Advertisement

100 ಎಕ್ರೆಯಲ್ಲಿ 300 ಟನ್ ಬೆಳೆದ ಅನನಾಸಿಗೆ ಲಾಕ್‌ಡೌನ್ ಕುತ್ತು

10:30 AM Apr 18, 2020 | sudhir |

ಬೆಳ್ತಂಗಡಿ: ಶ್ರಮಜೀವಿ ರೈತನಿಗೆ ಬೆಳೆದ ಬೆಳೆಯಲ್ಲಿ ಪ್ರತಿ ಹಂತದಲ್ಲೂ ನಷ್ಟ ಸರ್ವೇಸಾಮಾನ್ಯ ಎಂಬಂತಾಗಿದೆ. ಇದರ ನಡುವೆ ಜಗತ್ತಿಗೆ ಆವರಿಸಿದ ಕೋವಿಡ್ ರೈತಾಪಿ ವರ್ಗವನ್ನು ಇನ್ನಿಲ್ಲದಂತೆ ಹೈರಾಣಾಗಿಸಿದೆ.

Advertisement

ಕೇರಳ ಎರ್ನಾಕುಲಂ ಮೂಲದ ಶೈಜು ಎನ್.ಪಿ. ಅಂಬುವವರು ಕಳೆದ 9 ವರ್ಷದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನನಾಸು ಬೆಳೆಯುತ್ತಿದ್ದು ಪ್ರಸಕ್ತ ಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ತೋಟತ್ತಡಿ, ಲಾಯಿಲ, ನೆರಿಯಾ, ನೆಕ್ಕರೆ, ಗುರಿಪಳ್ಳ ಸುತ್ತಮುತ್ತ 100 ಎಕ್ರೆಯಲ್ಲಿ ಅನನಾಸು ಬೆಳೆದಿದ್ದಾರೆ.

ಬ್ಯಾಂಕ್ ಸಹಿತ ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಸಲಾಮಾಡಿ ಸವಾಲಿನ ಕ್ಷೇತ್ರದಲ್ಲಿ 300 ಟನ್ ಅನನಾಸು ಉತ್ತಮ ಬೆಳೆ ಬೆಳೆದು ಕಟಾವಿಗೆ ಸಿದ್ಧವಾಗಿದೆ.

ಮಾರ್ಚ್, ಏಪ್ರಿಲ್ ಸೀಸನ್ ಅಗಿರುವ ಸಮಯದಲ್ಲೇ ಕೋವಿಡ್ ಮಹಾಮಾರಿಯ ಲಾಕ್‌ಡೌನ್‌ನಿಂದ ಖರೀದಿಗೆ ಯಾರೊಬ್ಬರೂ ಮುಂದಾಗದೆ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಸುಮಾರು 1.5೦ ಕೋಟಿ ನಷ್ಟದ ಹಾದಿ ಹಿಡಿದಿದ್ದಾರೆ.

ಮಾರುಕಟ್ಟೆ ಬಂದ್
ಅನನಾಸು ಮೋರಿಸ್, ರಾಜ, ರಾಣಿ ತಳಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಶೈಜು ಅವರು ಬೆಳೆಯುವ ಮೋರಿಸ್ ತಳಿಗೆ ದೆಹಲಿ, ಬ್ವಾಂಬೆ ಮಾರುಕಟ್ಟೆಯಲ್ಲಿ ಪ್ರಮುಖ ಬೇಡಿಕೆಯುತ್ತು. ಉಳಿದಂತೆ ಪೂಣೆ, ಇಂದೋರ್, ರಾಜಾಸ್ಥಾನ್, ಪಾಕಿಸ್ಥಾನ ಗಡಿ ವರೆಗೂ ರಫ್ತಾಗುತ್ತಿತ್ತು. ಪ್ರಸಕ್ತ ಖರೀದಿಗೆ ಜನ ಮುಂದಾಗದಿರುವುದರಿಂದ ರಾಜ್ಯ ಹಾಗೂ ಹೊರರಾಜ್ಯದ ಯಾವ ಮಾರುಕಟ್ಟೆಯಲ್ಲೂ ಬೇಡಿಕೆ ಇಲ್ಲ. ಪರಿಣಾಮ ಬೆಳೆದ ಬೆಳೆಯೊಂದಿಗೆ ರೈತನೂ ಸೊರಗುವಂತಾಗಿದೆ. ಸೀಸನ್ ಅವಧಿಯಲ್ಲಿ ಕೆ.ಜಿ.ಗೆ 40ರಿಂದ 45 ರೂ. ಮಾರಾಟವಾಗುತ್ತಿದ್ದುದು ಪ್ರಸಕ್ತ 15 ರಿಂದ 17 ರೂ.ಗೆ ಬೇಡಿಕೆ ಬರುತ್ತಿದೆ. ಕನಿಷ್ಠ ಪಕ್ಷ 30 ರೂ. ಸಿಕ್ಕರಷ್ಟೆ ಬೆಳೆದ ಬೆಳೆಗೆ ಸಮಾನಾಗಿ ಅಸಲು ಪಡೆಯಬಹುದು ಎಂದು ಶೈಜು ಹೇಳುತ್ತಾರೆ.

