ಜೋಹಾನ್ಸ್‌ಬರ್ಗ್: ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಬಾರ್, ರೆಸ್ಟೋರೆಂಟ್, ವೈನ್‌ಶಾಪ್, ಪಬ್‌ಗಳು ಬೀಗ ಹಾಕಿದ್ದರಿಂದ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯಪ್ರಿಯರು, ಮದ್ಯದಂಗಡಿ ಬಾಗಿಲು ತೆರೆದರೆ ಸಾಕಪ್ಪ ಎಂದು ದಿನವೂ ಬಯಸಿದ್ದುಂಟು.
ಕುಳಿತಲ್ಲಿ ಕುಳಿತುಕೊಳ್ಳಲಾರದೇ, ನಿಂತಲ್ಲಿ ನಿಲ್ಲಲಾರದೆ ಮದ್ಯಕ್ಕಾಗಿ ಚಾತಕಪಕ್ಷಿಯಂತೆ ಲಕ್ಷಾಂತರ ಮಂದಿ ಕಾಯುತ್ತಿದ್ದರು. ಈ ದೃಶ್ಯ ನಮ್ಮ ದೇಶದಲ್ಲಿ. ಆದರೆ ಆಫ್ರಿಕಾದಲ್ಲಿ ಇದಕ್ಕೆ ಸಂಪೂರ್ಣವಾಗಿ ಭಿನ್ನವಾದ ಸನ್ನಿವೇಶ. ಅಲ್ಲಿ ಮನೆಯಲ್ಲೇ ಮದ್ಯ ತಯಾರಿಕೆಯಲ್ಲಿ ತೊಡಗಿದ ಪರಿಣಾಮ, ಇದ್ದಕ್ಕಿದ್ದಂತೆ ಅನಾನಸ್ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಸೋಂಕು ನಿಯಂತ್ರಣ ಲಾಕ್‌ಡೌನ್‌ನಿಂದಾಗಿ ದೂರದ ದಕ್ಷಿಣ ಆಫ್ರಿಕಾದಲ್ಲೂ ಮದ್ಯಪ್ರಿಯರು ಮದ್ಯ ಸಿಗದೇ ಕಂಗಾಲಾಗಿದ್ದರು. ಬಳಿಕ ಜನರೇ ಮನೆಯಲ್ಲಿರುವ ಮದ್ಯದ ಕಿಕ್ ತರುವ ಪಾನೀಯ ತಯಾರಿಸಲು ಅನಾನಸ್ ಹಣ್ಣಿನ ಮೊರೆ ಹೋದರು. ಪರಿಣಾಮ ದಕ್ಷಿಣ ಆಫ್ರಿಕಾದಲ್ಲಿ ಅನಾನಸ್ ಮಾರಾಟ ಹತ್ತು ಪಟ್ಟು ಹೆಚ್ಚಾಗಿದೆ.
ಲಕ್ಷಕ್ಕೆ ಏರಿದ ಮಾರಾಟದ ಪ್ರಮಾಣ
ಈ ಹಿಂದೆ ಅನಾನಸ್ ದೈನಂದಿನ ಮಾರಾಟವು ಸರಾಸರಿ ಹತ್ತು ಸಾವಿರದಷ್ಟಿತ್ತು. ಈಗ ಒಂದು ಲಕ್ಷಕ್ಕೇರಿದೆ. ಲಾಕ್‌ಡೌನ್‌ನಿಂದಾಗಿ ಮನೆಗಳಲ್ಲೇ ಇರುವ ಉದ್ಯಮಿಗಳು ಹಾಗೂ ಇತರ ಜನರು ತಮ್ಮದೇ ದೇಸಿ ಶೈಲಿಯ ಮದ್ಯರೂಪದ ದ್ರವ್ಯವನ್ನು ರೂಪಿಸಲು ಅನಾನಸ್ ಖರೀದಿಗೆ ಮದ್ಯ ಪ್ರಿಯರು ಮುಗಿಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈಗಾಗಲೇ ಲಾಕ್‌ಡೌನ್ 46ನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಪ್ರದೇಶಗಳಲ್ಲಿ ಇನ್ನೂ ಹಲವು ತಿಂಗಳುಗಳ ವರೆಗೆ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ.