Advertisement
ಪಾಂಗಾಳ, ಕೈಪುಂಜಾಲು, ಆಳಿಂಜೆ, ಮಟ್ಟು, ಬೊಮ್ಮನ ತೋಟ ಭಾಗದಲ್ಲಿ ಹರಿಯುತ್ತಿರುವ ಪಿನಾಕಿನಿ ಹೊಳೆಯ ಆಳ ಕಡಿಮೆ ಆಗಿದೆ. ಹೊಳೆಯ ನಡುವೆಯೇ ಭೂಪ್ರದೇಶವು ಮೂಡಿ ಬಂದಂತೆ ಕಂಡು ಬರುತ್ತಿದೆ. ಮತ್ತೂಂದೆಡೆಯಿಂದ ಮುನ್ನುಗ್ಗಿ ಬರುತ್ತಿರುವ ಹೊಳೆಯು ಹಂತ ಹಂತವಾಗಿ ರೈತರ ಜಮೀನುಗಳನ್ನು, ತೋಟವನ್ನೂ ಕಬಳಿಸುತ್ತಿದ್ದು ಅಪಾಯ ಕಟ್ಟಿಟ್ಟ ಬುತ್ತಿ ಎಂದು ತೀರ ನಿವಾಸಿಗಳಲ್ಲಿ ಆತಂಕದ ಜೊತೆಗೆ ಎಚ್ಚರಿಕೆಯ ಕರೆಗಂಟೆಯಾಗುತ್ತಿದೆ ಎನ್ನುತ್ತಿದ್ದಾರೆ.
Related Articles
Advertisement
ಅಪಾಯ ಕಟ್ಟಿಟ್ಟ ಬುತ್ತಿ
ಗದ್ದೆಗೆ ಹಾಕಲು ಹಿಂದಿನ ದಿನಗಳಲ್ಲಿ ಹೂಳನ್ನು (ಕೆಸರು) ಇತರೆಡೆಗಳ ರೈತರು ಕೊಂಡೊಯ್ಯುತ್ತಿದ್ದರು. ಈಗ ಸಿಆರ್‌ಝಡ್ ಎಂಬ ಗುಮ್ಮನ ಭೀತಿ ಬಾಧಿಸುತ್ತಿದೆ. ಜಿಲ್ಲಾಡಳಿತವು ಡ್ರೆಜ್ಜಿಂಗ್ ನಡೆಸಲೂ ಮುಂದಾಗುತ್ತಿಲ್ಲ. ಹಾಗಾಗಿ ಉಬ್ಬರದ ಸಂದರ್ಭ 10-15 ಅಡಿ ಆಳವನ್ನು ಹೊಂದಬೇಕಿದ್ದ ಹೊಳೆಯು ಈಗ ಕೇವಲ 2 ಅಡಿ ಮಾತ್ರ ಇದೆ. ಉಪ್ಪು ನೀರು ಎಲ್ಲೆಂದರಲ್ಲಿ ಮುನ್ನುಗ್ಗುತ್ತಿದ್ದು, ಕೃಷಿಕರ ಜಮೀನು, ವಸತಿ ಪ್ರದೇಶಗಳತ್ತ ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. –ರತ್ನಾಕರ ಕೋಟ್ಯಾನ್, ಸದಸ್ಯರು, ಕೋಟೆ ಗ್ರಾ.ಪಂ.
ಎಚ್ಚರಿಕೆಯ ಕರೆಗಂಟೆ
ಸುಮಾರು 8-10 ವರ್ಷಗಳಿಂದ ಪಿನಾಕಿನಿ ಹೊಳೆಯು ನಮ್ಮ ಕೃಷಿ, ತೋಟದ ಜಮೀನನ್ನು ಆಕ್ರಮಿಸಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೂ ತರಲಾಗಿದೆ. ಹೊಳೆಯ ನಡುವೆಯೇ ಭೂ ಪ್ರದೇಶ ನಿರ್ಮಾಣವಾಗಿದೆ. ತುಳ್ಳಿ ಗಿಡಗಳು ಸಹಿತ ಇತರೇ ಕಳೆ ಗಿಡಗಳೂ ಹೇರಳವಾಗಿ ಬೆಳೆದು ದಟ್ಟ ಕಾಡಿನಂತಾಗಿದೆ. ವಿಷಜಂತುಗಳ ಉಪಟಳವೂ ಇದೆ. ಬೆರಳೆಣಿಕೆಯ ವರ್ಷದಲ್ಲಿ ಬಹುತೇಕ ಜಮೀನುಗಳು ಮತ್ತಷ್ಟು ಪಿನಾಕಿನಿ ಪಾಲಾಗುವುದು ನಿಸ್ಸಂಶಯ. ಎಚ್ಚರಿಕೆಯ ಕರೆಗಂಟೆಯನ್ನು ನಿರ್ಲಕ್ಷಿಸಿದಲ್ಲಿ ಹೊಳೆಯಿಂದ ಆವೃತಗೊಂಡು ಗ್ರಾಮವೇ ನಾಶವಾಗುವ ಭೀತಿ ಇದೆ. –ಲಕ್ಷ್ಮಣ್ ಅಂಚನ್ ಮಟ್ಟು, ಪ್ರಗತಿಪರ ಕೃಷಿಕ
ಅಪಾರ ಹೂಳು
ಮನಸೋ ಇಚ್ಛೆ ಹರಿಯುವ ಪಿನಾಕಿನಿ ಹೊಳೆಯು ಕೃಷಿ ಜಮೀನಿನತ್ತ ಮುನ್ನುಗ್ಗಿ ಬರುತ್ತಿದೆ. ಹೊಳೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಹೊಳೆಯ ನಡುವೆ ನಡೆದಾಡಲು ಸಾಧ್ಯವಾಗುತ್ತಿದೆ. ಆದರೆ ದೋಣಿ ಸಾಗಲು ಅಸಾಧ್ಯವಾಗಿದೆ. ಪ್ರವಾಸೋದ್ಯಮಕ್ಕೂ ತೊಡಕುಂಟು ಮಾಡುತ್ತಿದ್ದು, ಬೋಟಿಂಗ್‌ಗೂ ಅಡೆತಡೆ ಉಂಟಾಗುತ್ತಿದೆ. –ಯಶೋಧರ, ಹರೀಶ್ ರಾಜು ಪೂಜಾರಿ, ಕೃಷಿಕರು, ಮಟ್ಟು
-ವಿಜಯ ಆಚಾರ್ಯ ಉಚ್ಚಿಲ