Advertisement

ಒಂದು ಫಸಲು ಪಡೆಯಲು 9 ತಿಂಗಳ ಶ್ರಮ
ಶೈಜು ಅವರು 9 ವರ್ಷದಿಂದ ಅನನಾಸು ಕೃಷಿಗೆ ಒಗ್ಗಿಕೊಂಡಿದ್ದು, 3 ವರ್ಷ ಲೀಝ್‌ಗೆ ಭೂಮಿ ಪಡೆದು ಬೆಳೆ ಬೆಳೆದಿದ್ದಾರೆ. 3 ವರ್ಷದಲ್ಲಿ ಮೂರು ಬೆಳೆ ಪಡೆಯಬಹುದಾಗಿದ್ದು, ಒಂದು ಬೆಳೆ ಪಡೆಯಲು 9 ತಿಂಗಳು ಶ್ರಮಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಎಕ್ರೆಗೆ 2.50 ಲಕ್ಷ ರೂ. ನಷ್ಟ ಅನುಭವಿಸಬೇಕಾಗಿ ಬಂದಿದೆ.

ಮೊದಲ ಬೆಳೆಯಲ್ಲಿ ಯಾವುದೇ ಲಾಭವಿಲ್ಲ. ಎರಡನೇ ಬೆಳೆಯಿಂದ ಬಳಿಕವಷ್ಟೆ ಲಾಭ. ಈ ನಡುವೆ ಕಾರ್ಮಿಕರ ಸಮಸ್ಯೆ, ಹಂದಿ, ಮಂಗಗಳ ಕಾಟ ಎಲ್ಲವನ್ನೂ ಎದುರಿಸಿ ಬೆಳೆದ ಬೆಳೆ ಇದೀಗ ಕೈಗೆ ಸಿಗದಂತಾಗಿದೆ.

ಉದಯವಾಣಿ ರೈತ ಸೇತು ಸಹಾಯ
ರೈತರ ಬೆಳೆಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಉದಯವಾಣಿ ಹೊರತಂದ ರೈತಸೇತುವಿನಲ್ಲಿ ಶೈಜು ಅವರು ಬೆಳೆದ ಅನನಾಸು ಬೆಳೆ ವಿವರ ನೀಡಲಾಗಿತ್ತು. 10ಕ್ಕೂ ಅಧಿಕ ಕರೆಗಳು ಸ್ಥಳೀಯವಾಗಿ ಬಂದಿವೆ. 100 ರಿಂದ 400 ಕ್ವಿಂಟಾಲ್ ವರೆಗೆ ಬೇಡಿಕೆ ಬಂದಿದೆ. ಸಧ್ಯ ಜೈಪುರದಿಂದ ಬೇಡಿಕೆ ಬಂದಿದ್ದು, ಮೊದಲ 15 ಟನ್ ಅನನಾಸು ಕಳುಹಿಸಲಾಗಿದೆ. ರಾಜ್ಯ ಸರಕಾರ ಈ ಕುರಿತು ಗಮನ ಹರಿಸಿ ಬೆಳೆಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಶೈಜು ಅಳಲು ತೋಡಿಕೊಂಡಿದ್ದಾರೆ.

–  ಚೈತ್ರೇಶ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next