಣಗಳ ಜೊತೆ ಹೆಣ್ಣುಮಕ್ಕಳು ತುಂಬಾ ಇಷ್ಟಪಟ್ಟು ತನ್ನ ತಲೆಗೆ ಮುಡಿದುಕೊಳ್ಳುವ ಹೂವು ಮತ್ತು ಹೂವಿನ ಮಾಲೆಗೆ ತನ್ನದೇ ಆದ ಕೆಲವು ಹಿನ್ನಲೆ ಇರುವುದನ್ನು ಗಮನಿಸಬಹುದಾಗಿದೆ. ಈ ಹೂವು ಎನ್ನುವುದು ಎಲ್ಲಿ ಇರುತ್ತದೆಯೊ ಅಲ್ಲಿ ತನ್ನ ಛಾಪನ್ನು ಮೂಡಿಸಿಬಿಡುತ್ತದೆ. ಅದು ಗಿಡದ ಮೇಲೆ ಇರುವ ಹೂವಾಗಿರಬಹುದು, ದೇವರ ಮೇಲೆ ಹಾಕಿದ ಹೂವಾಗಿರಬಹುದು ಅಥವಾ ಜಡೆಗೆ ಮುಡಿದುಕೊಂಡ ಹೂವಾಗಿರಬಹುದು ಅದು ಎಲ್ಲಿ ಇರುತ್ತದೆಯೊ ಅಲ್ಲಿಂದಲೆ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವ ಹಾಗೆ ಮಾಡಿಬಿಡುತ್ತದೆ. ಹಾಗೆ ಗಮನ ಸೆಳೆಯಲು ಒಂದು ಅದರ ಪರಿಮಳ ಕಾರಣವಾದರೆ ಇನ್ನೊಂದು ಅದರ ಸೌಂದರ್ಯವೇ ಕಾರಣ.
ಈ ಹೂವುಗಳನ್ನು ಹೆಣ್ಣುಮಕ್ಕಳು ತಲೆಯ ಜಡೆಗೆ ಮುಡಿದುಕೊಂಡರೆ ಅವರ ಮುಖದ ಮತ್ತು ಜಡೆಯ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ. ಮೊದ ಮೊದಲು ಹೆಣ್ಣು ಮಕ್ಕಳು ಕಡ್ಡಾಯವಾಗಿ ಜಡೆಗಳಿಗೆ ಹೂವುಗಳನ್ನು ಮುಡಿಯಲೇಬೇಕು ಎಂಬ ಸಂಪ್ರದಾಯವಿತ್ತು.ಅದರಲ್ಲಿಯು ಮದುವೆಯಾದ ಹೆಣ್ಣುಮಕ್ಕಳು ಸಾಮಾನ್ಯವಾಗಿ ತಮ್ಮ ಜಡೆಗಳಲ್ಲಿ ಹೂಗಳನ್ನು ಮುಡಿಯುತ್ತಿದ್ದರು. ಈ ಜಡೆಗಳಲ್ಲಿ ಮುಡಿಯುವ ಒಂದೊಂದು ಹೂವು ಒಂದೊಂದರ ಸಂಕೇತ ಎಂದು ಭಾವಿಸುತ್ತಿದ್ದರು. ದಕ್ಷಿಣ ಭಾರತದಲ್ಲಿ ಇಂದಿಗೂ ಸ್ನಾನವಾದ ಕೂಡಲೆ ಹೂವನ್ನು ಮುಡಿಯುವ ಸಂಪ್ರದಾಯವಿದೆ.
ಈ ಹೂವುಗಳಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು ಇಷ್ಟಪಡುವ ಹೂವೆಂದರೆ ಮಲ್ಲಿಗೆ, ಸಂಪಿಗೆ, ಗುಲಾಬಿ, ಜಾಜಿ, ಸೇವಂತಿ, ಡೇರೆ ಇತ್ಯಾದಿಗಳು. ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು, ಮಲ್ಲಿಗೆಯನ್ನು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಬಳಸಲಾಗುತ್ತದೆ. ಮತ್ತು ಹೂವುಗಳನ್ನು ಹೆಣ್ಣು ಮಕ್ಕಳು ಮುಡಿಯುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಮತ್ತು ಲಕ್ಷ್ಮಿ ದೇವಿ ಸದಾ ಮನೆಯಲ್ಲಿಯೇ ನೆಲೆಸಿರುತ್ತಾಳೆ ಎಂಬ ನಂಬಿಕೆಯು ಇದೆ.
ಆದರೆ ಇಂದು ನೈಸರ್ಗಿಕ ಹೂವುಗಳ ಜೊತೆ ಜೊತೆ ಪ್ಲಾಸ್ಟಿಕ್ ಹೂವುಗಳು ಮಾರಾಟಕ್ಕೆ ಸಿಗುತ್ತವೆ. ನೈಸರ್ಗಿಕವಾದ ಹೂಗಳು ಸಿಗದೆ ಇದ್ದಾಗ ಪ್ಲಾಸ್ಟಿಕ್ ಹೂಗಳನ್ನು ಕೂಡ ತಲೆಗೆ ಮುಡಿದುಕೊಳ್ಳುವವರನ್ನು ನೋಡಬಹುದಾಗಿದೆ. ಅದರಲ್ಲಿಯೂ ತುಂಬಾ ವೈವಿಧ್ಯ ಮಯವಾದ ಹೂವುಗಳನ್ನು ತಯಾರಿಸಲಾಗುತ್ತದೆ. ಆದರೆ ಎಷ್ಟೇ ಚಂದವಾಗಿ ಬಣ್ಣಹಚ್ಚಿ ಏನೇ ತಯಾರಿಸಿದರು ನೈಜ ಹೂವಿನ ಸುವಾಸನೆ ಪ್ಲಾಸ್ಟಿಕ್ ಹೂವಿನಲ್ಲಿ ಸಿಗಲಾರದು. ನಿಸರ್ಗದಿಂದ ಪಡೆದ ತಾಜಾ ಹೂವನ್ನು ಮೂಡಿದಾಗ ಸಿಗುವ ಖುಷಿ ಪ್ಲಾಸ್ಟಿಕ್ ಹೂವಿನಿಂದ ಸಿಗಲಾರದು.
*ಮಧುರಾ ಎಲ್ ಭಟ್ಟ
ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