ತಿರುವನಂತಪುರ: ಕೇರಳದ ಕಣ್ಣೂರಿನಲ್ಲಿ ಸ್ಥಾಪನೆ ಆಗಬೇಕಿದ್ದ ಕರಾವಳಿ ರಕ್ಷಣಾ ಪಡೆ ಅಕಾಡೆಮಿಯನ್ನು ಕರ್ನಾಟಕದ ಮಂಗಳೂರಿನ ಬೈಕಂಪಾಡಿಗೆ ವರ್ಗಾಯಿಸುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, “ಕೇಂದ್ರ ಸರಕಾರ ನ್ಯಾಯ ಸಮ್ಮತವಲ್ಲದ ಕ್ರಮ ಕೈಬಿಡಬೇಕು. ಇದು ಕೇರಳದ ಹಿತಾಸಕ್ತಿಗೆ ವಿರುದ್ಧ’ ಎಂದಿದ್ದಾರೆ. ಕೇರಳದಲ್ಲಿ ಅಕಾಡೆಮಿ ಸ್ಥಾಪನೆಗಾಗಿ ಈಗಾಗಲೇ 164 ಎಕರೆ ಭೂಮಿ ನೀಡಲಾಗಿದೆ. ಜತೆಗೆ 65.56 ಕೋಟಿ ರೂ.ಗಳನ್ನು ಮೂಲಸೌಕರ್ಯ ಒದಗಿಸುವುದಕ್ಕಾಗಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ಪತ್ರದಲ್ಲಿ ವಿವರಿಸಿದ್ದಾರೆ.
ಕಣ್ಣೂರಿನ ಇರಿನಿವ್ ಎಂಬಲ್ಲಿ ಸ್ಥಾಪನೆಯಾಗಲಿರುವ ಅಕಾಡೆಮಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವಾಲಯ ವಿರೋಧಿಸಿದ್ದು, “ಇಲ್ಲಿ ಮ್ಯಾಂಗ್ರೋವ್ ಹೇರಳವಾಗಿ ಬೆಳೆಯುವುದರಿಂದ ಸಮುದ್ರ ಕಿನಾರೆ ರಕ್ಷಣೆಗೆ ಅನುಕೂಲವಾಗುತ್ತಿದೆ. ಹೀಗಾಗಿ ಅಕಾಡೆಮಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ’ ಎಂದಿದೆ. ಅದಕ್ಕೂ ಪ್ರತಿಕ್ರಿಯಿಸಿರುವ ಸಿಎಂ ವಿಜಯನ್, ಪ್ರಸ್ತಾವಿತ 50 ಎಕರೆ ಪ್ರದೇಶದಲ್ಲಿ ಮ್ಯಾಂಗ್ರೋವ್ ಬೆಳೆಯುತ್ತಿಲ್ಲ. ಹೀಗಾಗಿ ಪ್ರಧಾನಿ ಈ ಅಂಶವನ್ನು ಪರಿಶೀಲಿಸಬೇಕು. ಅದನ್ನು ಪರಿಶೀಲನೆ ನಡೆಸಲು ಉನ್ನತ ಮಟ್ಟದ ತಂಡವನ್ನು ಕಳುಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಇರಿನಿವ್‌ನಿಂದ ಎಲೆಮಲೆ ನೌಕಾನೆಲೆಗೆ ಸಮೀಪ ಎಂಬ ಕಾರಣಕ್ಕೆ ಅಲ್ಲಿ ಜಮೀನು ನೀಡಲಾಗಿತ್ತು.
ಭೇಟಿ ನೀಡಿದ್ದ ರಕ್ಷಣಾ ಸಚಿವೆ: ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವೆ ನಿರ್ಮಲಾ ಸೀತಾರಾಮನ್ 2017ರ ಡಿ.10ರಂದು ಬೈಕಂಪಾಡಿ ಯಲ್ಲಿ ನಿರ್ಮಾಣವಾಗಲಿರುವ ಅಕಾಡೆಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಏನಿದು ಯೋಜನೆ?: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ ಅಕಾಡೆಮಿ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದರು. 2 ವರ್ಷಗಳಲ್ಲಿ ಯೋಜನೆ ಮುಕ್ತಾಯವಾಲಿದೆ ಎಂದು ಘೋಷಿಸಲಾಗಿತ್ತು. ಅದಕ್ಕಾಗಿ ಒಟ್ಟು 600 ಕೋಟಿ ರೂ. ಮೀಸಲಿರಿಸಲಾಗಿತ್ತು. 5 ವರ್ಷಗಳ ವರೆಗೆ ಯಾವುದೇ ಕಾಮಗಾರಿ ಆರಂಭವಾಗಿರಲಿಲ್ಲ. ಪರಿಸರಾತ್ಮಕ ಅಧ್ಯಯನದ ಬಳಿಕ ಯೋಜನೆಗೆ ಕರಾವಳಿ ನಿರ್ವಹಣಾ ಮಂಡಳಿ ಅನುಮೋದನೆ ಪಡೆಯಲು ಸೂಚಿಸಲಾಗಿತ್ತು.
600 ಕೋಟಿ ರೂ.: ಯೋಜನೆಗೆ ಮೀಸಲಾಗಿ ಇರಿಸಿದ್ದ ಮೊತ್ತ
02 ವರ್ಷ : ನಿಗದಿ ಮಾಡಲಾಗಿದ್ದ ಅವಧಿ
50ಎಕರೆ : ಅಕಾಡೆಮಿಗೆ ನಿಗದಿಯಾಗಿದ್ದ ಜಾಗ
164ಎಕರೆ : ಕೇರಳ ಸಿಎಂ ಪತ್ರದಲ್ಲಿ ಉಲ್ಲೇಖೀಸಿರುವ ಜಮೀನಿನ ಪ್ರಮಾಣ